ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ನೆರವಿನಲ್ಲಿ ನೇಕಾರರನ್ನು ಮರೆತ ಯಡಿಯೂರಪ್ಪ

Last Updated 20 ಮೇ 2021, 7:23 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್ 2ನೇ ಅಲೆಯ ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆರ್ಥಿಕ ಪರಿಹಾರ ಘೋಷಿಸದಿರುವುದು ಆ ವರ್ಗದವರ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೊನಾ ಹರಡದಂತೆ ತಡೆಯುವ ಉದ್ದೇಶದಿಂದ ಜವಳಿ ವ್ಯಾಪಾರ ವಹಿವಾಟು ನಡೆಸಲು ನಿರ್ಬಂಧಿಸಲಾಗಿದೆ. ಅದ್ಧೂರಿ ಮದುವೆಗಳು ನಡೆಯುತ್ತಿಲ್ಲ. ಹೀಗಾಗಿ, ಸೀರೆಗಳು ಮಾರಾಟವಾಗುತ್ತಿಲ್ಲ. ಮಗ್ಗಗಳು ಕಾರ್ಯನಿರ್ವಹಿಸುತ್ತಿಲ್ಲ. ಪರಿಣಾಮ, ನೇಕಾರರು ಕೂಡ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ, ಅವರ ನೆರವಿಗೆ ಬರುವ ಕೆಲಸವನ್ನು ಸರ್ಕಾರ ಮಾಡಿಲ್ಲ.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ (ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ), ಜವಳಿ ಸಚಿವ ಶ್ರೀಮಂತ ಪಾಟೀಲ ಅವರು ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶದಿಂದಲೇ ಬಂದಿದ್ದರೂ ಅವರ ಬವಣೆಗಳನ್ನು ಮನವರಿಕೆ ಮಾಡಿಕೊಟ್ಟು ಪರಿಹಾರ ಘೋಷಣೆ ಆಗುವಂತೆ ಮಾಡುವಲ್ಲಿ ವಿಫಲರಾದರೇ ಎನ್ನುವ ಅನುಮಾನವೂ ಆ ವರ್ಗದವರನ್ನು ಕಾಡುತ್ತಿದೆ.

ನೆಲಕಚ್ಚಿದ ಉದ್ಯಮ

ಕೋವಿಡ್ ಬಿಕ್ಕಟ್ಟಿನಿಂದಾಗಿ ನೇಕಾರಿಕೆ ಉದ್ಯಮ ನೆಲಕಚ್ಚಿದೆ. ಅದನ್ನೇ ನಂಬಿರುವ ಸಾವಿರಾರು ಕುಟುಂಬಗಳು, ಕೊರೊನಾ ಸೋಂಕು ನಿಯಂತ್ರಿಸಲು ಘೋಷಿಸಿರುವ ಲಾಕ್‌ಡೌನ್‌ನಿಂದಾಗಿ ಉದ್ಯೋಗವಿಲ್ಲದೆ ಕಂಗಾಲಾಗಿದ್ದಾರೆ. ಮಗ್ಗಗಳಲ್ಲಿ ನಿತ್ಯ ಕೂಲಿಕಾರರಾಗಿ ದುಡಿದು ಜೀವನ ನಿರ್ವಹಿಸುತ್ತಿದ್ದ ಸಹಸ್ರಾರು ಕೂಲಿ ಕಾರ್ಮಿಕರು ಬೀದಿಪಾಲಾಗಿದ್ದಾರೆ. ಸೀರೆಗಳು ಮತ್ತು ಬಟ್ಟೆಗಳನ್ನು ಖರೀದಿಸುವವರಿಲ್ಲದೆ ನೇಕಾರರ ಮನೆಗಳಲ್ಲಿಯೇ ಉಳಿದಿವೆ.

ಮಗ್ಗಗಳ ಬಳಿ ಅಥವಾ ನೇಕಾರರ ಮನೆಗಳಲ್ಲೇ ಸೀರೆ, ಖಣ ಮೊದಲಾದವುಗಳನ್ನು ಮಾರಾಟಕ್ಕೂ ಅವಕಾಶವಿಲ್ಲ. ಬೇರೆಡೆ ಸಾಗಣೆ ಮಾಡಿ ಮಾರುವುದಕ್ಕೂ ಸಾಧ್ಯವಾಗುತ್ತಿಲ್ಲ. ಗ್ರಾಹಕರು ಕೂಡ ಇಲ್ಲವಾಗಿದ್ದಾರೆ. ಇದರಿಂದ ನೇಕಾರಿಕೆ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಕಚ್ಚಾ ವಸ್ತುಗಳ ಪೂರೈಕೆ ಮೇಲೂ ಕೋವಿಡ್ ಕರಿನೆರಳು ಕವಿದಿದೆ. ಪರಿಣಾಮ ನೇಕಾರಿಕೆಯನ್ನೇ ನಂಬಿದವರು ಕಂಗಾಲಾಗಿದ್ದಾರೆ.

ಕಡೆಗಣಿಸಿರುವುದು ಸರಿಯಲ್ಲ

ಅಭಯ್‌ ಪಾಟೀಲ್‌
ಅಭಯ್‌ ಪಾಟೀಲ್‌

ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ನೇಕಾರರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಜಾನನ ಗುಂಜೇರಿ, ‘ಸರ್ಕಾರವು ನೊಂದ ನೇಕಾರ ಮನಸ್ಸುಗಳಿಗೆ ಸ್ಪಂದಿಸಲೇಬೇಕು. ಮೂರು ವರ್ಷಗಳಿಂದ ಒಂದಿಲ್ಲೊಂದು ಕಾರಣದಿಂದ ನೇಕಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆ ಹಾವಳಿ, ಅತಿವೃಷ್ಟಿ, ಬಳಿಕ ಕೋವಿಡ್ ಮೊದಲನೇ ಅಲೆಯ ಲಾಕ್‌ಡೌನ್‌ನಿಂದ ನೊಂದಿದ್ದೇವೆ. ಈ ವರ್ಷವೂ ಅದೇ ಪರಿಸ್ಥಿತಿ ಹೀಗಿರುವಾಗ ಸರ್ಕಾರ ಕಡೆಗಣಿಸಿರುವುದು ಸರಿಯಲ್ಲ’ ಎಂದು ಹೇಳಿದರು.

‘ನೇಕಾರ ಸಮುದಾಯಗಳ ನೋವುಗಳನ್ನು, ಅದರಲ್ಲೂ ಕೂಲಿ ಕೆಲಸ ಮಾಡುವ ಮತ್ತು ದುಡಿಯುವ ಶ್ರಮಿಕ ವರ್ಗವಾದ ಕೂಲಿ ನೇಕಾರರಿಗೆ ವಿಶೇಷ ನೆರವು ನೀಡದಿದ್ದರೆ ಮತ್ತೆ ಆತ್ಮಹತ್ಯೆಯ ಘಟನೆಗಳು ಸಂಭವಿಸುವುದರಲ್ಲಿ ಸಂದೇಹವಿಲ್ಲ. ದಯವಿಟ್ಟು ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ನಮಗೆ ಅನ್ಯಾಯವಾಗಿರುವ ವಿಷಯವನ್ನು ಶಾಸಕ ಅಭಯ ಪಾಟೀಲ ಅವರ ಗಮನಕ್ಕೆ ತಂದಿದ್ದೇವೆ. ಸರ್ಕಾರವು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಬೇಕು. ನೇಕಾರಿಕೆ, ಜವಳಿ ಉದ್ದಿಮೆ ಉಳಿಸಲು ವಿಶೇಷ ಪ್ಯಾಕೇಜ್ ಘೋಷಣೆ ಆಗುವವರೆಗೂ ಪ್ರಯತ್ನವನ್ನು ನಿರಂತರವಾಗಿ ನಡೆಸುತ್ತೇವೆ’ ಎಂದು ತಿಳಿಸಿದರು.

‘ಹೋದ ವರ್ಷ ನೋಂದಾಯಿತ ಘಟಕಗಳಿಗೆ ₹ 2ಸಾವಿರ ಕೊಟ್ಟಿದ್ದರು. ಅದರಲ್ಲೂ ಬಹಳಷ್ಟು ಮಂದಿಗೆ ದೊರೆತಿಲ್ಲ. ಕೂಲಿ ನೇಕಾರರಿಗೆ ಪರಿಹಾರ ಸಿಕ್ಕಿರಲಿಲ್ಲ. ರಾಜ್ಯದಲ್ಲಿ ಒಂದು ವರ್ಷದ ಅವಧಿಯಲ್ಲಿ 21 ಮಂದಿ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರಿಗೆ ಮಾತ್ರ ₹ 2 ಲಕ್ಷ ಪರಿಹಾರ ಸಿಕ್ಕಿದೆ. ಉಳಿದವರಿಗೆ ಬಂದಿಲ್ಲ’ ಎಂದು ಆರೋಪಿಸಿದರು.

ಅಭಯ ಪಾಟೀಲ ಅಸಮಾಧಾನ

ಸರ್ಕಾರದ ನಡೆಗೆ ಇಲ್ಲಿನ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿವಿಧ ವರ್ಗದವರಿಗೆ ಆರ್ಥಿಕ ಪ್ಯಾಕೇಜ್‌ ನೀಡಿರುವುದು ಸ್ವಾಗತಾರ್ಹ. ಆದರೆ, ಗಂಭೀರ ಪರಿಸ್ಥಿತಿಯಲ್ಲಿರುವ ನೇಕಾರರನ್ನು ಪರಿಗಣಿಸದಿರುವುದು ಖೇದಕರ ಸಂಗತಿ’ ಎಂದು ಹೇಳಿದ್ದಾರೆ.

‘ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ರೈತರು ಹಾಗೂ ನೇಕಾರರು ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದ್ದಿರಿ. ಅಂತೆಯೇ ಹಲವು ಸೌಲಭ್ಯಗಳನ್ನು ಕೊಡ ಮಾಡಿದ್ದೀರಿ. ಈಗ, ನೇಕಾರರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಅವರಿಗೂ ಪ್ಯಾಕೇಜ್‌ ಘೋಷಿಸಬೇಕು’ ಎಂದು ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

‘ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಬಾಗಲಕೋಟೆ ಜಿಲ್ಲೆಯವರೇ ಆದ ಗೋವಿಂದ ಕಾರಜೋಳ ಅವರು ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಈ ನಿಟ್ಟಿನಲ್ಲಿ ಗಮನಹರಿಸಬೇಕು. ನೇಕಾರರ ಆರ್ಥಿಕ ನೆರವು ಕೊಡಿಸಬೇಕು. ಕಚ್ಚಾ ಮಾಲು ಪೂರೈಕೆಗೆ ಸರ್ಕಾರ ವ್ಯವಸ್ಥೆ ಮಾಡಿದರೆ ಅನುಕೂಲ ಆಗುತ್ತದೆ’ ಎಂದು ಆಗ್ರಹಿಸಿದ್ದಾರೆ.

2019–20ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ನಡೆಸಿದ 4ನೇ ಕೈಮಗ್ಗ ಗಣತಿ ಪ್ರಕಾರ ರಾಜ್ಯದಲ್ಲಿ 29,377 ಕೈಮಗ್ಗಗಳಿವೆ. ಲಕ್ಷಾಂತರ ಮಂದಿ ಈ ಉದ್ಯಮ ಅವಲಂಬಿಸಿದ್ದಾರೆ. ಬೆಳಗಾವಿ ಜಿಲ್ಲೆಯೊಂದರಲ್ಲೇ 7 ಜಿನ್ನಿಂಗ್, 3 ಸ್ಪಿನ್ನಿಂಗ್ ಘಟಕಗಳು, 1,341 ಕೈಮಗ್ಗಗಳು ಹಾಗೂ 31,371 ವಿದ್ಯುತ್ ಮಗ್ಗಗಳಿವೆ. ಇವುಗಳನ್ನು 1.50 ಲಕ್ಷ ಮಂದಿ ಅವಲಂಬಿಸಿದ್ದಾರೆ.

4ನೇ ಕೈಮಗ್ಗ ಗಣತಿ ಮಾಹಿತಿ

ಜಿಲ್ಲೆ; ಸಂಖ್ಯೆ

ಬಾಗಲಕೋಟೆ: 6,319

ಬೆಂಗಳೂರು ನಗರ:1,184

ಬೆಂಗಳೂರು ಗ್ರಾಮಾಂತರ:194

ಬೆಳಗಾವಿ:1,341

ಬಳ್ಳಾರಿ:1,239

ಬೀದರ್:3,032

ವಿಜಯಪುರ:732

ಚಾಮರಾಜನಗರ:883

ಚಿಕ್ಕಬಳ್ಳಾಪುರ: 929

ಚಿಕ್ಕಮಗಳೂರು: 202

ಚಿತ್ರದುರ್ಗ: 3,132

ದಕ್ಷಿಣ ಕನ್ನಡ: 34

ದಾವಣಗೆರೆ: 130

ಧಾರವಾಡ: 368

ಗದಗ: 1,431

ಕಲಬುರ್ಗಿ: 358

ಹಾಸನ; 397

ಹಾವೇರಿ: 1,850

ಕೊಡಗು:60

ಕೋಲಾರ:170

ಕೊಪ್ಪಳ: 879

ಮಂಡ್ಯ:111

ಮೈಸೂರು:10

ರಾಯಚೂರು:15

ರಾಮನಗರ:65

ಶಿವಮೊಗ್ಗ:14

ತುಮಕೂರು:3,730

ಉಡುಪಿ: 37

ಉತ್ತರ ಕನ್ನಡ: 23

ಯಾದಗಿರಿ: 508

ಒಟ್ಟು: 29,377

(ಆಧಾರ:ಕೈಮಗ್ಗ ಮತ್ತು ಜವಳಿ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT