ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸುವ್ಯವಸ್ಥೆ: ಕ್ರಮಕ್ಕೆ ಸಚಿವ ಸೂಚನೆ

Last Updated 4 ಏಪ್ರಿಲ್ 2020, 10:09 IST
ಅಕ್ಷರ ಗಾತ್ರ

ಬೆಳಗಾವಿ: ಲಾಕ್ ಡೌನ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಗತ್ಯ ಪೊಲೀಸ್ ಬಂದೋಸ್ತ್ ಮತ್ತಿತರ ಕ್ರಮಗಳ ಮೂಲಕ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಯಂತ್ರಿಸಬೇಕು. ಜನರಿಗೆ ದಿನಬಳಕೆ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಅನಾನುಕೂಲ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ನಿರ್ದೇಶನ ನೀಡಿದರು.

ಕೋವಿಡ್- 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪ್ರವಾಸಿಮಂದಿರದಲ್ಲಿ ಶನಿವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಮೂರು ಪಾಸಿಟಿವ್ ಪ್ರಕರಣ ಕಂಡುಬಂದಿರುವುದರಿಂದ ಸೋಂಕು ಹರಡದಂತೆ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.

ಕಾರ್ಮಿಕರು, ಅಲೆಮಾರಿಗಳು ಮತ್ತು ನಿರ್ಗತಿಕರಿಗೆ ವಸತಿ ಮತ್ತು ಊಟೋಪಹಾರದ ವ್ಯವಸ್ಥೆ ಬಗ್ಗೆ ಸಚಿವರು ಮಾಹಿತಿ ಪಡೆದರು.

ಕೊರೊನಾ ಹರಡುವುದನ್ನು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಂದಾಯ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಎಲ್ಲ ಬಗೆಯ ನೆರವನ್ನು ಸರ್ಕಾರ ನೀಡಲಿದೆ. ದಿನಸಿ, ತರಕಾರಿ ಮತ್ತಿತರ ಅಗತ್ಯವಿರುವ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಸಲು ಈಗಿರುವ ವ್ಯವಸ್ಥೆ ಮುಂದುವರಿಸುವಂತೆ ಸಚಿವರು ತಿಳಿಸಿದರು.

ಖಾಸಗಿ ವೈದ್ಯಕೀಯ ಸೇವೆ; ಪಾಸ್ ನೀಡಲು ನಿರ್ದೇಶನ

ನಗರ ಸೇರಿದಂತೆ ಜಿಲ್ಲೆಯಲ್ಲಿ ಸಾಮಾನ್ಯ ವೈದ್ಯಕೀಯ ಸೇವೆಗೆ ಮುಂದಾಗುವ ಖಾಸಗಿ ವೈದ್ಯರು ಮತ್ತು ಕ್ಲಿನಿಕ್ ಗಳಿಗೆ ಪಾಸ್ ಸೇರಿಂದತೆ ಅಗತ್ಯ ನೆರವು ನೀಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರದ ಮಾರ್ಗಸೂಚಿಯ ಪ್ರಕಾರ ಘೋಷಿತ ಕೊಳಗೇರಿ ಪ್ರದೇಶಗಳಲ್ಲಿ ಉಚಿತ ಹಾಲು ವಿತರಣೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಉಚಿತ ಹಾಲು ವಿತರಣೆ ಹೊಸದಾಗಿ ಆರಂಭಿಸಿರುವುದರಿಂದ ಮೊದಲ ಒಂದೆರಡು ದಿನಗಳಲ್ಲಿ ತೊಂದರೆ ಕಂಡುಬರುವುದು ಸಹಜ. ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಹಾಲು ವಿತರಣೆಗೆ ಸಂಬಂಧಿಸಿದಂತೆ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಇರುವ ಕೊಳಗೇರಿಗಳಲ್ಲಿನ ಕುಟುಂಬಗಳ ಮಾಹಿತಿಯನ್ನು ನೀಡಿದರೆ ಕೆ.ಎಂ.ಎಫ್ ಜತೆ ಮಾತನಾಡಿ ಅಗತ್ಯ ಇಂಡೆಂಟ್ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಮಹಿಳಾ ಮತ್ತು ಮಕ್ಕಳ‌ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಪಡಿತರ ವಿತರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ನೋಂದಣಿ ಮಾಡಿಕೊಂಡಿರದ ಕಾರ್ಮಿಕರಿಗೂ ಸರ್ಕಾರದ ಸಹಾಯಧನ ನೀಡುವ ಬಗ್ಗೆ ಪರಿಶೀಲಿಸಲು ಸಲಹೆ ನೀಡಿದರು.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ಐಸೋಲೇಷನ್ ವಾರ್ಡನಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯವಿರುವ ಸಾಮಗ್ರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ನಗರದ ಪ್ರದೇಶದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಜನಸಂಚಾರ ನಿಯಂತ್ರಿಸಲು ಇನ್ನಷ್ಟು ಬಿಗಿ ಕ್ರಮದ ಅಗತ್ಯವಿದೆ ಎಂದು ಶಾಸಕ ಅಭಯ ಪಾಟೀಲ ಪ್ರತಿಪಾದಿಸಿದರು.ದಿನಸಿ ಅಂಗಡಿ ಮತ್ತು ತರಕಾರಿ ಖರೀದಿ ನೆಪದಲ್ಲಿ ಜನರು ಸಾಮಾಜಿಕ ಅಂತರ ಪಾಲಿಸದಿರುವುದು ಕಂಡುಬಂದಿದೆ ಎಂದು ಗಮನಕ್ಕೆ ತಂದರು. ಶಾಸಕ ಅನಿಲ ಬೆನಕೆ, ಸಂಸ್ಥೆಯ ಕ್ವಾರಂಟೈನ್ ನಲ್ಲಿರುವವರ ಬಗ್ಗೆ ನಿಗಾ ವಹಿಸಬೇಕಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಒದಗಿಸಿದರು.

ದೆಹಲಿಯ ಧಾರ್ಮಿಕ ಸಭೆಗೆ ಹೋಗಿ ಬಂದ 96 ಮಂದಿಯಲ್ಲಿ 80 ಜನರ ಪತ್ತೆ ಮಾಡಲಾಗಿದೆ. ಉಳಿದ ಹದಿನಾರು ಜನರು ಬೇರೆ ಬೇರೆ ರಾಜ್ಯಗಳಲ್ಲಿ ಇದ್ದಾರೆ. ಅವರ ಬಗ್ಗೆ ಆಯಾ ರಾಜ್ಯಕ್ಕೆ ಮಾಹಿತಿ ನೀಡಲಾಗಿದೆ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ದೆಹಲಿಯಿಂದ ಬಂದ 80 ಜನರ ಪೈಕಿ 33 ಜನರ ಗಂಟಲು ದ್ರವ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. 3 ಜನರ ವರದಿ ಪಾಸಿಟಿವ್ ಬಂದಿದ್ದು, 30 ನೆಗೆಟಿವ್ ಎಂದು ವರದಿ ಬಂದಿದೆ. ಎಲ್ಲರ ಆರೋಗ್ಯ ತಪಾಸಣೆ ಮಾಡಿ ವಯಸ್ಸು, ಮತ್ತಿತರ ಕಾರಣಕ್ಕೆ 33 ಜನರ ಗಂಟಲು ದ್ರವದ ಮಾದರಿ ಕಳುಹಿಸಲಾಗಿತ್ತು ಎಂದು ವಿವರಿಸಿದರು.

ಪಾಸಿಟಿವ್ ಇರುವವರ ಜತೆ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕೂಡ ಗುರುತಿಸಿ, ಅರೋಗ್ಯ ತಪಾಸಣೆ ಮಾಡಿ ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೂರು ಪ್ರದೇಶ ಕಂಟೈನ್ಮೆಂಟ್ ಝೋನ್

ಪಾಸಿಟಿವ್ ಪ್ರಕರಣ ವರದಿಯಾಗಿರುವ ಹಿರೇಬಾಗೇವಾಡಿ, ಬೆಳಗುಂದಿ ಮತ್ತು ನಗರದ ಕ್ಯಾಂಪ್ ಪ್ರದೇಶದ ಕಸಾಯಿಗಲ್ಲಿಯನ್ನು ನಿಷೇಧಿತ ಪ್ರದೇಶ ( ಕಂಟೈನ್ಮೆಂಟ್ ಝೋನ್) ಎಂದು ಘೋಷಿಸಿ, ಜನಸಂಚಾರ ಮತ್ತು ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಖಾಸಗಿ ವೈದ್ಯಕೀಯ ಸೇವೆ ನೀಡಲು ಮುಂದಾಗಿರುವ ವೈದ್ಯರಿಗೆ ಈಗಾಗಲೇ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ. ಮುನ್ಯಾಳ ತಿಳಿಸಿದರು. ವಿಧಾನಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಅಭಯ್ ಪಾಟೀಲ, ಅನಿಲ್ ಬೆನಕೆ,ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT