ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಯಿಂದ ಶಿಶು ಕಳವು: ಆರೋಪಿ ಬಂಧನ

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ತಂಡಕ್ಕೆ ಬಹುಮಾನ ಘೋಷಣೆ
Last Updated 21 ಸೆಪ್ಟೆಂಬರ್ 2022, 15:40 IST
ಅಕ್ಷರ ಗಾತ್ರ

ಅಥಣಿ: ಇಲ್ಲಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನವಜಾತ ಶಿಶು ಕಳವು ಮಾಡಿದ ಪ್ರಕರಣ ಭೇದಿಸಿದ ಪೊಲೀಸರು, ನಾಲ್ಕು ತಾಸುಗಳಲ್ಲಿ ಆರೋಪಿಯನ್ನು ಬಂಧಿಸಿ ಹಸುಳೆಯನ್ನು ತಾಯಿ ಮಡಿಲಿಗೆ ಸೇರಿಸಿದರು.

ಮಹಾರಾಷ್ಟ್ರದ ಮೀರಜ್‌ ತಾಲ್ಲೂಕಿನ ಮಹಿಶಾಳ ಗ್ರಾಮದ ಮಾಲಾ ಉರೂಫ್ ಐಶ್ವರ್ಯ ಕಾಂಬಳೆ ಬಂಧಿತ ಆರೋಪಿ. ಕಾಗವಾಡ ತಾಲ್ಲೂಕಿನ ಐನಾಪುರದ ಅಂಬಿಕಾ ಭೋವಿ ಅವರು ಮಂಗಳವಾರ ರಾತ್ರಿ ಗಂಡುಶಿಶುವಿಗೆ ಜನ್ಮ ನೀಡಿದ್ದರು. ಬುಧವಾರ ಬೆಳಿಗ್ಗೆ ನರ್ಸ್‌ ವೇಷ ಹಾಕಿಕೊಂಡು ಆಸ್ಪತ್ರೆ ಒಳಗೆ ಬಂದ ಮಾಲಾ; ಮಗುವನ್ನು ತೂಕ ಮಾಡಿಸಿ ತರುವುದಾಗಿ ಹೇಳಿ ಎತ್ತಿಕೊಂಡು ಹೋದರು. ತಾಸಿನ ನಂತರವೂ ಮರಳಿ ಬಾರದ ಕಾರಣ ಬಾಣಂತಿ ಹಾಗೂ ಪೋಷಕರು ಆಸ್ಪತ್ರೆಯ ವೈದ್ಯರಿಗೆ ತಿಳಿಸಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಆಸ್ಪತ್ರೆ ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಅಪರಿಚಿತ ಮಹಿಳೆಯೊಬ್ಬರು ನರ್ಸ್‌ ವೇಷದಲ್ಲಿ ಆಸ್ಪತ್ರೆ ಪ್ರವೇಶಿಸಿ, ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದು ಕ್ಯಾಮೆರಾದಲ್ಲಿ ದಾಖಲಾಗಿತ್ತು. ಇದನ್ನು ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ನಾಲ್ಕು ತಾಸಿನಲ್ಲಿ ಮಗುವಿನ ಸಮೇತ ಆರೋಪಿಯನ್ನು ಪತ್ತೆ ಮಾಡಿದರು.

‘ಆರೋಪಿ ಮಹಿಳೆ ಮಹಿಶಾಳ ಗ್ರಾಮದ ವ್ಯಕ್ತಿಯನ್ನು ಮದುವೆಯಾಗಿದ್ದರೂ, ಅಥಣಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಈ ಜಾಡು ಕಾರ್ಯಾಚರಣೆಗೆ ನೆರವಾಯಿತು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.

ಪೊಲೀಸರಿಗೆ ಬಹುಮಾನ: ಮಗುವನ್ನು ಮರಳಿ ತಾಯಿ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾದ ಅಥಣಿ ಹಾಗೂ ಕಾಗವಾಡ ಪೊಲೀಸರ ಕಾರ್ಯಾಚರಣೆ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಅವರು, ಕಾರ್ಯಾಚರಣೆಯ ಪ್ರತಿ ಹಂತವವನ್ನೂ ನಿರ್ದೇಶಿಸಿದರು. ಅಲ್ಲದೇ, ಈ ತಂಡದ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ ಸೂದ್‌ ಅವರು ₹ 20 ಸಾವಿರ ನಗದು ಬಹುಮಾನ ನೀಡಿದರು.

ಡಿಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೊಡಿ, ಪಿಎಸ್ಐ ಶಿವಶಂಕರ ಮುಖರಿ, ಕಾಗವಾಡ ಪಿಎಸ್ಐ ಬಿ.ಎಂ.ರಭಕವಿ, ಸಿಬ್ಬಂದಿಯಾದ ಮಹಾಂತೇಶ ಪಾಟೀಲ, ಪುರೋಷತಮ ನಾಯ್ಕ, ಐ.ಐ.ಇರಕರಿ, ಜಮೀರ ಡಾಂಗೆ ಕಾರ್ಯಾಚರಣೆಯಲ್ಲಿ ಇದ್ದರು.

ಸುರಕ್ಷತೆಯೇ ಸವಾಲು: ತಾಲ್ಲೂಕು ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಇದ್ದೂ ಇಲ್ಲದಂತಾಗಿದೆ. ಮಹಿಳೆಯೊಬ್ಬರು ನರ್ಸ್‌ ವೇಷ ಹಾಕಿಕೊಂಡು ನಿರಾಯಾಸವಾಗಿ ಒಳಗೆ ಹೋದರೂ ಭದ್ರತಾ ಸಿಬ್ಬಂದಿ ಪ್ರಶ್ನೆ ಮಾಡಿಲ್ಲ. ಮಹಿಳೆ ಮಗು ಎತ್ತಿಕೊಂಡು ಹೊರ ಹೋಗುವಾಗಲೂ ಯಾರೊಬ್ಬರೂ ಕೇಳಿಲ್ಲ. ಆಸ್ಪತ್ರೆಯ ಭದ್ರತಾ ಲೋಪದಿಂದಾಗಿಯೇ ಮಗು ಕಳ್ಳತನವಾಗಿದೆ ಎಂದು ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ. ಹಗಲಿನಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದುದರಿಂದ ಮಗು ಮರಳಿ ಸಿಕ್ಕಿದೆ. ಇಂಥದ್ದೇ ಕಳ್ಳತನ ರಾತ್ರಿ ನಡೆದಿದ್ದರೆ ಯಾರು ಹೊಣೆ ಎಂಬುದು ರೋಗಿಗಳ ಸಂಬಂಧಿಕರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT