ಗುರುವಾರ , ನವೆಂಬರ್ 21, 2019
21 °C

‘ಬ್ಯಾಂಕ್‌ಗಳ ವಿಲೀನದಿಂದ ಸದೃಢ ಅರ್ಥ ವ್ಯವಸ್ಥೆ ಸಾಧ್ಯ’

Published:
Updated:

ಬೆಳಗಾವಿ: ‘ಸಣ್ಣ ಬ್ಯಾಂಕ್‌ಗಳು ಆರ್ಥಿಕವಾಗಿ ಸದೃಢವಾಗಿರುವ ಬ್ಯಾಂಕ್‌ಗಳಲ್ಲಿ ವಿಲೀನಗೊಳ್ಳುವುದರಿಂದ ಸದೃಢ ಅರ್ಥ ವ್ಯವಸ್ಥೆ ಹೊಂದಲು ಸಾಧ್ಯವಾಗುತ್ತದೆ’ ಎಂದು ಪ್ರೊ.ಆರ್‌.ಎಂ. ತೇಲಿ ಹೇಳಿದರು.

ಇಲ್ಲಿನ ಮರಾಠಾ ಮಂಡಳ ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಗೃಹವಿಜ್ಞಾನ ಕಾಲೇಜಿನಲ್ಲಿ ಈಚೆಗೆ ನಡೆದ ‘ಬ್ಯಾಂಕ್‌ಗಳ ವಿಲೀನ: ಸಾಧಕ–ಬಾಧಕ’ಗಳ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಸರ್ಕಾರವು ಎಲ್ಲ ಸಣ್ಣ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಮೂಲಕ ಬಲಿಷ್ಠ ಬ್ಯಾಂಕಿಂಗ್ ವ್ಯವಸ್ಥೆ ಸಾಧಿಸಬೇಕು’ ಎಂದರು.

‘ಪ್ರಸ್ತುತ ಸಣ್ಣ ಬ್ಯಾಂಕ್‌ಗಳು ಆರ್ಥಿಕವಾಗಿ ದಿವಾಳಿಯಾಗುತ್ತಿವೆ. ಸಾಲ ಮರುಪಾವತಿ ಸಕಾಲದಲ್ಲಿ ಆಗುತ್ತಿಲ್ಲ. ಅರ್ಥ ವ್ಯವಸ್ಥೆಯಲ್ಲಿ ಹಣದ ಹರಿವಿನ ಪ್ರಮಾಣ ಕಡಿಮೆಯಾಗುತ್ತಿದೆ. ವಿಜಯ ಮಲ್ಯ ಮತ್ತು ನೀರವ್‌ ಮೋದಿ ಅವರಂತಹ ವ್ಯಕ್ತಿಗಳು ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಬ್ಯಾಂಕ್‌ಗಳಿಗೆ ವಂಚಿಸಿ ವಿದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. ಇದರಿಂದಾಗಿ, ಸಾಲ ನೀಡಿದ ಬ್ಯಾಂಕ್‌ಗಳು ದಿವಾಳಿ ಅಂಚಿನಲ್ಲಿವೆ. ಇಂತಹ ಸಾಲಗಾರರಿಂದ ಜನಸಾಮಾನ್ಯರು ತಮ್ಮ ಹಣ ಕಳೆದುಕೊಳ್ಳುವುದಷ್ಟೇ ಅಲ್ಲದೇ, ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಜನರ ನಂಬಿಕೆ ಕಡಿಮೆಯಾಗುತ್ತದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಸಾಲ ಪಡೆದು ವಂಚಿಸುವುದನ್ನು ತಡೆಯಲು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕು. ಸಣ್ಣ ಹಾಗೂ ಅಶಕ್ತ ಬ್ಯಾಂಕ್‌ಗಳನ್ನು ಬಲಿಷ್ಠ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸಿ ವಿಶ್ವದರ್ಜೆಯ ಬ್ಯಾಂಕ್‌ಗಳನ್ನು ಸ್ಥಾಪಿಸಬೇಕು’ ಎಂದು ಸಲಲಹೆ ನೀಡಿದರು.

ಕಾಲೇಜಿನ ಪ್ರಾಚಾರ್ಯ ಡಾ.ವಿ.ಬಿ. ಪವಾರ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ಬಿ.ವೈ. ಬೆನ್ನಾಳಕರ, ಡಾ.ಎಚ್.ಜೆ. ಮೋಳೆರಕಿ, ಪ್ರೊ.ಅರ್ಚನಾ ಭೋಸಲೆ, ಪ್ರೊ.ಮನೋಹರ ಪಾಟೀಲ ಇದ್ದರು.

 

ಪ್ರತಿಕ್ರಿಯಿಸಿ (+)