ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪಘಾತ ಪುನರ್‌ರೂಪಿಸಿದ ವರದಿ’ ಆಧರಿಸಿ ತೀರ್ಪು

Last Updated 10 ಅಕ್ಟೋಬರ್ 2020, 10:52 IST
ಅಕ್ಷರ ಗಾತ್ರ

ಬೆಳಗಾವಿ: ಅಪಘಾತ ಪ್ರಕರಣವೊಂದರಲ್ಲಿ ಇಲ್ಲಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು, ‘ಅಪಘಾತ ಘಟನೆ ಪುನರ್‌ರೂಪಿಸಿದ (ಆಕ್ಸಿಡೆಂಟ್ ರೀಕನ್‌ಸ್ಟ್ರಕ್ಷನ್ ರಿಪೋರ್ಟ್‌) ವೈಜ್ಞಾನಿಕ ವರದಿ’ ಆಧರಿಸಿ ತೀರ್ಪು ನೀಡಿ ಗಮನಸೆಳೆದಿದೆ.

2013ರ ಫೆ. 15ರಂದು ಹುಬ್ಬಳ್ಳಿ–ಧಾರವಾಡ ಬೈಪಾಸ್‌ನಲ್ಲಿ ಗಬ್ಬೂರು ಮತ್ತು ತಾರಿಹಾಳ ಗೇಟ್ ನಡುವೆ ಕಾರು–ಲಾರಿ ಮುಖಾಮುಖಿ ಡಿಕ್ಕಿಯಾಗಿತ್ತು. ಕಾರಿನ ಚಾಲಕ ಸೇರಿ ಅದರಲ್ಲಿದ್ದ ಮೂವರು ಸಾವಿಗೀಡಾಗಿ, ಒಬ್ಬರು ಗಾಯಗೊಂಡಿದ್ದರು. ಇವರಲ್ಲಿ ಇಬ್ಬರು ಬೆಳಗಾವಿಯವರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರು ಹಾಗೂ ಲಾರಿ ಚಾಲಕರಿಬ್ಬರ ಮೇಲೂ ಆರೋಪ ಪಟ್ಟಿ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಐಸಿಐಸಿಐ ಲೋಂಬಾರ್ಡ್‌ ಜನರಲ್ ವಿಮಾ ಕಂಪನಿ ಪರ ವಕೀಲ ಹುಬ್ಬಳ್ಳಿಯ ಎಸ್‌.ಕೆ. ಕಾಯಕಮಠ, ‘ಚಾಲಕನ ನಿರ್ಲಕ್ಷ್ಯದಿಂದಾಗಿ ಕಾರು ಲಾರಿಗೆ ಡಿಕ್ಕಿಯಾಗಿದೆ. ಕಾರು ಅತಿ ವೇಗವಾಗಿ ಚಲಿಸಿದ್ದರಿಂದ ಅಪಘಾತವಾಗಿದೆ. ಇದರಲ್ಲಿ ಲಾರಿ ಚಾಲಕನ ಪಾತ್ರವಿಲ್ಲವಾದ್ದರಿಂದ ಪರಿಹಾರ ಕೊಡಬೇಕಿಲ್ಲ’ ಎಂದು ವಾದಿಸಿದ್ದರು.

‘ಮುಂಬೈನ ಆಟೊಮೋಟಿವ್ ರಿಸರ್ಚ್ ಸೆಂಟರ್ ಅಶ್ಯೂರ್ ಸಂಸ್ಥೆಯಿಂದ ಸಿದ್ಧಪಡಿಸಿದ ವೈಜ್ಞಾನಿಕ ವಿಶ್ಲೇಷಣೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ವರದಿ ನೀಡಿದವರನ್ನೂ ಸಾಕ್ಷಿ ಮಾಡಿದ್ದೆವು’ ಎಂದು ವಕೀಲ ಕಾಯಕಮಠ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕಾರು–ಲಾರಿ ನಡುವೆ ಸಂಭವಿಸಿದ ಅಪಘಾತದ ಚಿತ್ರಗಳು, ದಾಖಲೆಗಳನ್ನು ಆಧರಿಸಿ, ನ್ಯೂಟನ್‌ನ ಚಲನೆಯ ನಿಯಮಗಳು ಹಾಗೂ ‘ಲಾ ಆಫ್‌ ಇನರ್ಷಿಯಾ’ ಪ್ರಕಾರ ವಿಶ್ಲೇಷಣೆ ನಡೆಸಲಾಗಿದೆ. ಅದರಂತೆ, ಕಾರು 95 ಕಿ.ಮೀ. ಹಾಗೂ ಲಾರಿ 38 ಕಿ.ಮೀ. ವೇಗವಾಗಿ ಚಲಿಸುತ್ತಿತ್ತು ಎಂಬುದು ಗೊತ್ತಾಗಿದೆ. ಈ ವರದಿ ಆಧರಿಸಿ ನ್ಯಾಯಾಲಯ ತೀರ್ಪು ನೀಡಿದೆ. ಕಾರಿನ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಆದೇಶಿಸಿದೆ. ಕಾರು ಚಾಲಕನ ವಾರಸುದಾರರು ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ. ಕಾರಿಗೆ ಆದ ನಷ್ಟ ಕೋರಿದ್ದ ಅರ್ಜಿಯನ್ನೂ ವಜಾಗೊಳಿಸಿದೆ. ಕಾರಿನ ವಿಮೆ ಕಂಪನಿ ಪರಿಹಾರ ನೀಡುವಂತೆ ನ್ಯಾಯಾಧೀಶಯಶವಂತ ತಾವರೆ ಅವರು ತೀರ್ಪಿನಲ್ಲಿ ತಿಳಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಅಪಘಾತ ಸಂಭವಿಸಿದ ಸ್ಥಳದಲ್ಲಿ ಘಟನೆಯನ್ನು ಪುನರ್ ಸೃಷ್ಟಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ನ್ಯಾಯಾಲಯಗಳು ಪೊಲೀಸರು ಸಲ್ಲಿಸುವ ಎಫ್‌ಐಆರ್, ಮಹಜರು ವರದಿ ಹಾಗೂ ಆರೋಪ ಪಟ್ಟಿ ಆಧರಿಸಿ, ದಾಖಲೆಗಳನ್ನು ಪರಿಶೀಲಿಸಿ ಪರಿಹಾರ ನಿಗದಿಪಡಿಸುತ್ತವೆ. ಆದರೆ, ಈ ಪ್ರಕರಣದಲ್ಲಿ ವೈಜ್ಞಾನಿಕ ಅಂಶಗಳಿಗೆ ಕೋರ್ಟ್‌ ಆದ್ಯತೆ ನೀಡಿದೆ’ ಎಂದು ತಿಳಿಸಿದರು.

ಪ್ರತಿವಾದಿ ಪರ ವಕೀಲರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT