ಬೆಳಗಾವಿ ತಾಲ್ಲೂಕು ಎಪಿಎಂಸಿ ಚುನಾವಣೆಯಲ್ಲೂ ‘ಬಣ’ ರಾಜಕಾರಣ?

7
ಪ್ರತಿಷ್ಠೆಯಾಗಿ ಸ್ವೀಕರಿಸಿದ ಸತೀಶ, ಲಕ್ಷ್ಮಿ ಹೆಬ್ಬಾಳಕರ

ಬೆಳಗಾವಿ ತಾಲ್ಲೂಕು ಎಪಿಎಂಸಿ ಚುನಾವಣೆಯಲ್ಲೂ ‘ಬಣ’ ರಾಜಕಾರಣ?

Published:
Updated:
Deccan Herald

ಬೆಳಗಾವಿ: ತಾಲ್ಲೂಕು ಎಪಿಎಂಸಿ (ಕೃಷಿ ಉತ್ಪನ್ನ ಹಾಗೂ ಮಾರುಕಟ್ಟೆ ಸಮಿತಿ) ನೂತನ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಗೆ ಮುಹೂರ್ತ (ಅ.15) ನಿಗದಿಯಾಗಿದ್ದು, ರಾಜಕೀಯ ಚಟುವಟಿಕಗಳು ಗರಿಗೆದರಿವೆ. ಜಾರಕಿಹೊಳಿ ಸಹೋದರರು ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನಡುವೆ ಮತ್ತೊಂದು ರಾಜಕೀಯ ಕದನ ಏರ್ಪಡುವ ಸಾಧ್ಯತೆಯೂ ಇದೆ.

ಜಿಲ್ಲೆಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದ್ದ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಮುಗಿದ ಬೆನ್ನಲ್ಲೇ, ಮತ್ತೊಂದು ಚುನಾವಣೆ ಎದುರಾಗಿದೆ. ಇಲ್ಲೂ ಬಣ ರಾಜಕಾರಣದ ಮೇಲಾಟ ನಡೆಯಲಿದೆ; ಮುಖಂಡರ ಪ್ರತಿಷ್ಠೆಗೆ ಸಾಕ್ಷಿಯಾಗಲಿದೆ ಎಂದು ಹೇಳಲಾಗುತ್ತಿದೆ.

ಎಪಿಎಂಸಿಯಲ್ಲಿ ಒಟ್ಟು 14 ಚುನಾಯಿತ ಹಾಗೂ ಮೂವರು ನಾಮನಿರ್ದೇಶನ ಸೇರಿ 17 ಸದಸ್ಯರಿದ್ದಾರೆ. ಇವರಲ್ಲಿ 10 ಮಂದಿ ಕಾಂಗ್ರೆಸ್ ಬೆಂಬಲಿತರು. ರಾಜಿ ಸೂತ್ರದ ಮೂಲಕ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವಂತೆ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಜಾರಕಿಹೊಳಿ ಸಹೋದರರ ನಡೆ ಏನು, ಹೆಬ್ಬಾಳಕರ ರಾಜಿ–ಸಂಧಾನಕ್ಕೆ ಒಪ್ಪುವರೇ ಎನ್ನುವ ಕುತೂಹಲ ಮೂಡಿದೆ.

ಹಿಂದಿನ ಚುನಾವಣೆಯಲ್ಲಿ

ಹೋದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಂಇಎಸ್ ಬೆಂಬಲದಿಂದ ಶಾಸಕ ಸತೀಶ ಅವರು ಲಕ್ಷ್ಮಿ ಹೆಬ್ಬಾಳಕರ ಬಣದವರನ್ನು ಸೋಲಿಸಿದ್ದರು. ತಮ್ಮ ಬೆಂಬಲಿಗ ಮಹಾರಾಷ್ಟ್ರ ಏಕೀಕರಣ ಸಮಿತಿಯ ನಿಂಗಪ್ಪ ವಿಠ್ಠಲ ಜಾಧವ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಸಿಟ್ಟಾಗಿದ್ದ ಲಕ್ಷ್ಮಿ, ಇತ್ತೀಚೆಗೆ ಮುಗಿದ ತಾಲ್ಲೂಕು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ತಲ್ಲಣ ಉಂಟು ಮಾಡಿತ್ತು. ವರಿಷ್ಠರು ನಡೆಸಿದ ರಾಜಿ–ಸಂಧಾನದ ನಡುವೆಯೂ ತಮ್ಮ ಗುಂಪಿನವರು ಅಧಿಕಾರ ಪಡೆಯುವಂತೆ ಹೆಬ್ಬಾಳಕರ ನೋಡಿಕೊಂಡಿದ್ದರು. ಇದರಿಂದ, ಜಾರಕಿಹೊಳಿ ಸಹೋದರರಿಗೆ ಹಿನ್ನಡೆಯಾಗಿತ್ತು.

ಈಗ, ತಾಲ್ಲೂಕಿನಲ್ಲಿ ಮತ್ತೊಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಬಂದಿರುವುದರಿಂದ ಎಲ್ಲರ ಗಮನ ಜಾರಕಿಹೊಳಿ ಸಹೋದರರು ಹಾಗೂ ಹೆಬ್ಬಾಳಕರ ನಡೆಯತ್ತ ಕೇಂದ್ರೀಕರಿಸಿದೆ. ಕಾಂಗ್ರೆಸ್‌ ಬೆಂಬಲಿತರಿಗೆ ಅಧಿಕಾರ ಖಚಿತ. ಆದರೆ, ಯಾವ ಬಣದವರು ಗದ್ದುಗೆ ಏರುತ್ತಾರೆ ಎನ್ನುವುದು ಚರ್ಚೆಗೆ ಒಳಗಾಗುತ್ತಿದೆ.

ಕದಂಗೆ ಅವಕಾಶ?:

ಗುರುವಾರ ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧ್ಯಕ್ಷ ಸ್ಥಾನ ಸತೀಶ ಜಾರಕಿಹೊಳಿ ಗುಂಪಿಗೆ ದೊರೆಯುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಇನ್ನೊಂದೆಡೆ, ತಮ್ಮ ಗ್ರಾಮೀಣ ಕ್ಷೇತ್ರದಲ್ಲಿ ಬಲ ಹೆಚ್ಚಿಸಿಕೊಳ್ಳಲು ಸಕ್ರಿಯವಾಗಿ ಓಡಾಡುತ್ತಿರುವ ಲಕ್ಷ್ಮಿ ಈ ಚುನಾವಣೆಯನ್ನೂ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ತಮ್ಮ ಗುಂಪಿನವರೇ ಅಧ್ಯಕ್ಷರಾಗಬೇಕು ಎಂದು ತಂತ್ರ ಎಣೆದಿದ್ದಾರೆ.

ಪಕ್ಷದ ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿರುವ ಬುಡಾ ಮಾಜಿ ಅಧ್ಯಕ್ಷ ಯುವರಾಜ ಕದಂ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಪ್ರಯತ್ನವೂ ನಡೆದಿದೆ ಎಂದು ತಿಳಿದುಬಂದಿದೆ. ಇದು ಸಾಧ್ಯವಾದಲ್ಲಿ ಜಾರಕಿಹೊಳಿ ಸಹೋದರರು ಹಾಗೂ ಹೆಬ್ಬಾಳಕರ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ತಾತ್ಕಾಲಿಕ ವಿರಾಮ ಬೀಳಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ನ ರಾಜ್ಯ ನಾಯಕರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !