ಅಪ್ಪಟ ಸಂಗೀತಗಾರರಾಗಿದ್ದ ಬಸವಣ್ಣ: ಶಿರೀಷ ಜೋಶಿ

ಶನಿವಾರ, ಏಪ್ರಿಲ್ 20, 2019
28 °C
ವೀರಶೈವ ಮಹಾಸಭಾ ಅನುಭಾವ ಗೋಷ್ಠಿ

ಅಪ್ಪಟ ಸಂಗೀತಗಾರರಾಗಿದ್ದ ಬಸವಣ್ಣ: ಶಿರೀಷ ಜೋಶಿ

Published:
Updated:
Prajavani

ಬೆಳಗಾವಿ: ‘12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ಮತ, ವರ್ಗ ವ್ಯವಸ್ಥೆಯಲ್ಲಿ ಸಮಾನತೆಗಾಗಿ ಹೋರಾಡಿದ್ದು ತಿಳಿದ ಸಂಗತಿ. ಅಂತೆಯೇ ಅವರ ವಚನಗಳಲ್ಲಿ ಸಂಗೀತದ ಹಲವು ವಿವರಗಳು ದೊರೆಯುತ್ತವೆ. ಅವರು ಅಪ್ಪಟ ಸಂಗೀತ ತಜ್ಞರಾಗಿದ್ದರು’ ಎಂದು ಸಾಹಿತಿ ಶಿರೀಷ್ ಜೋಶಿ ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಇಲ್ಲಿನ ಲಿಂಗಾಯತ ಭವನದಲ್ಲಿ ನಡೆದ ಅನುಭಾವ ಗೋಷ್ಠಿಯಲ್ಲಿ ‘ಬಸವಣ್ಣನವರ ಬತ್ತೀಸ ರಾಗಗಳು’ ವಿಷಯದ ಕುರಿತು ಅವರು ಮಾತನಾಡಿದರು.

‘ಬಸವಣ್ಣನನ್ನು ಸಂಗೀತದ ನೆಲೆಯಲ್ಲಿಯೂ ಅಭ್ಯಸಿಸುವುದು ಅಗತ್ಯವಾಗಿದೆ. ಜಾತಿ, ಮತಗಳನ್ನು ತೊಡೆದು ಹಾಕಿದ ಅವರು ಸಂಗೀತದ ಬಗ್ಗೆಯೂ ಅಪಾರ ಜ್ಞಾನ ಹೊಂದಿದ್ದರು. ಆನು ಒಲಿದಂತೆ ಹಾಡುವೆನಯ್ಯ, ಎನ್ನ ಶಿರವರ ದಂಡಿಗೆಯ ಮಾಡಯ್ಯ, ಲಕ್ಷೋಪಲಕ್ಷ ವಚನಗಳ ಹಾಡಿದನಯ್ಯ ಮೊದಲಾದ ವಚನಗಳಲ್ಲಿ ಅವರಲ್ಲಿ ಸಂಗೀತದ ಅಭಿರುಚಿ ಇದ್ದುದ್ದನ್ನು ಗಮನಿಸಬಹುದು’ ಎಂದು ಅಭಿ‍ಪ್ರಾಯಪಟ್ಟರು.

‘ಅಂದಿನ ಕಾಲದಲ್ಲೇ ಬಸವಣ್ಣ ಸಂಗೀತದ ವಿವಿಧ ರಾಗಗಳ ಬಗ್ಗೆ ಅಮೂಲಾಗ್ರವಾದ ಜ್ಞಾನ ಹೊಂದಿದ್ದರು. ಇತರ ವಚನಕಾರರು ಹಲವು ಸಂಗೀತದ ರಾಗಗಳ ಕುರಿತು ಪ್ರಸ್ತಾಪಿಸಿದ್ದಾರೆ. ಸಂಗೀತದಲ್ಲಿದ್ದ ಹಲವು ನಿಯಮ, ನಿರ್ಬಂಧಗಳನ್ನು ಬದಿಗೆ ಸರಿಸಿ ಜನಸಾಮಾನ್ಯರ ಆವರಣದಲ್ಲಿ ತರುವ ಪ್ರಯತ್ನವನ್ನು ಬಸವಣ್ಣ ಮಾಡಿದ್ದರು’ ಎಂದು ತಿಳಿಸಿದರು.

‘ಸಂಗೀತ ಏಕಾಗ್ರತೆ ನೀಡುವ ಮೂಲಕ ಆತ್ಮಶಕ್ತಿ ಹೆಚ್ಚಿಸುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಸ್. ಪಾಟೀಲ ಮಾತನಾಡಿ, ‘ಮಹಾಸಭಾ ಹಲವು ಚಿಂತನಾ ಪರ ಉಪನ್ಯಾಸಗಳನ್ನು ಆಯೋಜಿಸುತ್ತಿದೆ. ಯುವಜನರಿಗೆ ಬಸವಣ್ಣನವರ ಸಂದೇಶಗಳನ್ನು ತಿಳಿಸುವ ಕೆಲಸವನ್ನು ಮಾಡುತ್ತಿದೆ. ಸಮಾಜ ಕಟ್ಟಿದ ಶರಣರ ಜೀವನ ನಮಗೆ ಆದರ್ಶಮಯವಾಗಬೇಕು’ ಎಂದು ತಿಳಿಸಿದರು.

ಮುಖಂಡರಾದ ಎಫ್.ವಿ. ಮಾನ್ವಿ, ಬಸವರಾಜ ಜಗಜಂಪಿ, ಗುರುದೇವಿ ಹುಲೆಪ್ಪನವರಮಠ ಉಪಸ್ಥಿತರಿದ್ದರು.

ಶಂಕರ ಚೊಣ್ಣದ ಪ್ರಾರ್ಥಿಸಿದರು. ವಕೀಲ ವಿ.ಕೆ. ಪಾಟೀಲ ಸ್ವಾಗತಿಸಿದರು. ಮಹೇಶ ಗುರನಗೌಡರ ಪರಿಚಯಿಸಿದರು. ಆಶಾ ಯಮಕನಮರಡಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !