ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಡಿಸಿಸಿ ಬ್ಯಾಂಕ್: ಡಿಸಿಎಂ, ಸಂಸದ, ಶಾಸಕರ ಸ್ಪರ್ಧೆ

Last Updated 29 ಅಕ್ಟೋಬರ್ 2020, 15:14 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರ ಸ್ಥಾನಗಳಿಗೆ ನ.6ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧೆ ಬಯಸಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಬಿಜೆಪಿಯ ಘಟಾನುಘಟಿಗಳು ಗುರುವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದರಿಂದ ಬಹಳಷ್ಟು ರಾಜಕೀಯ ಚಟುವಟಿಕೆಗಳು ನಡೆದವು. ಬಿಡಿಸಿಸಿ ಬ್ಯಾಂಕ್‌ ಆವರಣದಲ್ಲಿ ಬಿಜೆಪಿ ಮುಖಂಡರ ದಂಡೇ ನೆರೆದಿತ್ತು. ನೂರಾರು ಮಂದಿ ಬೆಂಬಲಿಗರು ಕೂಡ ಹೊರಗಡೆ ಸೇರಿದ್ದರು. ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

ಬುಧವಾರದವರೆಗೆ 13 ಮಂದಿ ನಾಮಪತ್ರ ಸಲ್ಲಿಸಿದ್ದರು. ಕೊನೆ ದಿನವಾದ ಗುರುವಾರ ಒಂದೇ ದಿನ ಒಟ್ಟು 24 ಮಂದಿ ಚುನಾವಣಾಧಿಕಾರಿ ಸಯೀದಾ ಅಫ್ರೀನಬಾನು ಎಸ್. ಬಳ್ಳಾರಿ ಅವರಿಗೆ ನಾಮಪತ್ರ ಸಲ್ಲಿಸಿದರು.

ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಅಥಣಿ– ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಾಯಬಾಗ– ಅಪ್ಪಾಸಾಹೇಬ ಮಾರುತಿ ಕುಲಗುಡೆ, ಚಿಕ್ಕೋಡಿ– ಸಂಸದ ಅಣ್ಣಾಸಾಹೇಬ ಜೊಲ್ಲೆ, ಹುಕ್ಕೇರಿ– ರಮೇಶ ಕತ್ತಿ (ಹಾಲಿ ಅಧ್ಯಕ್ಷ), ಗೋಕಾಕ– ಶಿವಾನಂದ ನಿಂಗಪ್ಪ ಡೋಣಿ, ಸವದತ್ತಿ– ವಿಧಾನಸಭೆ ಉಪಸಭಾಧ್ಯಕ್ಷ ವಿಶ್ವನಾಥ (ಆನಂದ) ಮಾಮನಿ, ಅಥಣಿ ತಾಲ್ಲೂಕು ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಶೇಗುಣಸಿಯ ಅಶೋಕ ರಾಚಗೌಡ ಅವ್ವಕ್ಕನವರ, ನೇಕಾರ ಸಹಕಾರ ಸಂಘಗಳನ್ನು ಹೊರತುಪಡಿಸಿ ಕೈಗಾರಿಕಾ ಸಹಕಾರ ಸಂಘಗಳ ಕ್ಷೇತ್ರದಿಂದ ಮೂಡಲಗಿಯ ಸುಭಾಷ ಗಿರೆಪ್ಪ ಢವಳೇಶ್ವರ, ಗ್ರಾಹಕರ ಸಹಕಾರ ಸಂಘಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಗೋಕಾಕ ತಾಲ್ಲೂಕು ಕಲ್ಲೋಳಿಯ ನೀಲಕಂಠ ಬಸವರಾಜ ಕಪ್ಪಲಗುದ್ದಿ, ಹಾಲು ಉತ್ಪಾದಕರ ಸಂಘಗಳ ಕ್ಷೇತ್ರದಿಂದ ಸವದತ್ತಿ ತಾಲ್ಲೂಕು ಮುನವಳ್ಳಿಯ ಪಂಚನಗೌಡ ಬಸನಗೌಡ ದ್ಯಾಮಗೌಡರ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಇವರೆಲ್ಲರೂ ಗುರುವಾರ ನಾಮಪತ್ರ ಸಲ್ಲಿಸಿದ್ದರು. ತಲಾ ಒಬ್ಬರು ಮಾತ್ರವೇ ನಾಮಪತ್ರ ಸಲ್ಲಿಸಿರುವುದರಿಂದ ಅವರ ಹಾದಿ ಸುಗಮವಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ರಾಜೇಂದ್ರ ಅಂಕಲಗಿ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಪುತ್ರ ಸತೀಶ ಕಡಾಡಿ ಪಟ್ಟಣ ಸಹಕಾರ ಬ್ಯಾಂಕ್‌ಗಳು ಹಾಗೂ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಅವರದ್ದೂ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ ಎಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದಾರೆ.

ಖಾನಾಪುರ ತಾಲ್ಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಮತ್ತು ಹಾಲಿ ನಿರ್ದೇಶಕ ಅರವಿಂದ ಪಾಟೀಲ ಬೈಲಹೊಂಗಲದಿಂದ ಕಿತ್ತೂರು ಬಿಜೆಪಿ ಶಾಸಕ ಮಹಾಂತೇಶ ದೊಡ್ಡಗೌಡರ ಕಣದಲ್ಲಿದ್ದಾರೆ. ಅಲ್ಲೂ ಅವಿರೋಧ ಆಯ್ಕೆಗೆ ಬಿಜೆಪಿ ಮುಖಂಡರು ಅಭ್ಯರ್ಥಿಗಳೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.

ಅ.30ರಂದು (ಶುಕ್ರವಾರ) ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಅ. 31 ಕೊನೆಯ ದಿನವಾಗಿದೆ. ನಂತರವಷ್ಟೇ ಚುನಾವಣಾಧಿಕಾರಿಯಿಂದ ಅಧಿಕೃತ ಘೋಷಣೆ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT