ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಜನ ಜಾಗೃತಿಗೆ ಶ್ರಮಿಸುವ ಪ್ರತಿಭೆ ಸುಜಾತಾ ಬಾಳಪ್ಪ

ಚಿಕ್ಕೋಡಿ ತಾಲ್ಲೂಕಿನ ಧುಳಗನವಾಡಿ ಗ್ರಾಮದ ಸುಜಾತಾ
Last Updated 6 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಬಡ ರೈತಾಪಿ ಕುಟುಂಬದ ಇವರು, ತನ್ನ ಬದುಕು ಕಟ್ಟಿಕೊಳ್ಳುವ ಜೊತೆಗೆ ಇತರರ ಬದುಕಿನ ಬದಲಾವಣೆಗೂ ನಾಂದಿ ಆಗಬೇಕು ಎಂಬ ಉದ್ದೇಶದಿಂದ ದಶಕದಿಂದ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲ್ಲೂಕಿನ ಧುಳಗನವಾಡಿ ಗ್ರಾಮದ ಸುಜಾತಾ ಬಾಳಪ್ಪ ಮಗದುಮ್ ಆ ಸಾಧಕಿ.

ಸ್ವಗ್ರಾಮದಲ್ಲಿ ಪ್ರಾಥಮಿಕ, ನವಲಿಹಾಳದಲ್ಲಿ ಪ್ರೌಢಶಾಲೆ ಮತ್ತು ಚಿಕ್ಕೋಡಿಯಲ್ಲಿ ಪದವಿ ಶಿಕ್ಷಣ ಪೂರೈಸಿದ ಸುಜಾತಾ, ಕಾಲೇಜು ಹಂತದಲ್ಲಿಯೇ ಎನ್ಎಸ್ಎಸ್ಸೇರಿಕೊಂಡು ಸಮುದಾಯ ಸೇವೆಗೆ ಅಣಿಯಾದರು.

ಮಹಿಳಾ ಸಬಲೀಕರಣಕ್ಕಾಗಿ ಗ್ರಾಮದಲ್ಲಿ ರೇಣುಕಾ ಸ್ವಸಹಾಯ ಗುಂಪು ಕಟ್ಟಿದ್ದಾರೆ. ಇಂದು ಆ ಗುಂಪು ಬಲಾಢ್ಯವಾಗಿ ಬೆಳೆದಿದೆ. ನೆಹರೂ ಯುವ ಕೇಂದ್ರದಲ್ಲಿ ರಾಷ್ಟ್ರೀಯ ಸೇವಾ ಕಾರ್ಯಕರ್ತೆಯಾಗಿ ಹಳ್ಳಿ ಹಳ್ಳಿಗಳಲ್ಲಿ ಅಲೆದಾಡಿ ಯುವಕರ ಸಂಘ, ಮಹಿಳಾ ಸಂಘಗಳನ್ನು ರಚಿಸಿ ಯುವಜನರ ಸಬಲೀಕರಣಕ್ಕಗಿ ಸರ್ಕಾರಿ ಇಲಾಖೆಗಳ ಸಹಯೋಗದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಶ್ರಮದಾನ, ಸ್ವಯಂ ಉದ್ಯೋಗ, ಗ್ರಾಮೀಣ ಕ್ರೀಡಾ ಚಟುವಟಿಕೆ, ರೈತರಿಗೆ ಕೃಷಿ ಮಾಹಿತಿ ನೀಡಿ ಜನಜಾಗೃತಿ ಮೂಡಿಸಿದ್ದಾರೆ. ಧುಳಗನವಾಡಿಯಲ್ಲಿ ರಂಗಕಲಾಶ್ರೀ ಗ್ರಾಮೀಣ ಸೇವಾ ಸಂಘ ಸ್ಥಾಪಿಸಿ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಹಿಳೆಯರಿಗೆ ಉಚಿತ ಕರಕುಶಲ ತರಬೇತಿ, ಕಂಪ್ಯೂಟರ್ ತರಬೇತಿ, ಸ್ವಯಂ ಉದ್ಯೋಗ ಕೈಗೊಳ್ಳಲು ಯುವಜನರಿಗೆ ತರಬೇತಿ ಕಾರ್ಯಾಗಾರ, ಯುವ ಸಂಘಗಳ ಸಬಲೀಕರಣ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದಾರೆ. ಭಕ್ತಿಗೀತೆ, ಭಾವಗೀತೆ, ಜನಪದಗೀತೆ, ಭಜನಾ ಪದಗಳ ಗಾಯನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಜಾತ್ರೆ, ಹಬ್ಬ, ಉತ್ಸವಗಳಲ್ಲಿ ಹಲವು ಕಲಾ ಪ್ರದರ್ಶನ ನೀಡಿ ಕಲಾಪ್ರೇಕ್ಷರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮಹಿಳಾ ಬೀದಿ ನಾಟಕ ತಂಡ ಕಟ್ಟಿ ವಾರ್ತಾ ಮತ್ತು ಪ್ರಚಾರ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮೊದಲಾದವುಗಳ ಸಹಯೋಗದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ, ಶಿಕ್ಷಣ, ನೀರು ನೈರ್ಮಲ್ಯ, ಪರಿಸರ, ಮತ್ತು ಮಳೆ ನೀರು ಸಂಗ್ರಹ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಬೀದಿನಾಟಕ ಪ್ರದರ್ಶಿಸಿ ಜನ ಜಾಗೃತಿ ಮೂಡಿಸಿದ್ದಾರೆ.

ಜಾನಪದ ಮೇಳ, ಯುವ ಕಲಾಮೇಳ, ಸಾಹಿತ್ಯಿಕ ಚಿಂತನ ಮಂಥನ, ಕವಿಗೋಷ್ಠಿಗಳನ್ನು ಹಮ್ಮಿಕೊಂಡು ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಿದ್ದಾರೆ. ಆಕಾಶವಾಣಿ ಧಾರವಾಡ, ನಮ್ಮೂರ ಬಾನುಲಿ ಕೇಂದ್ರ ಕರಗುಪ್ಪಿ ಬಸಾಪುರ, ವೇಣು ಧ್ವನಿ ಕೆ.ಎಲ್.ಇ, ಬೆಳಗಾವಿ ಬಾನುಲಿಯಲ್ಲಿ ಹಲವು ಚರ್ಚಾ ಗೋಷ್ಠಿ, ಕಿರುನಾಟಕ, ಜಾಗೃತಿ ಹಾಡುಗಳನ್ನು ಹಾಡಿ ಕಲೆ ಪಸರಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಗಳ ಸಂಘಟನೆಯಲ್ಲಿ ಯುವ ಪರಿವರ್ತಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಸೇವೆ ಪರಿಗಣಿಸಿ ನೆಹರೂ ಯುವ ಕೇಂದ್ರದಿಂದ 2014-15ನೇ ಸಾಲಿನಲ್ಲಿ ಜಿಲ್ಲಾ ಮಟ್ಟದ ಯುವ ಪ್ರಶಸ್ತಿ, ಕರುನಾಡ ಹಾಡುಗಾರರ ಬಳಗದ 100ನೇ ಸಂಚಿಕೆಯ ಕಾರ್ಯಕ್ರಮದಲ್ಲಿ ‘ಸಾಹಿತ್ಯ ಜೀವಿ ಪುರಸ್ಕಾರ’ ಜೊತೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT