ಶನಿವಾರ, ನವೆಂಬರ್ 23, 2019
18 °C
ಸಭೆಯಲ್ಲಿ ಬ್ರಿಗೇಡಿಯರ್ ಸೂಚನೆ

ದಂಡು ಮಂಡಳಿ ಚುನಾವಣೆಗೆ ಸಿದ್ಧತೆ: ಸೂಚನೆ

Published:
Updated:

ಬೆಳಗಾವಿ: ‘ಇಲ್ಲಿನ ದಂಡು ಮಂಡಳಿ ಆಡಳಿತ ಮಂಡಳಿಯ 7 ಸದಸ್ಯ ಸ್ಥಾನಗಳಿಗೆ 2020ರ ಜನವರಿಯಲ್ಲಿ ಚುನಾವಣೆ ಬರುವ ಸಾಧ್ಯತೆ ಇದೆ. ಇದನ್ನು ಪಾರದರ್ಶಕವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಮಂಡಳಿ ಅಧ್ಯಕ್ಷ ಹಾಗೂ ಎಂಎಲ್‌ಐಆರ್‌ಸಿ (ಮರಾಠಾ ಲಘು ಪದಾತಿ ದಳ) ಬ್ರಿಗೇಡಿಯರ್ ಗೋವಿಂದ ಕಲ್ವಾಡ ತಿಳಿಸಿದರು.

ಮಂಗಳವಾರ ನಡೆದ ಮಂಡಳಿಯ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರತಿ ಚುನಾವಣೆಯಲ್ಲಿ ಮತದಾರರ ಪಟ್ಟಿ ಗೊಂದಲದ ಸಮಸ್ಯೆ ತಲೆದೋರುತ್ತಿದೆ. ಒಂದಿಲ್ಲೊಂದು ಆಕ್ಷೇಪಣೆ ಕೇಳಿಬರುತ್ತಿವೆ. ಈ ಬಾರಿ ಅಂತಹ ಸಮಸ್ಯೆಗಳು ಮರುಕಳಿಸಲು ಅವಕಾಶ ನೀಡಬಾರದು. ಮತದಾರ ಪಟ್ಟಿಯಲ್ಲಿ ಗೊಂದಲ ಇಲ್ಲದಂತೆ ನೋಡಿಕೊಳ್ಳಬೇಕು. ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು’ ಎಂದು ಸೂಚಿಸಿದರು.

ಪ್ರತಿಕ್ರಿಯಿಸಿದ ಸಿಇಒ ಬಿರ್ಚಸ್ವ, ‘ಚುನಾವಣೆ ಆಯೋಗದ ಮಾರ್ಗಸೂಚಿ ಪ್ರಕಾರ ಮತದಾರ ಪಟ್ಟಿ ಪರಿಷ್ಕರಿಸಲಾಗಿದೆ. ಸೆ. 15ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ಇದರ ಪ್ರಕಾರ 10ಸಾವಿರ ಮತದಾರರಿದ್ದಾರೆ. ದೋಷವಿಲ್ಲದಂತೆ ನೋಡಿಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ವ್ಯತ್ಯಾಸ ಕಂಡುಬಂದಲ್ಲಿ ಮತ್ತೊಮ್ಮೆ ಸ್ಥಳಕ್ಕೇ ಭೇಟಿ ಕೊಟ್ಟು ಪರಿಶೀಲಿಸಬೇಕು. ಅಗತ್ಯವಿದ್ದರೆ, ಸರ್ಕಾರದಿಂದ ಅನುಮತಿ ಪಡೆದು ಮತದಾರ ಪಟ್ಟಿ ಸರಿಪಡಿಬೇಕು’ ಎಂದು ಬ್ರಿಗೇಡಿಯರ್‌ ಹೇಳಿದರು.

ರಿಜ್ವಾನ್ ಬೇಪಾರಿ ಮಾತನಾಡಿ, ‘ನನ್ನ ವಾರ್ಡ್‌ನಲ್ಲಿ ಜನವಸತಿ ಮತ್ತು ರಕ್ಷಣಾ ಪ್ರದೇಶಗಳಿವೆ. ಇದನ್ನು ಬೇರ್ಪಡಿಸಬೇಕು. ಯಾವುದಾದರೂ ಒಂದೇ ಪ್ರದೇಶ ವಾರ್ಡ್‌ನಲ್ಲಿ ಬರುವಂತೆ ವಿಂಗಡಣೆ ಮಾಡಬೇಕು’ ಎಂದು ಕೋರಿದರು.

‘ಸರ್ಕಾರದ ಮಾರ್ಗಸೂಚಿ ಪ್ರಕಾರ ವಿಂಗಡಣೆ ಮಾಡಬೇಕು. ಅದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದು ಸದಸ್ಯರು ತಿಳಿಸಿದರು.

ಮಂಡಳಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಕ್ರಮ ಪುರೋಹಿತ ಪ್ರಮಾಣವಚನ ಸ್ವೀಕರಿಸಿದರು.

ಸದಸ್ಯರಾದ ಸಾಜೀದ್ ಶೇಖ್, ಡಾ.ಮದನ್ ಡೊಂಗರೆ, ಅಲ್ಲಾವುದ್ದೀನ್ ಕಿಲ್ಲೇದಾರ ಇದ್ದರು.

ಪ್ರತಿಕ್ರಿಯಿಸಿ (+)