ಭಾನುವಾರ, ಡಿಸೆಂಬರ್ 15, 2019
26 °C
ಶತಮಾನೋತ್ಸವ ಆಚರಿಸಿಕೊಂಡ ಸರ್ಕಾರಿ ವಿದ್ಯಾದೇಗುಲ

ಐನಾಪುರದಲ್ಲೊಂದು ವೈನಾದ ಶಾಲೆ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

Deccan Herald

ಮೋಳೆ: ಸರ್ಕಾರಿ ಶಾಲೆಗಳೆಂದರೆ ಒಡೆದ ಹೆಂಚುಗಳು, ಬಿರುಕು ಬಿಟ್ಟ ಗೋಡೆಗಳು ಎಂದು ಮೂಗು ಮರಿಯುವವರೇ ಹೆಚ್ಚು. ಈ ಮೂಲಸೌಲಭ್ಯಗಳ ಕೊರತೆಗಳನ್ನೆಲ್ಲಾ ನೀಗಿಸಿಕೊಂಡು 113 ವರ್ಷಗಳಿಂದ ತನ್ನ ಅಸ್ತಿತ್ವ ಕಳೆದುಕೊಳ್ಳದ ಜ್ಞಾನ ದೇಗುಲವೊಂದು ಕಾಗವಾಡ ತಾಲ್ಲೂಕು ಐನಾಪುರದಲ್ಲಿದೆ.

ಸ್ವಾತಂತ್ರ್ಯ ಪೂರ್ವದಲ್ಲಿಯೇ (1905)ದಲ್ಲಿ ಸ್ಥಾಪನೆಯಾದ ಶಾಲೆ ಇದು. 1ರಿಂದ 7ನೇ ತರಗತಿವರೆಗೆ ಇಲ್ಲಿ ಕಲಿಕೆಗೆ ಅವಕಾಶವಿದೆ. ಗ್ರಾಮದ ಹೊರವಲಯದಲ್ಲಿರುವ ಒಂದು ಎಕರೆ ಪ್ರದೇಶದಲ್ಲಿ 16 ಕೊಠಡಿಗಳನ್ನು ಹೊಂದಿದೆ. 407 ವಿದ್ಯಾರ್ಥಿನಿಯರು ಇದ್ದಾರೆ. 14 ಮಂದಿ ಅನುಭವಿ ಶಿಕ್ಷಕರಿದ್ದಾರೆ.

ಉತ್ತಮ ಶೌಚಾಲಯ, ಕುಡಿಯುವ ನೀರು, ಆಟದ ಮೈದಾನ, ಸ್ವಚ್ಛ ಹಾಗೂ ಸುಂದರ ಉದ್ಯಾನ, ಗ್ರಂಥಾಲಯ, ಪ್ರಯೋಗಾಲಯವಿದೆ. ಕಂಪ್ಯೂಟರ್ ಶಿಕ್ಷಣ, ಉತ್ತಮ ಬಿಸಿಯೂಟದ ವ್ಯವಸ್ಥೆಯ ಜೊತೆಗೆ ನುರಿತ ಸಂಪನ್ಮೂಲ ಶಿಕ್ಷಕರಿಂದ ಭೋದನೆಯೂ ಸಿಗುತ್ತಿರುವುದರಿಂದ ಮಕ್ಕಳಿಗೆ ಕಲಿಕಾ ವಾತಾವರಣ ಉತ್ತಮವಾಗಿದೆ.

ಸಹಕಾರದಿಂದ: ‘ಮಕ್ಕಳ ದಾಖಲಾತಿ ಹೆಚ್ಚಿಸಲು ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ. ಕಾಲಕಾಲಕ್ಕೆ ಪೋಷಕರ ಸಭೆ ಕರೆದು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪ್ರೋತ್ಸಾಹಿಸುವುದು, ಅವರಲ್ಲಿ ಜಾಗೃತಿ ಮೂಡಿಸುವುದು ನಡೆಯುತ್ತಿದೆ. ವಿಶೇಷವಾಗಿ ಬೆಳಿಗ್ಗೆ ಹಾಗೂ ಸಂಜೆ ತರಗತಿ ಆಯೋಜಿಸಲಾಗುತ್ತಿದೆ. ಸರ್ಕಾರದ ಜನಪ್ರಿಯ ಯೋಜನೆಯಾದ ಬಿಸಿಯೂಟದ ಮೂಲಕ ವಿದ್ಯಾಥಿಗಳನ್ನು ಶಾಲೆಗೆ ಬರುವಂತೆ ಮನ ಸೆಳೆಯಲಾಗುತ್ತಿದೆ' ಎಂದು ಮುಖ್ಯಶಿಕ್ಷಕ ಬಿ.ಎಸ್. ಹುವಣ್ಣವರ ತಿಳಿಸಿದರು.

‘ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗಿದೆ. ಶಿಸ್ತು, ಸಮಯ ಪ್ರಜ್ಞೆ, ಪರಿಸರ ಪ್ರಜ್ಞೆ ಮೂಡಿಸಲಾಗುತ್ತಿದೆ. ಪ್ರಬಂಧ, ಭಾಷಣ, ಸಂಗೀತ, ಚರ್ಚಾಕೂಟ, ಸಾಮಾನ್ಯ ಜ್ಞಾನ ಹಾಗೂ ವಿಷಯವಾರು ಸ್ಪರ್ಧೆಗಳನ್ನು ಆಯೋಜಿಸಿ ಮಕ್ಕಳ ಜ್ಞಾನ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ ಆವರಣದಲ್ಲಿ ಸುಂದರ ಉದ್ಯಾನ ನಿರ್ವಹಣೆ ಮಾಡಲಾಗುತ್ತಿದೆ. ಅದಕ್ಕೆ ಹಲವು ಪ್ರಶಸ್ತಿಯೂ ಸರ್ಕಾರದಿಂದ ಬಂದಿವೆ’ ಎನ್ನುತ್ತಾರೆ ಅವರು.

ದಿನಪತ್ರಿಕೆ ಓದುವಂತೆ: ವಿದ್ಯಾರ್ಥಿಗಳಿಗೆ ದಿನಪತ್ರಿಕೆಗಳನ್ನು ಓದುವಂತೆ, ಶಾಲಾ ಆವರಣದಲ್ಲಿ ಸ್ವಚ್ಛತೆ ಕಾಪಾಡುವಂತೆ ಹಾಕಿದ ಬೋರ್ಡ್‌ಗಳು ಗಮನಸೆಳೆಯುತ್ತವೆ. ಜಿಲ್ಲೆ, ರಾಜ್ಯ, ರಾಷ್ಟ್ರದ ನಕ್ಷೆಗಳು ಆಕರ್ಷಿಸುತ್ತವೆ. ತಟ್ಟೆಗಳನ್ನು ಇಡಲು ಸ್ಟ್ಯಾಂಡ್ ವ್ಯವಸ್ಥೆ, ವಾಚನಾಲಯದಲ್ಲಿ ಪುಸ್ತಕಗಳನ್ನು ಜೋಡಿಸುವ ರೀತಿ ಆಕರ್ಷಿಸುತ್ತದೆ. ಮಕ್ಕಳು ಪ್ರತಿ ದಿನ ಸಮವಸ್ತ್ರ ಧರಿಸಿ, ಶೂ, ಕೊರಳಿಗೆ ಟೈ ಕಟ್ಟಿಕೊಂಡು ಬರುವ ರೀತಿ ಶಿಸ್ತಿಗೆ ಉದಾಹರಣೆಯಾಗಿದೆ.

ಅನುಪಯುಕ್ತ ವಸ್ತುಗಳನ್ನು ಬಳಸಿ, ಅಂತರ್ಜಲ ಹೆಚ್ಚಿಸುವ ವ್ಯವಸ್ಥೆಯ ಮಾದರಿ ನಿರ್ಮಿಸಲಾಗಿದೆ. ಪಕ್ಷಿಗಳ ರಕ್ಷಣೆ ಮತ್ತು ಅವುಗಳ ಬಗ್ಗೆ ಅರಿವು ಮೂಡಿಸಲು ಶಾಲೆಯ ಆವರಣದ ಹಿಂದಿನ ಕೆರೆಯ ಬಳಿಗೆ ಕರೆದುಕೊಂಡು ಹೋಗಿ ತಿಳಿಸಲಾಗುತ್ತದೆ. ಗಿಡ, ಮರಗಳಲ್ಲಿ ಗೂಡುಗಳನ್ನು ಕಟ್ಟಿ ಹಕ್ಕಿಗಳಿಗೆ ಆಶ್ರಯ ನೀಡಲು ಯತ್ನಿಸಲಾಗಿದೆ.

ಕಬಡ್ಡಿ, ವಾಲಿಬಾಲ್, ಕೊಕ್ಕೊ ಮೈದಾನ ಇಲ್ಲಿದೆ. ಪ್ರತಿ ವರ್ಷ ಖಾಸಗಿ ಶಾಲೆಗಳವರು ಮೂಗಿನ ಮೇಲೆ ಬೆರಳಿಡುವಂತೆ ವಾರ್ಷಿಕ ಸ್ನೇಹ ಸಮ್ಮೇಳನ, ಶೈಕ್ಷಣಿಕ ಪ್ರವಾಸ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ. ಇಲ್ಲಿನ ಶಿಕ್ಷಣ ಪ್ರೇಮಿಗಳ ಪ್ರೋತ್ಸಾಹ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಶಿಕ್ಷಕರ ಸಹಾಯ–ಸಹಕಾರದಿಂದ ಈ ಶಾಲೆ ಪ್ರಗತಿಯತ್ತ ಮುನ್ನಡೆಯಲು ಸಾಧ್ಯವಾಗಿದೆ. ವರ್ಷದಿಂದ ವರ್ಷಕ್ಕೆ ಹಿರಿಮೆ ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಿದೆ ಎನ್ನುತ್ತಾರೆ ಶಿಕ್ಷಕರು.

*
ಶಾಲೆ ಅಭಿವೃದ್ಧಿಗೆ ಗ್ರಾಮಸ್ಥರು, ಎಸ್‌ಡಿಎಂಸಿಯವರು, ಜನಪ್ರತಿನಿಧಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ. ಶಿಕ್ಷಕರ ಸೇವಾ ಮನೋಭಾವದಿಂದ ಬೆಳವಣಿಗೆ ಕಾಣುತ್ತಿದೆ.
-ಬಿ.ಎಸ್. ಹುವಣ್ಣವರ, ಮುಖ್ಯಶಿಕ್ಷಕ

ಪ್ರತಿಕ್ರಿಯಿಸಿ (+)