ಬ್ಯಾಂಕುಗಳು ಕನ್ನಡದಲ್ಲೇ ವ್ಯವಹಾರ ನಡೆಸಬೇಕು

ಗುರುವಾರ , ಜೂಲೈ 18, 2019
28 °C
ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಸೂಚನೆ

ಬ್ಯಾಂಕುಗಳು ಕನ್ನಡದಲ್ಲೇ ವ್ಯವಹಾರ ನಡೆಸಬೇಕು

Published:
Updated:
Prajavani

ಬೆಳಗಾವಿ: ‘ಪಾಸ್‌ಬುಕ್, ರಸೀತಿ, ಸಾಲಸೌಲಭ್ಯದ ಅರ್ಜಿ, ಕರಾರುಪತ್ರ ಸೇರಿ ಬ್ಯಾಂಕಿನ ಎಲ್ಲ ವ್ಯವಹಾರಗಳು ಕಡ್ಡಾಯವಾಗಿ ಕನ್ನಡದಲ್ಲೇ ನಡೆಯಬೇಕು’ ಎಂದು ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಅವರು ಬ್ಯಾಂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿವಿಧ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನದ ಕುರಿತು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಇಂಗ್ಲಿಷ್‌ನಲ್ಲಿರುವ ಕರಾರುಪತ್ರ ಹಾಗೂ ರಸೀದಿ ಪತ್ರಗಳಿಗೆ ರೈತರಿಗೆ ತಿಳಿಸದೇ ಸಹಿ ಮಾಡಿಸಿಕೊಳ್ಳಲಾಗುತ್ತಿದೆ. ಇದರಿಂದ ಕಾನೂನು ತೊಡಕು ಎದುರಾಗುತ್ತಿರುವ ಪ್ರಕರಣಗಳು ಕಂಡುಬಂದಿವೆ. ಹೀಗಾಗಿ, ಕನ್ನಡದಲ್ಲೇ ವ್ಯವಹಾರ ನಡೆಸಬೇಕು. ಒಂದು ವೇಳೆ ಕಾನೂನು ತೊಡಕು ಎದುರಾದರೇ ಅದಕ್ಕೆ ಬ್ಯಾಂಕುಗಳನ್ನೇ ಹೊಣೆಯಾಗಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜ್ಞಾನಪೀಠ ಪುರಸ್ಕೃತರ ಭಾವಚಿತ್ರ ಅಳವಡಿಸಿ:

‘ಸರ್ಕಾರದ ಎಲ್ಲ ಇಲಾಖೆಗಳ ನಾಮಫಲಕವನ್ನು ಕನ್ನಡದಲ್ಲೇ ಬರೆಯಿಸಬೇಕು. ಕೇಂದ್ರ ಸರ್ಕಾರದೊಂದಿಗಿನ ಪತ್ರ ವ್ಯವಹಾರ ಹೊರತುಪಡಿಸಿ, ಉಳಿದ ಪತ್ರ ವ್ಯವಹಾರಗಳನ್ನು ಕನ್ನಡದಲ್ಲೇ ನಡೆಸಬೇಕು. ಸರ್ಕಾರಿ ಕಚೇರಿಗಳಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಭಾವಚಿತ್ರಗಳನ್ನು ಅಳವಡಿಸಬೇಕು’ ಎಂದು ಸೂಚಿಸಿದರು.

‘ಕನ್ನಡದಲ್ಲಿ ನಾಮಫಲಕ ಬರೆಯಿಸದಿರುವ ಅಂಗಡಿ ಹಾಗೂ ವ್ಯಾಪಾರ ಮಳಿಗೆಗಳ ಟ್ರೇಡ್ ಲೈಸನ್ಸ್ ರದ್ದುಪಡಿಸುವಂತೆ’ ಪಾಲಿಕೆ ಆಯುಕ್ತರಿಗೆ ತಿಳಿಸಿದರು. 

ನಿಪ್ಪಾಣಿ ಕನ್ನಡಮಯವಾಗಿಸಿ:

ನಿಪ್ಪಾಣಿ ನಗರಸಭೆ ವ್ಯಾಪ್ತಿಯ ಎಲ್ಲ ಅಂಗಡಿಗಳ ನಾಮಫಲಕಗಳನ್ನು ಮರಾಠಿಯಲ್ಲೇ ಬರೆಯಿಸಲಾಗಿದೆ. ಗಡಿಭಾಗದ ಕೆಲವು ಶಾಲೆಗಳಲ್ಲಿ ಕನ್ನಡ ಶಿಕ್ಷಕರೇ ಇಲ್ಲ. ಇಂತಹ ವಿಷಯಗಳ ಕುರಿತು ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಕೂಡಲೇ ಶಿಕ್ಷಕರನ್ನು ನೇಮಿಸಬೇಕು ಎಂದು ಕನ್ನಡ ಹೋರಾಟಗಾರ ಸಿದ್ದನಗೌಡ ಪಾಟೀಲ ಒತ್ತಾಯಿಸಿದರು.

ಕನ್ನಡದಲ್ಲಿಯೇ ನಾಮಫಲಕ ಬರೆಯಿಸಿ, ಶಿಕ್ಷಕರನ್ನು ನೇಮಿಸಲು ಕ್ರಮಕೈಗೊಳ್ಳಿ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿಗೆ ಡಿಸಿ ಸೂಚನೆ ನೀಡಿದರು.

‘ಪ್ರತಿ ಬಾರಿ ಸಭೆ ನಡೆದಾಗಲೂ ಕೆಲವು ಇಲಾಖೆಗಳ ಅಧಿಕಾರಿಗಳು ಮಾತ್ರ ಆಗಮಿಸುತ್ತಿದ್ದಾರೆ. ಹೀಗಾದರೇ ಕನ್ನಡ ಅನುಷ್ಠಾನ ಹೇಗೆ ಸಾಧ್ಯ’ ಎಂದು ಕನ್ನಡ ಅನುಷ್ಠಾನ ಸಮಿತಿ ಸದಸ್ಯ ಅನಂತಕುಮಾರ ಬ್ಯಾಕೂಡ ಆಕ್ರೋಶ ವ್ಯಕ್ತಪಡಿಸಿದರು. ‘ಮುಂದಿನ ಸಭೆಗೆ ಎಲ್ಲ ಇಲಾಖೆಯ ಪ್ರತಿನಿಧಿಗಳು ಆಗಮಿಸುವಂತೆ’ ಜಿಲ್ಲಾಧಿಕಾರಿ ತಿಳಿಸಿದರು. 

ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶಕುಮಾರ, ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಬಿ. ಬೂದೆಪ್ಪ, ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಇದ್ದರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !