ಶನಿವಾರ, ಏಪ್ರಿಲ್ 4, 2020
19 °C

ಕೊರೊನಾ ಭೀತಿ ಹಿನ್ನೆಲೆ: ಬೆಳಗಾವಿ 5ನೇ ದಿನವೂ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಕೊರೊನಾ ವೈರಾಣು ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗುರುವಾರ ಸತತ 5ನೇ ದಿನವೂ ಬೆಳಗಾವಿ ಸ್ತಬ್ಧಗೊಂಡಿದೆ. ಜೀವನಾವಶ್ಯಕ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು.

ಹಾಲು ವಿತರಣೆ, ದಿನಸಿ, ತರಕಾರಿ ಹಾಗೂ ಹಣ್ಣಿನ ಅಂಗಡಿಗಳು ಅಲ್ಲಲ್ಲಿ ಕಾರ್ಯನಿರ್ವಹಿಸಿದವು. ಕೆಲವು ಸರ್ಕಾರಿ ಕಚೇರಿಗಳು, ಆಸ್ಪತ್ರೆ (ತುರ್ತು ಸೇವೆ), ಔಷಧಿ ಅಂಗಡಿಗಳು, ಪೆಟ್ರೋಲ್‌ ಬಂಕ್‌ಗಳು ಕಾರ್ಯನಿರ್ವಹಿಸಿದವು.

ಬಸ್‌, ಆಟೊ, ಟ್ರಕ್‌ ಹಾಗೂ ಇತರ ವಾಹನಗಳ ಸಂಚಾರವಿಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿದ್ದವು.  ಅವಶ್ಯಕ ವಸ್ತುಗಳನ್ನು ಸಾಗಿಸುವ ಹಾಗೂ ಅವಶ್ಯಕ ಸೇವೆ ನೀಡುವ ಸಿಬ್ಬಂದಿಗಳ ವಾಹನಗಳಿಗೆ ಮಾತ್ರ ಸಂಚರಿಸಲು ಪೊಲೀಸರು ಅನುವು ಮಾಡಿಕೊಟ್ಟಿದ್ದರು. ಹೀಗಾಗಿ ರಸ್ತೆಗಳಲ್ಲಿ ವಾಹನಗಳ ಸಂಚಾರ ವಿರಳವಾಗಿತ್ತು. ಬಹುತೇಕ ರಸ್ತೆಗಳು, ಪ್ರದೇಶಗಳು ಬಿಕೋ ಎನ್ನುತ್ತಿದ್ದವು. ನಗರ ಹಾಗೂ ಹೊರ ಪ್ರದೇಶಗಳಿಗೆ ಸಂಪೂರ್ಣವಾಗಿ ಬಸ್‌ ಸಂಚಾರ ಬಂದ್‌ ಮಾಡಲಾಗಿದೆ. ಬಸ್‌ ನಿಲ್ದಾಣ ಖಾಲಿ ಖಾಲಿಯಾಗಿದೆ.

ಸಾಮಾಜಿಕ ಅಂತರ

ದಿನಸಿ ಹಾಗೂ ಹಾಲು ಮಾರಾಟ ಮಾಡುವ ಅಂಗಡಿಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಯಿತು. ಅಂಗಡಿಯ ಎದುರು 2ರಿಂದ 3 ಅಡಿಗಳ ಅಂತರದಲ್ಲಿ ಗುರುತು ಮಾಡಲಾಗಿತ್ತು. ಆ ಗುರುತಿನ ಮೇಲೆ ನಿಂತು ಗ್ರಾಹಕರು ಸಾಮಾನುಗಳನ್ನು ಖರೀದಿಸಿದರು. ಯಾವುದೇ ನೂಕುನುಗ್ಗಲು ಕಂಡುಬರಲಿಲ್ಲ. ಅಗತ್ಯ ವಸ್ತುಗಳಿಗಾಗಿ ಕಳೆದ 4 ದಿನ ಪರದಾಡಿದ್ದ ಪರಿಸ್ಥಿತಿ ಇರಲಿಲ್ಲ. ಎಲ್ಲೆಡೆ ಸುಲಭವಾಗಿ ಸಿಗುತ್ತಿತ್ತು. ಜನರು ಯಾವುದೇ ತೊಂದರೆ ಇಲ್ಲದೇ ಖರೀದಿಸಿದರು.

ಪೊಲೀಸ್‌ ಬಿಗಿ ಬಂದೋಬಸ್ತ್‌

ನಗರದ ಎಲ್ಲ ಪ್ರಮುಖ ಬೀದಿಗಳಲ್ಲಿ ಹಾಗೂ ವೃತ್ತಗಳಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಇದೆ. ರಸ್ತೆಗಳಲ್ಲಿ ಸಂಚರಿಸುತ್ತಿರುವ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸಿದರು. ಅವಶ್ಯಕ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಜನರಿಗೆ ಸಂಚರಿಸಲು ಅವಕಾಶ ನೀಡಿದರು. ಇನ್ನುಳಿದವರನ್ನು ವಾಪಸ್‌ ಕಳುಹಿಸಿದರು.

ಹಾಲು, ತರಕಾರಿ, ದಿನಸಿ ಮಾರಾಟ ಮಾಡುವವರು, ಸರ್ಕಾರಿ ಅಧಿಕಾರಿಗಳು, ವೈದ್ಯಕೀಯ ಸೇವೆ ನೀಡುವವರು ಹಾಗೂ ಮಾಧ್ಯಮದವರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಿದರು.

ಊಟದ ವ್ಯವಸ್ಥೆ

ಬೀದಿ ಬದಿಯ ನಿರ್ಗತಿಕರಿಗೆ, ಭಿಕ್ಷುಕರಿಗೆ ಹಾಗೂ ಕೂಲಿಕಾರ್ಮಿಕರಿಗೆ ಮಹಾನಗರ ಪಾಲಿಕೆ ವತಿಯಿಂದ ಊಟ ವಿತರಿಸಲಾಯಿತು. ಗಾಂಧಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಧ್ಯಾಹ್ನ ಹಾಗೂ ಸಂಜೆ ತಯಾರಿಸಲಾದ ಅಡುಗೆಯನ್ನು ವಿತರಿಸಲಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು