ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಐವರಿಗೆ ಸಚಿವ ಸ್ಥಾನ: ಬೆಳಗಾವಿ ಜಿಲ್ಲೆಗೆ ಅಧಿಕಾರದ ‘ಸುಗ್ಗಿ’

ಇಲ್ಲಿನ ಇತಿಹಾಸದಲ್ಲೇ ಮೊದಲು
Last Updated 13 ಜನವರಿ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರಿಗೆ ಸಂಪುಟ ದರ್ಜೆ ಸಚಿವ ಸ್ಥಾನಮಾನ ಸಿಗುವುದರೊಂದಿಗೆ, ಪ್ರಸ್ತು ಬಿಜೆಪಿ ಸರ್ಕಾರದಲ್ಲಿ ಮಕರ ಸಂಕ್ರಮಣದ ಸಂದರ್ಭದಲ್ಲಿ ಜಿಲ್ಲೆಗೆ ಅಧಿಕಾರದ ‘ಸುಗ್ಗಿ ಕಾಲ’ ಬಂದಂತಾಗಿದೆ. ಸಚಿವ ಸಂಪುಟದಲ್ಲಿ ಇಲ್ಲಿನ ಸದಸ್ಯರ ಸಂಖ್ಯೆ ಐದಕ್ಕೇರಿದೆ. ಜೊತೆಗೆ, ‘ಪವರ್ ಸೆಂಟರ್’ ಆಗಿಯೂ ಹೊರಹೊಮ್ಮಿದೆ.

ವಿಧಾನಪರಿಷತ್ ಸದಸ್ಯರಾಗಿರುವ ಅಥಣಿಯ ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿಯಾಗಿದ್ದಾರೆ. ಜೊತೆಗೆ ಸಾರಿಗೆ ಸಚಿವರೂ ಹೌದು. ಗೋಕಾಕ ಕ್ಷೇತ್ರ ಪ್ರತಿನಿಧಿಸುವ ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಪಡೆದಿದ್ದಾರೆ. ಕಾಗವಾಡದ ಶ್ರೀಮಂತ ಪಾಟೀಲ ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾಗಿದ್ದಾರೆ. ನಿಪ್ಪಾಣಿಯ ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಪ್ರಮುಖ ಖಾತೆಗಳು ಜಿಲ್ಲೆ ಪಾಲಾಗಿವೆ.

ಇವರೊಂದಿಗೆ ಈಗ, 8ನೇ ಬಾರಿಗೆ ಶಾಸಕರಾಗಿರುವ ಉಮೇಶ ಕತ್ತಿ ಅವರೂ ಸೇರಿ ‘ಪಂಚ ಸಚಿವರ’ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ವಿವಿಧ ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಗಡಿ ಜಿಲ್ಲೆಯು ಹಿಂದೆಂದೂ ಕಂಡರಿಯದಷ್ಟು ‘ಅಧಿಕಾರ’ವನ್ನು ಗಳಿಸಿರುವುದು ವಿಶೇಷ ದಾಖಲೆಯಾಗಿದೆ.

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಇಲ್ಲಿಯವರೇ. ಶಾಸಕರಾದ ಡಿ.ಎಂ. ಐಹೊಳೆ, ಪಿ. ರಾಜೀವ ಅವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಸೇರಿದಂತೆ ಹಲವರು ನಿಗಮ ಮಂಡಳಿಗಳಲ್ಲಿನ ಹುದ್ದೆಗಳನ್ನು ಪಡೆದಿದ್ದಾರೆ. ಒಟ್ಟು 12 ನಿಗಮಗಳು ಬೆಳಗಾವಿ ಪಾಲಾಗಿವೆ. ಆಡಳಿತಾರೂಢ ಬಿಜೆಪಿ ಪಕ್ಷದಲ್ಲೂ ಹಲವು ಮಹತ್ವದ ಹುದ್ದೆಗಳು ಇಲ್ಲಿನ ನಾಯಕರಿಗೆ ಸಿಕ್ಕಿದೆ.

ಸಚಿವರಲ್ಲಿ ಮೂರು ಸ್ಥಾನಗಳು ಲಿಂಗಾಯತ ಸಮಾಜಕ್ಕೆ ಸಿಕ್ಕಿದ್ದರೆ, ಮರಾಠಾ ಹಾಗೂ ವಾಲ್ಮೀಕಿ ನಾಯಕ ಸಮಾಜಕ್ಕೆ ತಲಾ ಒಂದು ಸ್ಥಾನ ದೊರೆತಿದೆ.

‘ಸಚಿವ ಸಂಪುಟದಲ್ಲಿ ಜಿಲ್ಲೆಯ ಐವರಿಗೆ ಸ್ಥಾನ ಸಿಕ್ಕಿರುವುದು ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಇದೇ ಮೊದಲಾಗಿದೆ. ಹಿಂದಿನ ಸಚಿವ ಸಂಪುಟಗಳಲ್ಲಿ ಗರಿಷ್ಠ ಮೂವರಿಗೆ ಅವಕಾಶ ದೊರೆತಿದ್ದ ಉದಾಹರಣೆ ಇತ್ತು. ಈ ಸರ್ಕಾರದಲ್ಲಿ ದಾಖಲೆ ಸೃಷ್ಟಿಯಾಗಿದೆ. ಇದರೊಂದಿಗೆ ಜಿಲ್ಲೆಯು ಬಹಳಷ್ಟು ಪ್ರಭಾವಿಯಾಗಿ ಗುರುತಿಸಿಕೊಂಡಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಆಶೋಕ ಚಂದರಗಿ ಪ್ರತಿಕ್ರಿಯಿಸಿದರು.

‘ಜಿಲ್ಲೆಗೆ ಅಧಿಕಾರ ಸಿಕ್ಕಿದೆ. ಆದರೆ, ಅಭಿವೃದ್ಧಿ ಶೂನ್ಯವಾಗಿದೆ ಎನ್ನುವಂತಹ ಪರಿಸ್ಥಿತಿ ಇದೆ. ಇನ್ನಾದರೂ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ದೊರೆಯಬೇಕು. ಬೆಂಗಳೂರಿನಲ್ಲಿರುವ ರಾಜ್ಯ ಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು. ಈ ಮೂಲಕ ಮುಂಬೈ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬದ್ಧತೆ ತೋರಿಸಬೇಕು’ ಎಂದು ಒತ್ತಾಯಿಸಿದರು.

ಈ ನಡುವೆ, ಪಕ್ಷದಲ್ಲಿ ಅಸಮಾಧಾನವೂ ಸ್ಫೋಟಗೊಂಡಿದೆ. 3ನೇ ಬಾರಿಗೆ ಶಾಸಕರಾಗಿರುವ ಹಾಗೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಅಭಯ ಪಾಟೀಲ ಬೇಸರಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT