ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆ ನಂಬಿ ಸುಮ್ಮನಿರುವಂತಿಲ್ಲ

ಹೋರಾಟ ಮುಂದವರಿಸಬೇಕು: ಸಮಾಜದವರಿಗೆ ಯತ್ನಾಳ ಕರೆ
Last Updated 24 ಸೆಪ್ಟೆಂಬರ್ 2021, 17:00 IST
ಅಕ್ಷರ ಗಾತ್ರ

ಬೆಳಗಾವಿ: ‘ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ಪಡೆಯುವ ನಿಟ್ಟಿನಲ್ಲಿ ಯಶಸ್ಸಿನ ಕೊನೆ ಹಂತದಲ್ಲಿದ್ದೇವೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಆದಾಗ್ಯೂ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ ಹೋರಾಟ ನಿಲ್ಲಿಸಬಾರದು’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೂಚ್ಯವಾಗಿ ತಿಳಿಸಿದರು.

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಘಟಕದಿಂದ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌’ನಲ್ಲಿ ಅವರು ಮಾತನಾಡಿದರು.

‘ಶ್ರೀಗಳು ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಹೋರಾಟ ನಡೆಸಿದಾಗ, ನಾಟಕೀಯ ರೀತಿಯಲ್ಲಿ ಬಂದಿದ್ದವರು ಪಾನೀಯ ಕುಡಿಸಿ ಹೋರಾಟ ಕೈ ಬಿಡುವಂತೆ ಮಾಡಿದರು. ನಂತರ ನಮಗೆ‌ ಮೋಸವಾಯಿತು’ ಎಂದು ಬಿ.ಎಸ್. ಯಡಿಯೂರಪ್ಪ ಅವರನ್ನು ಟೀಕಿಸಿದರು.

‘ನಮ್ಮ ಸಮಾಜದವರಿಗೆ ಜಾತಿ ಕೋಟಾದಲ್ಲಿ ಟಿಕೆಟ್ ಬೇಕು; ಮುಖ್ಯಮಂತ್ರಿ ಸ್ಥಾನವೂ ಬೇಕು. ಆದರೆ, ಹೋರಾಟಕ್ಕೆ ಹಲವರು ಬರುತ್ತಿಲ್ಲ. ಮೀಸಲಾತಿ ಬಗ್ಗೆ ಮಾತನಾಡುತ್ತಿಲ್ಲ’ ಎಂದು ದೂರಿದರು.

‘ನಮ್ಮ ಗುರುಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಹೋರಾಟದ ದಿಕ್ಕು ತಪ್ಪಿಸಲು ಪಾಕೆಟ್ ತಗೊಂಡು ಬಂದವರು ಏನೇನೋ ಮಾತನಾಡುತ್ತಾರೆ. ಅವರ ರೇಟೇ ₹ 5ಸಾವಿರ ಆಗಿದೆ. ₹ 10ಸಾವಿರ ಕೊಟ್ಟರೆ ಏನು ಬೇಕಾದರೂ ಮಾಡುವ ಸ್ವಾಮಿಗಳೂ ಇದ್ದಾರೆ. ಕೆಲವು ರೆಡಿಮೇಡ್ ಸ್ವಾಮೀಜಿಗಳು ಬಂದಿದ್ದಾರೆ. ರೊಕ್ಕ ಕೊಟ್ಟು ಸ್ವಾಮೀಜಿಗಳನ್ನು ಖರೀದಿ ಮಾಡುವವರೂ ಇದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಮೀಸಲಾತಿಗೆ ಆಗ್ರಹಿಸಿ ನಡೆದ ಪಾದಯಾತ್ರೆಗೆ ನಮ್ಮವರೇ ಹಲವು ತೊಂದರೆ ಕೊಟ್ಟರು’ ಎಂದು ದೂರಿದರು.

‘ಪಂಚಮಸಾಲಿ ಸಮಾಜ‌ ಇಡೀ ರಾಜ್ಯ ವ್ಯಾಪಿಸಿದೆ. ಯಾವುದೇ ಪರಿಸ್ಥಿತಿಯಲ್ಲಿ ನ್ಯಾಯ‌ ಕೊಡಿಸುತ್ತೇನೆ. ಅವಕಾಶ ಕೊಡಿ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಚುನಾವಣೆ ಬರುವುದರೊಳಗೆ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮತ್ತೆ ಭರವಸೆಯ ಮಾತುಗಳನ್ನು ಮುಂದುವರಿಸುತ್ತಾರೆ. ಮೀಸಲಾತಿ ಸಿಗುವವರೆಗೂ ಹೋರಾಟಗಾರರ ಜೊತೆ ಇರುತ್ತೇವೆ. ಮೀಸಲಾತಿ ‌ಕೊಡಿಸಲಿಲ್ಲವಾದರೆ ಈ ಬಾರಿ ನಿಮ್ಮನ್ನು ಮನೆಗೆ ಕಳುಹಿಸುತ್ತೇವೆ ಎಂದು ಜನರು ರಾಜಕಾರಣಿಗಳಿಗೆ ಎಚ್ಚರಿಕೆ ಕೊಡಬೇಕು’ ಎಂದು ಕರೆ ನೀಡಿದರು.

‘ಮೀಸಲಾತಿಯನ್ನು ಬೊಮ್ಮಾಯಿ ಶೇ 100ರಷ್ಟು ಕೊಟ್ಟೆ ಕೊಡಿಸುತ್ತಾರೆ. ವಿರೋಧಿಸುವವರನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿ ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT