ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಮಹಾನಗರ ಪಾಲಿಕೆ: ಕರ ಹೆಚ್ಚಿಸದಂತೆ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಆಗ್ರಹ

Last Updated 6 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮಹಾನಗರ ಪಾಲಿಕೆ ಬಜೆಟ್‌ನಲ್ಲಿ ತೆರಿಗೆ ಹೆಚ್ಚಳ ಮಾಡುವ ಬದಲು, ಆದಾಯ ಸೋರಿಕೆ ತಡೆಗಟ್ಟಬೇಕು ಎಂದು ಪಾಲಿಕೆಯ ಎಲ್ಲ ಸದಸ್ಯರು ಹಾಗೂ ಚುನಾಯಿತ ಪ್ರತಿನಿಧಿಗಳು ಒಕ್ಕೊರಲಿನಿಂದ ಆಗ್ರಹಿಸಿದರು.

ಪಾಲಿಕೆ ರಚನೆಯಾಗಿ ಮೊದಲಬಾರಿಗೆ ಮೇಯರ್‌ ಶೋಭಾ ಸೋಮನಾಚೆ ಅವರ ಅಧ್ಯಕ್ಷತೆಯಲ್ಲಿ ಸೋಮವಾರ, 2023–24ನೇ ಸಾಲಿನ ಬಜೆಟ್‌ ಮಂಡನೆಯ ಪೂರ್ವಭಾವಿ ಸಭೆ ನಡೆಯಿತು.

ಆರಂಭದಲ್ಲೇ ಮಾತಿಗೆ ನಿಂತ ಶಾಸಕ ಅಭಯ ಪಾಟೀಲ, ‘ನೀರಿನ ಕರ, ಆಸ್ತಿ ಹೆಚ್ಚಿಸುವ ಯಾವುದೇ ಪ್ರಸ್ತಾಪವನ್ನು ಯಾರೂ ಇಡುವಂತಿಲ್ಲ. ಅದರ ಬದಲಾಗಿ ಆದಾಯದಲ್ಲಿ ಎಲ್ಲಿ ಸೋರಿಕೆ ಆಗುತ್ತಿದೆ ಎಂಬುದನ್ನು ಪತ್ತೆ ಮಾಡಿ ಅದನ್ನು ನಿಯಂತ್ರಿಸಬೇಕು. ಬಜೆಟ್‌ ಮಂಡಿಸುವ ಮುನ್ನ ಆಡಳಿತ ಹಾಗೂ ವಿರೋಧ ಪಕ್ಷದ ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು’ ಎಂದು ವಾದಿಸಿದರು.

‘ಬಜೆಟ್ ಮಂಡನೆಗೆ ಅನಗತ್ಯ ವಿಳಂಬ ಮಾಡಬಾರದು. ಚುನಾವಣೆ ಘೋಷಣೆಯಾದರೆ ಮತ್ತೆ ಒಂದೂವರೆ ತಿಂಗಳು ಆಗುವುದಿಲ್ಲ. ನಗರದ ಅಭಿವೃದ್ಧಿಗೆ 58 ಸದಸ್ಯರೂ ಒಂದು ಎಂಬ ಭಾವನೆಯಿಂದ ಕಾರ್ಯ ನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಶಾಸಕ ಅನಿಲ ಬೆನಕೆ ಮಾತನಾಡಿ, ‘ಬೆಳಗಾವಿ ಅತಿ ಶ್ರೀಮಂತ ಪಾಲಿಕೆ ಎಂಬ ಖ್ಯಾತಿ ಗಳಿಸಿತ್ತು. ಈಗ ಆ ಪರಿಸ್ಥಿತಿ ಇಲ್ಲ. ನಗರದಲ್ಲಿ ಕೊರೊನಾ ಸಂಕಷ್ಟದಿಂದ ಜನರು ಇನ್ನೂ ಹೊರ ಬಂದಿಲ್ಲ. ಕರ ಪಾವತಿಸುವಷ್ಟು ಜನರು ಇನ್ನೂ ಆರ್ಥಿಕವಾಗಿ ಸದೃಢರಾಗಿಲ್ಲ. ಹಾಗಾಗಿ, ಹೆಚ್ಚಳ ಮಾಡಬಾರದು’ ಎಂದರು.

‘ನಗರದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು, ಇದರಿಂದ ಮಕ್ಕಳು, ವೃದ್ಧರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಜನರಿಂದ ಸಾಕಷ್ಟು ದೂರು ಬರುತ್ತಿವೆ. ಹೀಗಾಗಿ ನಗರದಲ್ಲಿ 17 ಸಾವಿರ ನಾಯಿಗಳಿದ್ದು, 10 ಸಾವಿರಕ್ಕೆ ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ. ಇನ್ನೂ ಮಾಡಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಭಯ, ‘ನಾಯಿಗಳನ್ನು ಬೇರೆಡೆ ಒಯ್ದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಬೇಕು. ನಗರ ಬಿಟ್ಟು ಹೊರಗೆ ಒಯ್ದಾಗ ಎಲ್ಲ ನಾಯಿಗಳಿಗೆ ಆಹಾರ, ಕುಡಿಯುವ ನೀರಿನ ವ್ಯವಸ್ಥೆಯೂ ಮಾಡಬೇಕು’ ಎಂದು ಸಲಹೆ ನೀಡಿದರು.

ಆಡಳಿತ ಗುಂಪಿನ ಸದಸ್ಯರಾದ ರಾಜಶೇಖರ ಡೋಣಿ, ಹನುಮಂತ ಕೊಂಗಲಿ, ಗಿರೀಶ್ ಧೋಂಗಡಿ, ಶಂಕರ ಪಾಟೀಲ ಮಾತನಾಡಿ, ಹಿಂದಿನ ಬಜೆಟ್ ಗುರಿ ಮತ್ತು ಸಂಗ್ರಹಣೆ ಮತ್ತು ಹೊಸ ತೆರಿಗೆಗಳನ್ನು ವಿಧಿಸದಂತೆ ಬಜೆಟ್ ಅಂದಾಜು ಮಾಡಬೇಕು ಎಂದರು.

ಪ್ರತಿಪಕ್ಷದ ಸದಸ್ಯರಾದ ಮುಜಾಮಿಲ್ ಡೋಣಿ, ಅಜೀಂ ಪಟವೇಗಾರ್, ಬಾಬಾಜಾನ್ ಮಟ್ವಾಲೆ, ರಿಯಾಜ್ ಕಿಲ್ಲೇದಾರ ಇತರರು ಬಜೆಟ್‌ನಲ್ಲಿ ಮೂಲಸೌಕರ್ಯ ಕಲ್ಪಿಸಲು ಒತ್ತು ನೀಡಬೇಕು’ ಎಂದು ಒತ್ತಾಯಿಸಿದರು.

ಆಯುಕ್ತ ಡಾ.ರುದ್ರೇಶ ಘಾಳಿ ಇತರ ವಿಭಾಗಗಳ ಅಧಿಕಾರಿಗಳು ಹಾಗೂ ಸದಸ್ಯರು ಇದ್ದರು.

‘ದಂಡು ಮಂಡಳಿ’ಗೆ ನೀರು ನಿಲ್ಲಿಸಲು ತಾಕೀತು
‘ದಂಡು ಮಂಡಳಿ (ಕೆಂಟೋನ್ಮೆಂಟ್‌ ಬೋರ್ಡ್‌) ಮಹಾನಗರ ಪಾಲಿಕೆಗೆ ಭರಿಸಬೇಕಾದ ₹ 4 ಕೋಟಿ ನೀರಿನ ಕರ ಕೊಡಬೇಕಿದೆ. ಆದರೂ ಪಾಲಿಕೆ ಅವರಿಗೆ ಸಹಕಾರ ನೀಡುತ್ತ ಬಂದಿದೆ. ಆದರೆ, ಅವರಿಂದಲೇ ಪಾಲಿಕೆಗೆ ಸಹಕಾರ ಸಿಗುತ್ತಿಲ್ಲ. ಮಂಗಳವಾರದಿಂದಲೇ ಅಲ್ಲಿಗೆ ನೀರು ಸರಬರಾಜು ನಿಲ್ಲಿಸಬೇಕು’ ಎಂದು ಶಾಸಕ ಅಭಯ ಪಾಟೀಲ ತಾಕೀತು ಮಾಡಿದರು.

‘ಮಂಡಳಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ನೀರಿನ ಕರ ಬಾಕಿ ಉಳಿಸಿಕೊಂಡಿದ್ದಲ್ಲದೇ, ಪೈಪ್‌ಲೈನ್‌ ಅಳವಡಿಸಲು ಮಂಡಳಿಗೆ ₹ 60 ಲಕ್ಷ ಬಾಡಿಗೆ ಕೊಡಬೇಕು ಎಂದು ಕೇಳುತ್ತಿದ್ದಾರೆ. ಇಂಥವರನ್ನು ಸಭೆಗೆ ಕರೆಯಿಸಿ ತಕ್ಕ ಶಾಸ್ತಿ ಮಾಡಬೇಕು’ ಎಂದರು.

‘ಒಂದು ವೇಳೆ ಪಾಲಿಕೆಯು ಕೆಂಟೋನ್ಮೆಂಟ್‌ ಬೋರ್ಡ್‌ಗೆ ನೀರು ಸರಬರಾಜು ನಿಲ್ಲಿಸಲದೇ ಇದ್ದರೆ, ನಾನು ಪಾಲಿಕೆ ಆಯುಕ್ತರ ನಿವಾಸಕ್ಕೆ ಬೀಗ ಜಡಿಯುತ್ತೇನೆ’ ಎಂದೂ ಎಚ್ಚರಿಕೆ ನೀಡಿದರು.

ಇದಕ್ಕೆ ಶಾಸಕ ಅನಿಲ ಬೆನಕೆ ಸೇರಿದಂತೆ ಎಲ್ಲ ಸದಸ್ಯರೂ ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT