ಬೆಳಗಾವಿ: ‘ಸಾಲಗಾರರಿಗೆ ಕಿರುಕುಳ ನೀಡುವ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು.
ಇಲ್ಲಿ ಗುರುವಾರ ನಡೆದ ಹಣಕಾಸು ಸಂಸ್ಥೆಗಳು, ಬ್ಯಾಂಕ್ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕೆಲ ಖಾಸಗಿ ಹಣಕಾಸು ಸಂಸ್ಥೆಗಳು ಮರ್ಧ್ಯವತಿಗಳನ್ನು ಬಳಸಿಕೊಂಡು ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡುತ್ತಿರುವ ಮಾಹಿತಿ ಇದೆ. ಇದು ಮುಂದುವರಿಯಬಾರದು. ಒತ್ತಾಯದಿಂದ ಸಾಲ ಮರುಪಾವತಿ ಸೇರಿದಂತೆ ಇತರ ತೊಂದರೆ ಕೊಟ್ಟರೆ ಅಂತಹ ಸಂಸ್ಥೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು’ ಎಂದರು.
‘ಪ್ರವಾಹ ಹಾಗೂ ಕೋವಿಡ್ ಲಾಕ್‌ಡೌನ್‌ದಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಬ್ಯಾಂಕ್‌ಗಳು ಈ ಪರಿಸ್ಥಿತಿ ಅರಿಯಬೇಕು’ ಎಂದು ತಿಳಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕಿ ಜಯಶ್ರೀ ಗುರಣ್ಣವರ, ‘ಹೋದ ವರ್ಷ ಪ್ರವಾಹದಿಂದ ಆರ್ಥಿಕ ಸಂಕಷ್ಟದಲ್ಲಿದ್ದ ರೈತರಿಗೆ ಲಾಕ್‌ಡೌನ್‌ದಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ. ಈಚೆಗೆ ಅತಿವೃಷ್ಟಿಯಿಂದಲೂ ಬಹಳಷ್ಟು ತೊಂದರೆಯಾಗಿದೆ. ಪರಿಸ್ಥಿತಿ ಹೀಗಿದ್ದರೂ ಬ್ಯಾಂಕ್, ಸೊಸೈಟಿ ಹಾಗೂ ಸ್ವಸಹಾಯ ಸಂಘದವರು ಸಾಲಗಾರರ ಮೇಲೆ ಮರುಪಾವತಿಗೆ ಒತ್ತಡ ಹಾಕುತ್ತಿದ್ದಾರೆ. ಸಾಲ ಪಡೆದ ರೈತರ ಮನೆ ಮುಂದೆ ಕುಳಿತುಕೊಳ್ಳುತ್ತಿದ್ದಾರೆ. ಕಿರುಕುಳ ನೀಡುತ್ತಿರುವುದೂ ವರದಿಯಾಗಿದೆ. ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ಮತ್ತೊಬ್ಬ ಸಂಚಾಲಕ ಚೂನಪ್ಪ ಪೂಜೇರಿ, ‘ಜಿಲ್ಲಾಡಳಿತವು ಸಂಕಷ್ಟದಲ್ಲಿರುವ ರೈತರ ಸಹಾಯಕ್ಕೆ ಬರಬೇಕು’ ಎಂದು ಕೋರಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಎಚ್.ವಿ., ಲೀಡ್ ಬ್ಯಾಂಕ್ ವ್ಯವಸ್ಥಾಪಕ ರಾಹುಲ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.