ಭಾನುವಾರ, ಆಗಸ್ಟ್ 25, 2019
20 °C

ಜಿಲ್ಲೆಯಾದ್ಯಂತ ಬಕ್ರೀದ್ ಸರಳ ಆಚರಣೆ

Published:
Updated:
Prajavani

ಬೆಳಗಾವಿ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಮರು ಸೋಮವಾರ ಸರಳವಾಗಿ ಆಚರಿಸಿದರು. ಪ್ರವಾಹದಿಂದಾಗಿ ಸಂಕಷ್ಟಕ್ಕೆ ಒಳಗಾದವರಿಗೆ ಒಳಿತಾಗಲೆಂದು ಪ್ರಾರ್ಥಿಸಿದರು.

ಇಲ್ಲಿನ ನ್ಯಾಯಾಲಯ ಆವರಣ ಪಕ್ಕದಲ್ಲಿರುವ ಅಂಜುಮನ್–ಎ–ಇಸ್ಲಾಂ ಈದ್ಗಾ ಮೈದಾನಕ್ಕೆ ವಿವಿಧ ಬಡಾವಣೆಗಳಿಂದ ನೂರಾರು ಮಂದಿ ಮೆರವಣಿಗೆಯಲ್ಲಿ ಬಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನ್ಯಾಯಾಲಯದ ಪಕ್ಕ, ಬಿಮ್ಸ್‌ ಹಾಗೂ ಜಿಲ್ಲಾಸ್ಪತ್ರೆ ಎದುರಿನ ದ್ವಾರದಿಂದ ಮೈದಾನಕ್ಕೆ ತೆರಳಿದ ಅವರು, ಒಳಿತಿಗಾಗಿ ಪ್ರಾರ್ಥಿಸಿದರು. ಕೆಲಕಾಲ ತುಂತುರು ಮಳೆಯೂ ಬಿದ್ದಿತು.

ಮುಫ್ತಿ ಅಬ್ದುಲ್ ಅಜೀಜ್ ಖಾಜಿ, ಮುಫ್ತಿ ಮಂಜೂರ್‌ ಸಾಬ್‌ ಹಬ್ಬದ ಸಂದೇಶ ನೀಡಿದರು. ‘ಇಸ್ಲಾಂ ಧರ್ಮದ ಮೂಲ ಸಂದೇಶವಾದ ಶಾಂತಿ– ಸೌಹಾರ್ದವನ್ನು ಎಲ್ಲರೂ ಕಾಪಾಡಬೇಕು. ಕಷ್ಟದಲ್ಲಿರುವವರಿಗೆ ನೆರವಾಗಬೇಕು. ಎಲ್ಲರೂ ನಮ್ಮವರೆಂದು ಭಾವಿಸಬೇಕು. ಎಲ್ಲ ಧರ್ಮಗಳ ಸಾರವೂ ಇದೇ ಆಗಿದೆ’ ಎಂದು ತಿಳಿಸಿದರು.

ಬಳಿಕ, ಎಲ್ಲರೂ ಪಕ್ಕದಲ್ಲಿದ್ದ ಬಂಧುಗಳು, ಸ್ನೇಹಿತರನ್ನು ಆಲಂಗಿಸಿಕೊಂಡು ‘ಈದ್ ಮುಬಾರಕ್’ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಕಾಂಗ್ರೆಸ್‌ ಮುಖಂಡರಾದ ಫಿರೋಜ್‌ ಸೇಠ್‌, ರಾಜು ಸೇಠ್‌ ಎಲ್ಲರಿಗೂ ಶುಭಾಶಯ ಕೋರಿದರು.

ಈದ್ಗಾ ಮೈದಾನ ಸುತ್ತಮುತ್ತಲಿನ ರಸ್ತೆಬದಿಯಲ್ಲಿ ಆಟಿಕೆಗಳ ವ್ಯಾಪಾರ ಜೋರಾಗಿತ್ತು. ಪೋಷಕರೊಂದಿಗೆ ಬಂದಿದ್ದ ಮಕ್ಕಳು ಆಟಿಕೆ ಖರೀದಿಸಿ, ಸಂಭ್ರಮಿಸಿದರು.

ಕಿಲ್ಲಾ ಮಸೀದಿ, ರೈಲು ನಿಲ್ದಾಣ ಸಮೀಪದ ಈದ್ಗಾ ಮೈದಾನ, ಟಿಳಕವಾಡಿ, ವಡಗಾವಿ ಹಾಗೂ ಅಲಾರವಾಡ ಈದ್ಗಾ ಮೈದಾನಗಳಲ್ಲೂ ಆ ಭಾಗದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.

ಈದ್ಗಾ ಮೈದಾನಗಳ ಬಳಿ, ಪ್ರಮುಖ ವೃತ್ತ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

Post Comments (+)