ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮತೋಲನ ಆಹಾರದಿಂದ ಸದೃಢ ಆರೋಗ್ಯ’

ವೀರಶೈವ ಮಹಾಸಭೆಯಲ್ಲಿ ವಿಶೇಷ ಉಪನ್ಯಾಸ
Last Updated 5 ಆಗಸ್ಟ್ 2019, 16:34 IST
ಅಕ್ಷರ ಗಾತ್ರ

ಬೆಳಗಾವಿ: ‘ಸದೃಢ ಆರೋಗ್ಯ ಮಾತ್ರ ನಮ್ಮ ಬದುಕಿನ ದಿಕ್ಕು ಬದಲಿಸಲು ಸಾಧ್ಯ ಎನ್ನುವುದು 12ನೇ ಶತಮಾನದ ಶರಣರ ವಚನಗಳಿಂದ ತಿಳಿದುಬರುತ್ತದೆ’ ಎಂದು ಜೆಎನ್‌ಎಂಸಿಯ ಡಾ.ಅವಿನಾಶ ಕವಿ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ಶ್ರಾವಣ ಅಮವಾಸ್ಯೆ ಕಾರ್ಯಕ್ರಮದಲ್ಲಿ ‘ಶರಣರ ವಚನಗಳಲ್ಲಿ ಆರೋಗ್ಯ ಪರಿಕಲ್ಪನೆ’ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

‘ಶರಣರು ವಚನಗಳಲ್ಲಿ ಜೀವನ ಶೋಧನೆ ಮಾಡಿದ್ದಾರೆ. ಆತ್ಮ ನಿವೇದನೆ ವಚನಗಳ ಮುಖ್ಯ ತಿರುಳಾಗಿದೆ. ಆರೋಗ್ಯ ವಿಜ್ಞಾನ ಕುರಿತು ಕೂಡ ಹಲವು ವಚನಕಾರರು ವಿಶೇಷ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಅಕ್ಕಮಹಾದೇವಿಯು ಆಹಾರ ಕಿರಿದು ಮಾಡಿರಯ್ಯ, ಆಹಾರ ಕಿರಿದು ಮಾಡಿರಯ್ಯ ಎನ್ನುವ ಮೂಲಕ ಸಮತೋಲನ ಆಹಾರ ಮಾತ್ರ ವ್ಯಕ್ತಿಯನ್ನು ಸದೃಢರನ್ನಾಗಿ ಮಾಡಲು ಸಾಧ್ಯವೆಂದು ಹೇಳಿದ್ದಾಳೆ. ವೈದ್ಯ ಸಂಗಣ್ಣನೆಂಬ ಶರಣ ಮನುಷ್ಯ ದೇಹದ ಸಾವಿರಾರು ನಾಡಿಗಳು ಹಾಗೂ ರೋಗರುಜಿನಗಳ ಬಗ್ಗೆ ಹೇಳುವುದರೊಂದಿಗೆ ಉತ್ತಮ ಆರೋಗ್ಯದ ಸೂತ್ರಗಳನ್ನು ನೀಡಿದ್ದಾರೆ’ ಎಂದರು.

‘ಇಂದಿನ ಒತ್ತಡ ಬದುಕಿನಲ್ಲಿ ವಿಷಯುಕ್ತ ಆಹಾರ ಸೇವಿಸುವ ಮೂಲಕ ದೇಹದ ಸಮತೋಲನ ಕಳೆದುಕೊಂಡಿದ್ದೇವೆ. ನಮಗೆ ರುಚಿ ಗೊತ್ತಿದೆಯೇ ಹೊರತು ಆಹಾರದ ಅಭಿರುಚಿ ತಿಳಿದಿಲ್ಲ. ದೇಹ ಮನಸ್ಸುಗಳ ನಡುವೆ ಅವಿನಾಭಾವ ಸಂಬಂಧವಿದೆ. ನಾವು ಸೇವಿಸುವ ಆಹಾರದಿಂದ ಭಾವನೆಗಳು ಬದಲಾಗುತ್ತವೆ. ಆಹಾರ ಮತ್ತು ಮನಸ್ಸಿಗೂ ನಿಕಟ ಸಂಬಂಧವಿದೆ. ಸಾತ್ವಿಕ ಆಹಾರ ಮತ್ತು ನಡೆ–ನುಡಿ ಮಾತ್ರ ಆರೋಗ್ಯಯುಕ್ತ ಜೀವನ ನಡೆಸಲು ಅನುಕೂಲ ಮಾಡಿಕೊಡುತ್ತದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ‘ಒತ್ತಡಗಳ ಶಮನಕ್ಕೆ ವಚನಕಾರರ ವಿಚಾರಗಳು ಸಂಜೀವಿನಿಯಾಗಿವೆ’ ಎಂದರು.

ವಚನ ರಚನೆ ಸ್ಪರ್ಧೆ ವಿಜೇತರಿಗೆ ಮಹಾಸಭಾ ಪ್ರಧಾನ ಕಾರ್ಯದರ್ಶಿ ಕಲ್ಯಾಣರಾವ್ ಮುಚಳಂಬಿ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರಗಳನ್ನು ವಿತರಿಸಿದರು.

ಜಿಲ್ಲಾ ಘಟಕದ ಕಾರ್ಯದರ್ಶಿಗಳಾದ ಸೋಮಲಿಂಗ ಮಾವಿನಕಟ್ಟಿ, ಡಾ.ಎಫ್.ವಿ. ಮಾನ್ವಿ, ಡಾ.ಗುರುದೇವಿ ಹುಲೆಪ್ಪನವರಮಠ, ಬಸವರಾಜ ತರಗಾರ ಇದ್ದರು.

ಶೈಲಜಾ ಸಂಸುದ್ದಿ ವಚನ ಪಠಣ ಮಾಡಿದರು. ಆರ್.ಕೆ. ನೀರ್ಲಿ ನಿರೂಪಿಸಿದರು. ಜ್ಯೋತಿ ಭಾವಿಕಟ್ಟಿ ಸ್ವಾಗತಿಸಿದರು. ವಕೀಲ ವಿ.ಕೆ. ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT