ಶುಕ್ರವಾರ, ಜೂಲೈ 3, 2020
21 °C
ಜಿಲ್ಲಾ ವಾರ್ಷಿಕ ಸಾಲ ಯೋಜನೆ ವರದಿ ಬಿಡುಗಡೆ

₹15,400 ಕೋಟಿ ಸಾಲ ವಿತರಣೆ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ₹ 15,400 ಕೋಟಿ ಸಾಲ ನೀಡುವ ಗುರಿಯನ್ನು ಬ್ಯಾಂಕ್‌ಗಳು ಹೊಂದಿವೆ. ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಸಿದ್ಧಪಡಿರುವ ಜಿಲ್ಲಾ ವಾರ್ಷಿಕ ಸಾಲ ಯೋಜನೆಯ ವರದಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಗುರುವಾರ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಅವರು, ‘ಕೃಷಿ ಮತ್ತು ಎಂಎಸ್‌ಎಂಇ ಕ್ಷೇತ್ರಕ್ಕೆ ಸಾಲ ಸೌಲಭ್ಯ ನೀಡುವಾಗ ಉದಾರವಾಗಿರಬೇಕು. ವ್ಯವಹಾರ ಪ್ರತಿನಿಧಿಗಳನ್ನು ಬಳಸಿಕೊಂಡು ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಖಾತೆಗಳನ್ನು ತೆರೆಯಲು ಸಹಕರಿಸಬೇಕು. ಸರ್ಕಾರದಿಂದ ನೀಡುವ ಪರಿಹಾರ ಮತ್ತು ಉದ್ಯೋಗ ಖಾತ್ರಿ ಯೋಜನೆಯ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು. ಸರ್ಕಾರಿ ಪ್ರಾಯೋಜಿತ ಯೋಜನೆಗಳ ಗುರಿಗಳನ್ನು ಕಡ್ಡಾಯವಾಗಿ ಸಾಧಿಸಬೇಕು. ಎಲ್ಲಾ ಗ್ರಾಹಕರಿಗೆ ರುಪೇ ಕಾರ್ಡ್‌ಗಳನ್ನು ನೀಡಬೇಕು. ಕೋವಿಡ್–19 ಹಿನ್ನೆಲೆಯಲ್ಲಿ ಅಂತರ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಯೋಜನೆಯ ಮಾಹಿತಿ ನೀಡಿದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ವಿಂಜಮೂರಿ ರಾಹುಲ್, ‘₹ 13,604 ಕೋಟಿಯನ್ನು ಆದ್ಯತಾ ವಲಯಕ್ಕೆ ನೀಡಲಾಗಿದೆ. ಕೃಷಿಗೆ ₹ 9,565 ಕೋಟಿ, ಎಂಎಸ್‌ಎಂಇಗೆ ₹ 1,574 ಕೋಟಿ, ವಸತಿಗಾಗಿ ₹ 751 ಕೋಟಿ ಹಾಗೂ ಶಿಕ್ಷಣ ಮೊದಲಾದವುಗಳಿಗೆ ₹ 476 ಕೋಟಿ ಸಾಲ ನೀಡುವ ಗುರಿ ನಿಗದಿಪಡಿಸಲಾಗಿದೆ’ ಎಂದು ತಿಳಿಸಿದರು.

‘ಈ ಹಣಕಾಸು ವರ್ಷದಲ್ಲಿ ವಾರ್ಷಿಕ ಯೋಜನೆ ಪ್ರಕಾರ ಸಾಲ ಮಂಜೂರು ಮಾಡುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಿಗೂ ಸೂಚಿಸಲಾಗಿದೆ. ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಎಂಎಸ್‌ಎಂಇ ಮತ್ತು ಇತರ ಆದ್ಯತೆಯ ವಲಯದಿಂದ ಸಾಲಕ್ಕೆ ಬೇಡಿಕೆ ಇದೆ. ಇದಕ್ಕೆ ಎಲ್ಲ ಹಣಕಾಸು ಸಂಸ್ಥೆಗಳಿಂದಲೂ ಬೆಂಬಲ ನೀಡಲಾಗುವುದು. ಹಿಂದಿನ ವರ್ಷಕ್ಕೆ ಹೋಲಿಸಿದರೆ ₹ 900 ಕೋಟಿಗೂ ಹೆಚ್ಚಿನ ಮೊತ್ತವನ್ನು ಕೃಷಿಗೆ ನಿಗದಿಪಡಿಸಲಾಗಿದೆ’ ಎಂದ ತಿಳಿಸಿದರು.

ಕೆನರಾ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಕೃಷ್ಣ ಎನ್. ಕುಲಕರ್ಣಿ, ‘ಈ ಸಾಲಿನಲ್ಲಿ ಕೋವಿಡ್–19 ಸಾಲಗಳನ್ನು ವಿತರಿಸಲಾಗುತ್ತಿದೆ. ಗ್ರಾಹಕರು ಇದನ್ನು ಬಳಸಿಕೊಳ್ಳಬಹುದು. ಸಾಲ ಮರುಪಾವತಿಗೆ ಜಿಲ್ಲಾಡಳಿತ ಸಹಾಯ ಮಾಡಬೇಕು’ ಎಂದು ಕೋರಿದರು.

ಕೆನರಾ ಬ್ಯಾಂಕ್‌ ಡಿಜಿಎಂ ಭಾಸ್ಕರ್‌ ಮೆನನ್ ರಾಜನ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡಬಸವರಾಜ್‌, ಚಿಕ್ಕೋಡಿ ಕೆನರಾ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಪಿ. ಶ್ರೀನಿವಾಸರಾವ್, ನಬಾರ್ಡ್‌ ಡಿಡಿಎಂ ಎಸ್.ಕೆ.ಕೆ. ಭಾರದ್ವಾಜ್‌, ಬ್ಯಾಂಕ್‌ಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು