ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಮತದಾರರ ಸಂಖ್ಯೆ 37.22 ಲಕ್ಷಕ್ಕೆ ಏರಿಕೆ

Last Updated 16 ಜನವರಿ 2019, 13:07 IST
ಅಕ್ಷರ ಗಾತ್ರ

ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಮತದಾರರ ಸಂಖ್ಯೆ 37,22,034ಕ್ಕೆ ಏರಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಹೇಳಿದರು.

ಇಲ್ಲಿನ ತಮ್ಮ ಕಚೇರಿಯ ಸಭಾಂಗಣದಲ್ಲಿ ಬುಧವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

ಜಿಲ್ಲೆಯಲ್ಲಿ ಅಂದಾಜು 52 ಲಕ್ಷ ಜನಸಂಖ್ಯೆ ಇದೆ. ಇವರ ಪೈಕಿ ಪುರುಷ ಮತದಾರರ ಸಂಖ್ಯೆ 18,87,283 ಹಾಗೂ ಮಹಿಳಾ ಮತದಾರರ ಸಂಖ್ಯೆ 18,34,751 ಇದೆ. ಲೈಂಗಿಕ ಅಲ್ಪಸಂಖ್ಯಾತರ ಸಂಖ್ಯೆ ನಮೂದಾಗಿಲ್ಲ ಎಂದು ಹೇಳಿದರು.

ಕಳೆದ ವರ್ಷದ ಅಕ್ಟೋಬರ್‌ 10ರಂದು ಸಿದ್ಧಪಡಿಸಲಾಗಿದ್ದ ಕರಡು ಮತದಾರರ ಪಟ್ಟಿಯಲ್ಲಿ 18,84,480 ಪುರುಷರು 18,32,104 ಮಹಿಳಾ ಮತದಾರರು ಹಾಗೂ 117 ಲೈಂಗಿಕ ಅಲ್ಪಸಂಖ್ಯಾತರು ದಾಖಲಾಗಿದ್ದರು. ಇದಕ್ಕೆ ಹೋಲಿಸಿದರೆ ಈಗ ಪರಿಷ್ಕರಿಸಲಾಗಿರುವ ಪಟ್ಟಿಯಲ್ಲಿ 5,333 ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ಪುರುಷರ ಸಂಖ್ಯೆಯಲ್ಲಿ 2,803 ಹಾಗೂ ಮಹಿಳೆಯರ ಸಂಖ್ಯೆಯಲ್ಲಿ 2,647 ಏರಿಕೆಯಾಗಿದೆ.

‘ಮತದಾರರ ಭಾವಚಿತ್ರವನ್ನು ಒಳಗೊಂಡಂತೆ ಮತಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಕೆಲವೇ ಕೆಲವು ಮತದಾರರ ಭಾವಚಿತ್ರ ಸಿಕ್ಕಿಲ್ಲ. ಅವರ ಸಂಪರ್ಕಕ್ಕೆ ಪ್ರಯತ್ನಿಸಲಾಗುತ್ತಿದೆ. ಸಿಕ್ಕ ತಕ್ಷಣ ಇವರ ಭಾವಚಿತ್ರವನ್ನೂ ಅಳವಡಿಸಲಾಗುವುದು’ ಎಂದು ಅವರು ಹೇಳಿದರು.

‘ಪ್ರತಿ 1,000 ಪುರುಷರಿಗೆ ಹೋಲಿಸಿದರೆ 972 ಮಹಿಳಾ ಮತದಾರರು ಜಿಲ್ಲೆಯಲ್ಲಿದ್ದಾರೆ. ರಾಜ್ಯದಲ್ಲಿ ಈ ಅನುಪಾತ 975 ಇದ್ದು, ಜಿಲ್ಲೆಯಲ್ಲಿ ಸ್ವಲ್ಪ ಕಡಿಮೆಯಾಗಿದೆ’ ಎಂದು ತಿಳಿಸಿದರು.

26 ಹೊಸ ಮತಗಟ್ಟೆ:

ಗ್ರಾಮೀಣ ಪ್ರದೇಶಗಳಲ್ಲಿ 1,300 ಹಾಗೂ ನಗರ ಪ್ರದೇಶಗಳಲ್ಲಿ 1,400 ಮತದಾರರಿಗೆ ಮತಗಟ್ಟೆ ರಚಿಸಲಾಗಿದೆ. ಈ ಮೊದಲು 4,408 ಮತಗಟ್ಟೆಗಳಿದ್ದವು. ಇವುಗಳ ಸಂಖ್ಯೆ ಈಗ 4,434ಕ್ಕೆ ಏರಿಕೆಯಾಗಿದೆ. 28 ಮತಗಟ್ಟೆಗಳು ಹೆಚ್ಚಳವಾಗಿವೆ.

ಸಹಾಯವಾಣಿ:

ಮತಗಟ್ಟೆ ಕುರಿತು ಮಾಹಿತಿ ನೀಡಲು ರಾಜ್ಯವ್ಯಾಪಿ ಉಚಿತ ಸಹಾಯವಾಣಿ 1950 ಆರಂಭಿಸಲಾಗಿದೆ. ಈ ಸಂಖ್ಯೆಗೆ ದೂರವಾಣಿ ಕರೆ ಮಾಡಿ, ಮತದಾರರು ತಮ್ಮ ಮತಗಟ್ಟೆಯ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. 82778 16154 ಈ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಕಳುಹಿಸುವ ಮೂಲಕವೂ ಮತಗಟ್ಟೆಯ ವಿವರ ಪಡೆಯಬಹುದಾಗಿದೆ.

ಪರಿಶೀಲಿಸುತ್ತಿದ್ದೇವೆ:

‘ಕಳೆದ ವರ್ಷ ನಗರದ ಚವಾಟ್‌ ಗಲ್ಲಿಯಲ್ಲಿ ಒಂದೇ ಮನೆಯ ವಿಳಾಸದಲ್ಲಿ ಪತ್ತೆ 54 ಮತದಾರರ ಚೀಟಿಗಳು ಪತ್ತೆಯಾಗಿದ್ದವು. ಈ ಪ್ರಕರಣ ಕುರಿತು ಉಪವಿಭಾಗಾಧಿಕಾರಿ ಅವರ ಸಮಿತಿ ಪರಿಶೀಲನೆ ನಡೆಸುತ್ತಿದೆ’ ಎಂದು ಹೇಳಿದರು.

ಚಿಕ್ಕೋಡಿ– ಸದಲಗಾ ವಿಚಾರಣೆ:

‘ಇತ್ತೀಚೆಗೆ ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣವರ ಅವರು ಚಿಕ್ಕೋಡಿಗೆ ಭೇಟಿ ನೀಡಿದಾಗ ಕ್ಷೇತ್ರದಲ್ಲಿ ವಾಸವಿರದ 8,834 ಜನರ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು ಕಂಡುಬಂದಿತ್ತು. ಪ್ರತಿಯೊಬ್ಬರನ್ನು ಕರೆಯಿಸಿ, ಪರಿಶೀಲಿಸಿದೇವು. ಇವುಗಳಲ್ಲಿ ಬಹುತೇಕ ಜನರು ಪರಊರಿಗೆ ಸ್ಥಳಾಂತರಗೊಂಡಿದ್ದಾರೆ. ಇವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಇಲ್ಲಿಯೇ ಇರಲು ಬಯಸಿದವರ ಹೆಸರುಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ’ ಎಂದು ವಿವರಣೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT