ಖಾಸಬಾಗ ಬಸವೇಶ್ವರ ವೃತ್ತ

7
1971ರಲ್ಲಿ ವೃತ್ತಕ್ಕೆ ಬಸವೇಶ್ವರ ವೃತ್ತವೆಂದು ನಾಮಕರಣ

ಖಾಸಬಾಗ ಬಸವೇಶ್ವರ ವೃತ್ತ

Published:
Updated:
Prajavani

ಬೆಳಗಾವಿ: ಇಲ್ಲಿನ ಖಾಸಬಾಗದಲ್ಲಿನ ವೃತ್ತಕ್ಕೆ 12ನೇ ಶತಮಾನದ ಶರಣ ಬಸವೇಶ್ವರರ ಹೆಸರಿಡಲಾಗಿದೆ. ವೃತ್ತದಲ್ಲಿ ಆಕರ್ಷಕ ಬಸವೇಶ್ವರರ ಅಶ್ವಾರೂಢ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.

ಈ ವೃತ್ತ ಶಹಾಪುರ, ಗೋವಾವೇಸ್, ಅಲಾರವಾಡ ರಸ್ತೆ ಹಾಗೂ ವಡಗಾವಿ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ವೃತ್ತದಲ್ಲಿ ಆಟೋರಿಕ್ಷಾ ನಿಲ್ದಾಣ, ಹೋಟೆಲ್, ಬೇಕರಿ ಸೇರಿ ವಿವಿಧ ಸಾಮಗ್ರಿಗಳ ಮಳಿಗೆಗಳಿವೆ. ರಸ್ತೆ ಬದಿಯಲ್ಲಿ ತಳ್ಳು ಗಾಡಿಯಲ್ಲಿ ಹಣ್ಣು ಹಾಗೂ ತರಕಾರಿ ಮಾರುವ ವ್ಯಾಪಾರಿಗಳು ಈ ವೃತ್ತದಲ್ಲಿ ಇರುತ್ತಾರೆ.

ವೃತ್ತದ ವಿಶೇಷ: ಈ ವೃತ್ತಕ್ಕೆ ಬಸವೇಶ್ವರರ ನಾಮಕರಣ ಮಾಡಬೇಕು ಎಂದು ಕನ್ನಡ ಚಳಿವಳಿಗಾರರ ಸಂಘ ಹಾಗೂ ಇನ್ನಿತರ ಕನ್ನಡ ಸಂಘಟನೆಗಳು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದವು. 1971ರಲ್ಲಿ ವೃತ್ತಕ್ಕೆ ಬಸವೇಶ್ವರ ವೃತ್ತವೆಂದು ನಾಮಕರಣ ಮಾಡಲಾಗಿತ್ತು. ವೃತ್ತದಲ್ಲಿ ಬಸವೇಶ್ವರರ ಪ್ರತಿಮೆ ನಿರ್ಮಾಣ ಮಾಡಬೇಕು ಎಂಬುದು ಅನೇಕರ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ ಲಿಂಗಾಯತ ಸೇವಾ ಸಮಿತಿ ವತಿಯಂದ ಬಸವಣ್ಣನವರ ಅಭಿಮಾನಿಗಳು ಹಾಗೂ ದಾನಿಗಳಿಂದ ಹಣ ಸಂಗ್ರಹಿಸಿ, ಬಸವಣ್ಣನವರ ಪ್ರತಿಮೆ ನಿರ್ಮಾಣ ಮಾಡಿಸಲಾಯಿತು. 2018ರ ಏಪ್ರಿಲ್‌ನಲ್ಲಿ ವೃತ್ತದಲ್ಲಿ ಬಸವೇಶ್ವರರ ಅಶ್ವಾರೂಢ ಪ್ರತಿಮೆ ಅನಾವರಣಗೊಳಿಸಲಾಯಿತು. ಇದು ನಗರದಲ್ಲಿರುವ ಬಸವೇಶ್ವರರ ಏಕೈಕ ಅಶ್ವಾರೂಢ ಪ್ರತಿಮೆಯಾಗಿದೆ. ಪ್ರತಿಮೆಯ ಕೆಳಭಾಗದಲ್ಲಿ ವಚನಗಳನ್ನು ಬರೆಸಲಾಗಿದೆ.

ವೃತ್ತದಲ್ಲಿ ಬೃಹತ್ ಸಂತೆ: ಸದಾ ಜನಜಂಗುಳಿಯಿಂದ ಕೂಡಿರುವ ವೃತ್ತದಲ್ಲಿ ಪ್ರತಿ ಭಾನುವಾರ ಬೃಹತ್ ಸಂತೆಯಾಗುತ್ತದೆ. ಬಸವೇಶ್ವರ ವೃತ್ತದಿಂದ ನಾಥ ಪೈ ವೃತ್ತದವೆರೆಗೂ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ತರಕಾರಿ ಹಾಗೂ ಇನ್ನಿತರ ಸಾಮಗ್ರಿ ಮಾರಾಟಕ್ಕೆ ಕೂತಿರುತ್ತಾರೆ. ಸುತ್ತಲಿನ ಗ್ರಾಮಗಳ ರೈತರು ಹಾಗೂ ವ್ಯಾಪಾರಿಗಳು ತಮ್ಮ ಹೊಲಗಳಿಂದ ನೇರವಾಗಿ ತರಕಾರಿ ಹಾಗೂ ಹಣ್ಣುಗಳನ್ನು ತಂದು ಇಲ್ಲಿ ಮಾರಾಟ ಮಾಡುವುದರಿಂದ ತಾಜಾ ಉತ್ಪನ್ನಗಳು ದೊರೆಯುತ್ತವೆ. ನಗರ ಹಾಗೂ ಸುತ್ತಲಿನ ಗ್ರಾಮಗಳ ನೂರಾರು ಜನರು ಈ ಸಂತೆಗೆ ಆಗಮಿಸುತ್ತಾರೆ. 

ಮೂಲ ಸೌಕರ್ಯ ಕಲ್ಪಿಸಿ: ವೃತ್ತದಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು, ಈ ರಸ್ತೆ ದುರಸ್ತಿ ಮಾಡಿಸಬೇಕು. ಕುಡಿಯುವ ನೀರಿನ ಟ್ಯಾಂಕ್ ಇದ್ದು, ಇದನ್ನು ನಿರ್ವಹಣೆ ಮಾಡಬೇಕು. ವೃತ್ತದಲ್ಲಿ ಶೌಚಾಲಯ ನಿರ್ಮಿಸಬೇಕು. ವೃತ್ತದ ಸಮೀಪ ಕಸ ಹಾಗೂ ಕೊಳಚೆ ಸೃಷ್ಟಿಯಾಗುತ್ತಿದ್ದು, ಇದನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು ಎಂದು ಸ್ಥಳೀಯ ನಿವಾಸಿ ವಿನಾಯಕ ಡವಳೆ ಆಗ್ರಹಿಸಿದರು.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !