ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್ ನೌಕರರ ಮುಷ್ಕರ: ಗ್ರಾಹಕರ ಪರದಾಟ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ
Last Updated 31 ಜನವರಿ 2020, 11:05 IST
ಅಕ್ಷರ ಗಾತ್ರ

ಬೆಳಗಾವಿ: ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಸ್ವಾಮ್ಯದ ವಿವಿಧ ಬ್ಯಾಂಕ್‌ ನೌಕರರ ಸಂಘಟನೆಗಳು ದೇಶದಾದ್ಯಂತ ಕರೆ ನೀಡಿರುವ ಮುಷ್ಕರಕ್ಕೆ ಇಲ್ಲಿನ ಬ್ಯಾಂಕ್‌ ನೌಕರರ ಸಂಘಟನೆ ಸದಸ್ಯರು ಬೆಂಬಲ ಸೂಚಿಸಿ, ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರಮುಖ ಬ್ಯಾಂಕ್‌ಗಳಾದ ಕೆನರಾ ಬ್ಯಾಂಕ್‌, ಸಿಂಡಿಕೇಟ್‌ ಬ್ಯಾಂಕ್‌, ಯೂನಿಯನ್‌ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಮೊದಲಾದ ಬ್ಯಾಂಕ್‌ಗಳ ಸಿಬ್ಬಂದಿ ಕಾರ್ಯನಿರ್ವಹಿಸಲಿಲ್ಲ. ಹಲವು ಬ್ಯಾಂಕ್‌ಗಳ ಶಾಖೆಗಳು ವ್ಯವಹಾರ ಬಂದ್ ಮಾಡಿದ್ದರಿಂದ, ಸಂಬಂಧಿಸಿದ ಗ್ರಾಹಕರು ತೊಂದರೆ ಅನುಭವಿಸಿದರು.

ಇಲ್ಲಿನಧರ್ಮವೀರ ಸಂಭಾಜಿ ವೃತ್ತದಲ್ಲಿ ಸಮಾವೇಶಗೊಂಡ ನೌಕರರು, ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ, ಖಡೇಬಜಾರ್, ಗಣಪತಿ ಗಲ್ಲಿ ಮೂಲಕ ಮಾರುತಿ ಗಲ್ಲಿಯ ಫೆಡರಲ್‌ ಬ್ಯಾಂಕ್‌ವರೆಗೆ ಮೆರವಣಿಗೆ ನಡೆಸಿದರು.

‘ವೇತನವನ್ನುಶೇ. 20ರಷ್ಟು ಹೆಚ್ಚಿಸಬೇಕು. ಎನ್‌ಪಿಎಸ್‌ (ನೂತನ ಪಿಂಚಣಿ ಯೋಜನೆ) ರದ್ದುಪಡಿಸಬೇಕು.ವಾರಕ್ಕೆ ಐದು ದಿನ ಕೆಲಸದ ಅವಧಿಯನ್ನು ನಿಗದಿಪಡಿಸಬೇಕು. ವಿಶೇಷ ಭತ್ಯೆಯನ್ನು ಮೂಲ ವೇತನಕ್ಕೆ ಸೇರ್ಪಡೆಗೊಳಿಸಬೇಕು. ಪಿಂಚಣಿ ಪರಿಷ್ಕರಿಸಬೇಕು, ಕುಟುಂಬ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕೇಂದ್ರ ಸರ್ಕಾರ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆಯನ್ನು ಕೈಬಿಡಬೇಕು’ ಎಂದು ಹಕ್ಕೊತ್ತಾಯ ಮಂಡಿಸಿದರು.

ನೌಕರರ ಸಂಘದ ಏಕನಾಥ ಜಿ., ಪ್ರಾನ್ಸಿಸ್‌ ಪರನಾಂಡಿಸ್‌, ಶರದ್ ಕರಗೂಪ್ಪಿಕರ, ನಾರಾಯಣ ಕರ್ವೆ, ವಿನೋದ ಕುಮಾರ, ಸುಧೀರ ಚಿಕ್ಕೋಡಿ, ಲಕ್ಷ್ಮಿ ನಾರಾಯಣ, ವಿದ್ಯಾ ನಾಯಕ ಪಾಲ್ಗೊಂಡಿದ್ದರು.

ಮುಷ್ಕರದ ವಿಷಯ ತಿಳಿಯದೇ ಬ್ಯಾಂಕ್‌ಗೆ ಬಂದಿದ್ದ ಗ್ರಾಮೀಣ ಭಾಗದ ಜನರು, ಬರಿಗೈಲಿ ವಾಪಸ್‌ ಹೋಗುತ್ತಿದ್ದ ದೃಶ್ಯ ಕಂಡುಬಂತು. ಹಲವು ಎಟಿಎಂಗಳಲ್ಲಿ ಹಣ ಲಭ್ಯವಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT