ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸೋಲಿಸಲು ಕಾಂಗ್ರೆಸ್‌ ಜತೆ ಸ್ನೇಹ

Last Updated 7 ಫೆಬ್ರುವರಿ 2018, 11:38 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯಲು ಕಾಂಗ್ರೆಸ್‌ ಜತೆ ಮೈತ್ರಿಗೆ ಸಿದ್ಧರಿದ್ದೇವೆ. ಆದರೆ, ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ’ ಎಂದು ಭಾರತೀಯ ಕಮ್ಯುನಿಸ್ಟ್‌ ಪಕ್ಷದ (ಸಿಪಿಐ) ರಾಜ್ಯ ಕಾರ್ಯದರ್ಶಿ ಸಾಥಿ ಸುಂದರೇಶ್‌ ಹೇಳಿದರು.

ಸಿಪಿಐ, ಸಿಪಿಎಂ, ರೈತ ಸಂಘ, ಸರ್ವೋದಯ ಪಕ್ಷ ಮತ್ತು ಇತರ ಸಮಾನ ಮನಸ್ಕ ಜಾತ್ಯತೀತ ಪಕ್ಷಗಳು ಕಾಂಗ್ರೆಸ್‌ ಜತೆ ಸೇರಿ ಸೀಟು ಹೊಂದಾಣಿಕೆ ಮಾಡಿಕೊಂಡರೆ ಬಿಜೆಪಿಯನ್ನು ಸುಲಭವಾಗಿ ಸೋಲಿಸಬಹುದು ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಜತೆ ಮಾತುಕತೆ ನಡೆಸುತ್ತೇವೆ. ಇದಕ್ಕಾಗಿ ಸಮಾನ ಮನಸ್ಕ ಪಕ್ಷಗಳಿಗೆ ಕಾಂಗ್ರೆಸ್‌ ಕೆಲವು ಸೀಟುಗಳನ್ನು ಬಿಟ್ಟುಕೊಟ್ಟರೆ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ಸಿದ್ಧ. ಇದರಿಂದ ಮತ ವಿಭಜನೆ ತಪ್ಪಿಸಬಹುದು ಎಂದು ಅವರು ಸಲಹೆ ಮಾಡಿದರು.

‘ಜೆಡಿಎಸ್‌ ಜತೆ ಹೊಂದಾಣಿಕೆಗೆ ನಾವು ಸಿದ್ಧರಿಲ್ಲ. ಅವರು ಯಾವ ಸಮಯದಲ್ಲಿ ಹೇಗಿರುತ್ತಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಈ ಹಿಂದೆ
ಬಿಜೆಪಿ ಜತೆ ಕೈಜೋಡಿಸಿದ್ದರು. ಈ ಚುನಾವಣೆಯಲ್ಲಿ ಜಾತ್ಯತೀತ ಶಕ್ತಿಗಳ ಮಹಾಮೈತ್ರಿ ಆಗಬೇಕೆಂಬುದು ನಮ್ಮ ಅಪೇಕ್ಷೆ’ ಎಂದು ಸುಂದರೇಶ್‌
ಅಭಿಪ್ರಾಯಪಟ್ಟರು.

‘ರಾಜ್ಯದಲ್ಲಿ ನಮ್ಮದೇ ಆದ ಮತ ಬ್ಯಾಂಕ್‌ ಇದೆ. ಮುಖ್ಯವಾಗಿ ಅಂಗನವಾಡಿ ಕಾರ್ಯಕರ್ತೆಯರು, ವಿವಿಧ ವಲಯಗಳ ಕಾರ್ಮಿಕರು, ಎಡ ಪಕ್ಷಗಳ ಜತೆ ಇದ್ದಾರೆ. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲೂ ನಮ್ಮ ವಿಚಾರಧಾರೆ ಬೆಂಬಲಿಸುವ 5 ಸಾವಿರದಿಂದ ರಿಂದ 10 ಸಾವಿರಗಳಷ್ಟು ಮತಗಳು ಇವೆ. ಈ ಮತಗಳು ಕಾಂಗ್ರೆಸ್‌ಗೆ ಸಿಗಬಲ್ಲದು’ ಎಂದರು.

‘ಕಾಂಗ್ರೆಸ್‌ ಜತೆ ಕೈ ಜೋಡಿಸಬಾರದು ಎಂಬುದು ಕೇರಳಕ್ಕೆ ಸೀಮಿತ. ಅಲ್ಲಿ ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ಪ್ರಮುಖ ಎದುರಾಳಿಗಳು. ಉಳಿದ ರಾಜ್ಯಗಳಲ್ಲಿ ಫ್ಯಾಸಿಸ್ಟ್‌ ಶಕ್ತಿಗಳು ಅಧಿಕಾರ ಹಿಡಿಯುವುದನ್ನು ತಡೆಯಲು ಕಾಂಗ್ರೆಸ್‌ ಜತೆ ಕೈಜೋಡಿಸಲು ಸಿದ್ಧ. ಈ ಬಗ್ಗೆ ಕಾಂಗ್ರೆಸ್‌ ಸಕಾರಾತ್ಮಕವಾಗಿ ಆಲೋಚಿಸಬೇಕು’ ಎಂದು ಸಿಪಿಐ ಖಜಾಂಚಿ ವಿಜಯಭಾಸ್ಕರ್‌ ತಿಳಿಸಿದರು.

ಈ ವಿಷಯವನ್ನು ಕಾಂಗ್ರೆಸ್‌ ಜತೆ ಚರ್ಚಿಸಲಾಗುವುದು. ಅದು ಒಪ್ಪಿಕೊಂಡರೆ ಮಹಾಮೈತ್ರಿ ಸಾಧ್ಯವಿದೆ. ಈ ಜಾತ್ಯತೀತ ಮಹಾ ಮೈತ್ರಿ ಜೊತೆ ಜೆಡಿಎಸ್ ಸೇರಿಕೊಳ್ಳಬಹುದು ಎಂದರು.

ನೂತನ ಪದಾಧಿಕಾರಿಗಳ ಆಯ್ಕೆ:ಸಿಪಿಐನ ರಾಜ್ಯ ಕಾರ್ಯದರ್ಶಿಯಾಗಿ ಸಾಥಿ ಸುಂದರೇಶ್‌, ಸಹ ಕಾರ್ಯದರ್ಶಿ ಗಳಾಗಿ ಎಚ್‌.ಕೆ.ರಾಮಚಂದ್ರಪ್ಪ, ಕೆ.ಎಸ್‌.ಜನಾರ್ದನ, ಖಜಾಂಚಿಯಾಗಿ ಡಿ.ಎ.ವಿಜಯಭಾಸ್ಕರ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಲೋಕೇಶ್‌ ಹೇಳಿದರು.

ರಾಜ್ಯ ಸಮ್ಮೇಳನದಲ್ಲೂ ನಿರ್ಣಯ

‘ಪ್ರಗತಿಪರ, ದಲಿತ, ರೈತ ಮತ್ತು ಎಡ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್‌ ಚುನಾವಣಾ ತಂತ್ರ ರೂಪಿಸಬೇಕು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಇದಕ್ಕಾಗಿ ಕಾಂಗ್ರೆಸ್‌ಗೆ ಮನವಿ ಮಾಡಲು ಪಕ್ಷದ 23 ನೇ ರಾಜ್ಯ ಸಮ್ಮೇಳನ ನಿರ್ಧರಿಸಿದೆ’ ಎಂದು ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ.ಲೋಕೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT