6 ಸರ್ಕಾರಿ ನೌಕರಿ ಬಿಟ್ಟಿದ್ದ ಯುವಕ ಪಿಎಸ್ಐಗೆ ಆಯ್ಕೆ

ತೆಲಸಂಗ/ ರಾಯಬಾಗ: ಆರು ಸರ್ಕಾರಿ ನೌಕರಿಗಳನ್ನು ತಿರಸ್ಕರಿಸಿದ್ದ ಪ್ರತಿಭಾವಂತ ಹಾಗೂ ಬಡ ಕುಟುಂಬದ ಯುವಕ ಕಾಮಣ್ಣ ಬಸವರಾಜ ಹೆಳವರ ಪಿಎಸ್ಐ ನೌಕರಿಗೆ ಆಯ್ಕೆಯಾಗಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿರುವ ಮಹಾದೇವಿ– ಕೂಲಿ ಮಾಡುವ ಬಸವರಾಜ ದಂಪತಿಯ ಪುತ್ರ ಇವರು. ಬಡತನ ಹಲವು ಸಂಕಟ ತಂದೊಡ್ಡಿದ್ದರೂ ಅಧಿಕಾರಿ ಆಗಬೇಕು ಎಂಬ ಪಣವನ್ನು 25 ವರ್ಷದ ಕಾಮಣ್ಣ ತೊಟ್ಟಿದ್ದಾರೆ.
ಮೂಲತಃ ಅಥಣಿ ತಾಲ್ಲೂಕಿನ ಅನಂತಪೂರದವರು. ಪೋಷಕರು 30 ವರ್ಷಗಳ ಹಿಂದೆ ಗ್ರಾಮ ತೊರೆದು ರಾಯಬಾಗ ತಾಲ್ಲೂಕಿನ ಹಣಬಟ್ಟಿ ಗ್ರಾಮಕ್ಕೆ ವಲಸೆ ಹೋಗಿದ್ದಾರೆ. 10ನೇ ತರಗತಿವರೆಗೆ ಸರ್ಕಾರಿ ಶಾಲೆಯಲ್ಲಿ ಓದಿದ ಕಾಮಣ್ಣ, ಹಾವೇರಿ ಸರ್ಕಾರಿ ಕಾಲೇಜಿನಲ್ಲಿ ಬಿಇ (ಸಿವಿಲ್) ಪದವಿ ಪಡೆದಿದ್ದಾರೆ. ರೈಲು ಇಲಾಖೆಯಲ್ಲಿ ‘ಸಿ’ ದರ್ಜೆ, ಎಫ್ಡಿಎ ಮತ್ತು ಸಿವಿಲ್ ಪೋಲಿಸ್ ಕೆಲಸಕ್ಕೆ 4 ಬಾರಿ ಆಯ್ಕೆಯಾಗಿದ್ದರು. ಆದರೆ ಹೋಗಿರಲಿಲ್ಲ. ಕೆಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ತೋರುವ ಇರಾದೆ ಅವರದು.
‘ತಂದೆ–ತಾಯಿ ಕಷ್ಟಪಟ್ಟು ದುಡಿದು ನನ್ನ ಓದಿಗೆ ತೊಂದರೆ ಆಗದಂತೆ ನೋಡಿಕೊಂಡರು. ಮಾವ ಸುಭಾಸ ಹೆಳವರ ಸಹಾಯ ಮತ್ತು ಪ್ರೋತ್ಸಾಹ ಶಕ್ತಿ ತುಂಬಿತು‘ ಎಂದು ನೆನೆದರು. 6 ಸರ್ಕಾರಿ ನೌಕರಿ ಸಿಕ್ಕಾಗ ತಿರಸ್ಕರಿಸಿದ್ದಕ್ಕೆ ನನ್ನನ್ನು ಹುಚ್ಚ ಎಂದು ಕೆಲವರು ಜರಿದಿದ್ದರು. ಅಧಿಕಾರಿ ಆಗಬೇಕು ಎನ್ನುವುದು ನನ್ನ ಉದ್ದೇಶವಾಗಿದೆ. ಕೆಪಿಎಸ್ಸಿ ಪಾಸ್ ಮಾಡಬೇಕೆಂಬ ಮಹದಾಸೆ ಇಂದಿಗೂ ಇದೆ. ಪಿಎಸ್ಐ ಕೆಲಸದಲ್ಲಿದ್ದುಕೊಂಡೆ ಆ ಗುರಿಯತ್ತ ಸಾಗುತ್ತೇನೆ’ ಎಂದು ಕಾಮಣ್ಣ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.