ಬೆಳಗಾವಿ: ‘ನಮ್ಮಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆಗಳನ್ನು ಗುರುತಿಸಿದ್ದೇವೆ. ಆದರೆ, ಮೊದಲಿನಿಂದಲೂ ಬಂದ ನೈಸರ್ಗಿಕ ಅಸಮಾನತೆ ಗಮನಿಸಿಲ್ಲ. ‘ಕಾಗೆ ಕಾರುಣ್ಯದ ಕಣ್ಣು’ ಕೃತಿಯಲ್ಲಿ ಇದನ್ನೇ ನಾನು ಹೇಳುವ ಯತ್ನ ಮಾಡಿದ್ದೇನೆ’ ಎಂದು ಸಾಹಿತಿ, ಚಿಂತಕ ಬರಗೂರು ರಾಮಚಂದ್ರಪ್ಪ ಹೇಳಿದರು.
ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ಮಾನವ ಬಂಧುತ್ವ ವೇದಿಕೆ–ಬೆಳಗಾವಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ‘ಕಾಗೆ ಕಾರುಣ್ಯದ ಕಣ್ಣು’ ಕೃತಿಯ ಎರಡನೇ ಆವೃತ್ತಿಯ ಜನಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಮ್ಮದು ಶ್ರೀಗಂಧದ ನಾಡು ಎನ್ನುತ್ತೇವೆ. ಆದರೆ ಜಾಲಿ ಮರವನ್ನು ಮರೆತುಬಿಟ್ಟಿದ್ದೇವೆ. ಕೋಗಿಲೆಯ ಇಂಪಾದ ದನಿಯನ್ನು ಮೆಚ್ಚುತ್ತೇವೆ. ಕಾಗೆ ಕರ್ಕಶ ಧ್ವನಿ ಮಾಡುತ್ತದೆ ಎಂದು ಅದರ ಗುಣವನ್ನು ಗೌಣ ಮಾಡಿದ್ದೇವೆ. ಹೀಗೆ ನೈಸರ್ಗಿಕವಾಗಿ ಅಸಮಾನತೆಯೂ ಹೋಗಲಾಡಿಸಬೇಕಿದೆ. ನಮ್ಮದು ಶ್ರೀಗಂಧದ ನಾಡೂ ಹೌದು, ಜಾಲಿಯ ಬೀಡೂ ಹೌದು ಎಂಬ ತಾತ್ವಿಕ ತಿಳಿವಳಿಕೆ ಬೆಳೆಯಬೇಕಿದೆ’ ಎಂದರು.
‘ಕಾಗೆ ನಮ್ಮ ಸಾಮರಸ್ಯದ, ಸೌಹಾರ್ದದ ಪ್ರತೀಕ. ಕಾಗೆಗೆ ಬಳಗ ಪ್ರಜ್ಞೆ ಇದೆ. ಹಾಗಾಗಿ, ಒಂದಗುಳ ಕಂಡರೆ ಅದು ತನ್ನ ಬಳಗ ಕೂಗಿ ಕರೆಯುತ್ತದೆ. ಈ ಬಳಗ ಪ್ರಜ್ಞೆ ಮನುಷ್ಯರಲ್ಲಿ ಬೆಳೆಯಬೇಕಿದೆ’ ಎಂದರು.
‘ಈಗ ಕಾಲದ ಕಣ್ಣಾಗುವವರು, ಕಿವಿಯಾಗುವವರು ಇಲ್ಲ. ಕೇವಲ ಬಾಯಿ ಮಾತ್ರ ಹೆಚ್ಚಾಗಿವೆ. ಎಲ್ಲಿ ಕಾಲದ ಕಣ್ಣು– ಕಿವಿಗಳು ಬಂದಾಗಿ ಬಾಯಿ ಮಾತ್ರ ಹೆಚ್ಚಾಗುತ್ತದೆಯೋ ಅಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುತ್ತದೆ’ ಎಂದರು.
‘ಈಗಿನ ಕಾಲಘಟ್ಟದಲ್ಲಿ ಕಾಲೆಳೆಯುವುದು ಮಾತ್ರವಲ್ಲ; ಹೀಗಳೆಯುವವರ ಸಂಖ್ಯೆ ದೊಡ್ಡದಾಗಿದೆ. ಅವರ ಶರೀರದ ಭಾಷೆ, ನಾಲಿಗೆ ಭಾಷೆ ಒಂದಕ್ಕೊಂದು ಸಂಬಂಧವೇ ಇಲ್ಲದಂತಿದೆ. ಎಂಥ ಕಾಲದಲ್ಲಿ ನಾವಿದ್ದೇವೆ ಎಂದು ಸಾಹಿತಿ, ಕಲಾವಿದರು, ಇತಿಹಾಸಕಾರರು ಚಿಂತಿಸಬೇಕಾಗಿದೆ’ ಎಂದು ಸಲಹೆ ನೀಡಿದರು.
‘ಕುರ್ಚಿಯಲ್ಲಿ ಕುಳಿತ ಮನುಷ್ಯ ಕುಬ್ಜನಾಗಬಾರದು. ಅವನಿಗೆ ಸಮತೆ– ಮಮತೆಯ ದೊಡ್ಡ ಗುಣ ಇರಬೇಕು. ಕುರ್ಚಿಯಲ್ಲಿ ಕುಳಿತ ತಕ್ಷಣ ಕುಬ್ಜನಾಗುವ ಮನುಷ್ಯನಿಂದಲೂ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುತ್ತದೆ’ ಎಂದು ಅವರು ಅಭಿಪ್ರಾಯಪಟ್ಟರು.
‘ಮಾನವೀಯತೆ ಮೇಲೆ ಮತೀಯತೆ ಸವಾರಿ’ ‘ವಿವೇಕ ಮತ್ತು ಅವಿವೇಕದ ನಡುವಿನ ಅಂತರ ಮಾನವೀಯತೆ ಮತ್ತು ಮತೀಯತೆ ನಡುವಿನ ಅಂತರ ಹೆಚ್ಚಾಗುತ್ತ ಸಾಗಿದೆ. ಈಗ ಮತೀಯತೆಯೇ ಮಾನವೀಯತೆಯನ್ನು ಆಳುತ್ತಿದೆ. ಇಂಥ ಸಂದರ್ಭದಲ್ಲಿ ಕಾಲವನ್ನು ಎದುರುಗೊಳ್ಳುವುದು ಮತ್ತು ಎದುರಿಸುವುದು ಸಾಹಿತಿ ಚಿಂತಕರ ಕರ್ತವ್ಯವಾಗಿದೆ’ ಎಂದು ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು. ‘ದೇಶದ ಮಹಾನ್ ಚರಿತ್ರಕಾರರ ಬಾಯಿಗೆ ಕಡ್ಡಾಯ ರಜೆ ಘೋಷಿಸಲಾಗಿದೆ. ಬಾಯಿಗೆ ಬಂದಂತೆ ಇತಿಹಾಸ ಹುಟ್ಟಿಸುವವರು ವಿಧಾನಸಭೆಯಲ್ಲೂ ಸಂಸಯ್ ಭವನದಲ್ಲೂ ಸಾಕಷ್ಟು ಹುಟ್ಟಿಬಿಟ್ಟಿದ್ದಾರೆ. ತಮಾಶೆ ಮಾಡುವವನೂ ದೇಶದ್ರೋಹಿ ಆಗಿಬಿಡುತ್ತಾನೆ. ಅವಿವೇಕವು ವಿವೇಕವನ್ನು ಆಳುತ್ತಿರುವುದರ ಪರಿಣಾಮವಿದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.