ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನಗರದಲ್ಲಿ ‘ಅಮೃತ’ ಘಳಿಗೆಯ ಸಡಗರ

110 ಮೀಟರ್ ಎತ್ತರದ ಧ್ವಜಸ್ತಂಭದಲ್ಲಿ ರಾರಾಜಿಸಿದ 9,600 ಚದರ ಅಡಿಯ ಧ್ವಜ
Last Updated 14 ಆಗಸ್ಟ್ 2022, 4:11 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕೋಟೆ ಕೆರೆಯ ಮೈದಾನದಲ್ಲಿರುವ ದೇಶದ ಅತಿ ಎತ್ತರದ ಧ್ವಜಸ್ತಂಭದ ಮೇಲೆ ಶನಿವಾರ ಬೆಳಿಗ್ಗೆ ತ್ರಿವರ್ಣಧ್ವಜ ಹಾರಾಡಿತು.110 ಮೀಟರ್ ಎತ್ತರದ ಧ್ವಜಸ್ತಂಭದಲ್ಲಿ 9,600 ಚದರ ಅಡಿಯ ಧ್ವಜ ಏರುತ್ತಿದ್ದಂತೆ ಯುವ ಮನಸ್ಸುಗಳು ಜೈಕಾರ ಹಾಕಿದವು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಆಯೋಜಿಸಿದ್ದ ಮನೆಮನೆಗೂ ತ್ರಿವರ್ಣಧ್ವಜ ಅಭಿಯಾನದ ಭಾಗವಾಗಿ ಶಾಸಕ ಅನಿಲ ಬೆನಕೆ ಧ್ವಜಾರೋಹಣ ನೆರವೇರಿಸಿದರು.

ಬಾನಿನತ್ತ ಏರಿದ ಧ್ವಜವು ಗಾಳಿಯಲ್ಲಿ ಪದರುಬಿಚ್ಚಿ ಹಾರುತ್ತಿದ್ದಂತೆಯೇ ಕೆಳಗೆ ನಿಂತವರಲ್ಲಿ ರೋಮಾಂಚನ ಉಂಟಾಯಿತು. ಭಾರತ ಮಾತಾ ಕಿ ಜೈ, ವಂದೇ ಮಾತರಂ, ಮಾತಾಮಾತಾ ಭಾರತ ಮಾತಾ, ಜೈ ಜವಾನ್ ಜೈ ಕಿಸಾನ್ ಘೋಷಣೆಗಳು ನಿರಂತರ ಮಾರ್ದನಿಸಿದವು.

ವಿಧಾನ ಪರಿಷತ್ ಸದಸ್ಯರಾದ ಡಾ.ಸಾಬಣ್ಣ ತಳವಾರ, ಚನ್ನರಾಜ ಹಟ್ಟಿಹೊಳಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಅನೇಕ ಗಣ್ಯರು ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು, ಶಾಲೆ– ಕಾಲೇಜು ವಿದ್ಯಾರ್ಥಿಗಳೂ ಹಾಜರಿದ್ದರು.

ನಂತರ ಕೋಟೆಕೆರೆ ಆವರಣದಿಂದ ಚನ್ನಮ್ಮ ವೃತ್ತದವರೆಗೆ ಕಾಲ್ನಡಿಗೆ ಜಾಥಾ ಹಾಗೂ 75 ಮೀಟರ್ ಉದ್ದದ ತಿರಂಗಾ ಯಾತ್ರೆ ನಡೆಯಿತು. ಮಾರ್ಗದುದ್ದಕ್ಕೂ ರಾಷ್ಟ್ರಪ್ರೇಮದ ಗೀತೆಗಳು ಮೊಳಗಿದವು. ಯುವಜನರು ಘೋಷಣೆ ಮೊಳಗಿಸುತ್ತ ಈ ಜಾಥಾದಲ್ಲಿ ಪಾಲ್ಗೊಂಡರು. ಸುರಿಯುವ ಮಳೆಯಲ್ಲೂ ಉತ್ಸಾಹ ಕುಂದಲಿಲ್ಲ. ಹಲವು ಜನ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಪುಷ್ಪವೃಷ್ಠಿ ಮಾಡಿದರು.

ನದಿಯಲ್ಲೂ ಧ್ವಜ ಆಂದೋಲನ
ಚಿಕ್ಕೋಡಿ:
ತಾಲ್ಲೂಕಿನ ಯಡೂರ ಗ್ರಾಮದ ಕೃಷ್ಣಾ ನದಿಯಲ್ಲಿ ಬೋಟ್‌ನಲ್ಲಿ ತೆರಳಿದ ಯುವಕರು ರಾಷ್ಟ್ರಧ್ವಜವನ್ನು ಹಿಡಿದು ಸಂಚರಿಸಿ ಗಮನ ಸೆಳೆದರು.

ಯಾಂತ್ರಿಕ ಬೋಟ್‌ನಲ್ಲಿ ಸಾಗಿದ ಹಲವು ಯುವಕರು ಧ್ವಜ ಹಿಡುದುಕೊಂಡು, ಘೋಷಣೆ ಮೊಳಗಿಸಿದರು. ಪಿಕೆಪಿಎಸ್ ಸದಸ್ಯ ಸಚಿನ್‌ ಪಾಟೀಲ, ನಿವೃತ್ತ ಸಿಬಿಐ ಅಧಿಕಾರಿ ಶಿವಾಜಿ ಶಿಂಗಾಡೆ, ಬಸವರಾಜ ಪೂಜಾರಿ, ಅಡವಯ್ಯ ಅರಳಿಕಟ್ಟಿಮಠ, ಸಂತೋಷ ಗುರವ, ಬಸವರಾಜ ಅಮ್ಮಣಗಿ, ಸ್ವಪ್ನಿಲ್ ದಿವಟೆ, ರವಿ ಜಡೆ, ಅಮಿತ ಪುಠಾಣೆ, ಸಂಜು ವಾಳಕೆ, ವಿಜಯ ದಿವಟೆ, ಈರಯ್ಯ ಮಠಪತಿ, ಬಸವರಾಜ ಜಡೆ, ಅಂಕುಶ ತಾವದಾರೆ, ಬಸವರಾಜ ದಿವಟೆ, ಮಹಾಂತೇಶ ಕರೋಶಿ, ರಾಹುಲ್‌ ಕರೋಶಿ, ಮಹಾದೇವ ಅಮ್ಮಣಗಿ ರಾಷ್ಟ್ರಪ್ರೇಮ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT