‘ಗಡಿ ವಿವಾದ ಬಗೆಹರಿಯುವವರೆಗೂ ಜಿಲ್ಲೆ ವಿಭಜನೆ ಸಲ್ಲ’

7
ರಾಜಕೀಯ ಕಾರಣದಿಂದ ಜಿಲ್ಲೆಯನ್ನು ಒಡೆಯಬಾರದು

‘ಗಡಿ ವಿವಾದ ಬಗೆಹರಿಯುವವರೆಗೂ ಜಿಲ್ಲೆ ವಿಭಜನೆ ಸಲ್ಲ’

Published:
Updated:

ಬೆಳಗಾವಿ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣ ಇತ್ಯರ್ಥ ಆಗುವವರೆಗೂ ಬೆಳಗಾವಿ ಜಿಲ್ಲೆಯನ್ನು ವಿಭಜಿಸಬಾರದು ಎಂದು ಕನ್ನಡ ಹೋರಾಟಗಾರ ಸಿದ್ದನಗೌಡ ಪಾಟೀಲ ಶುಕ್ರವಾರ ಆಗ್ರಹಿಸಿದರು.

‘ಜಿಲ್ಲೆಯ ವಿಭಜನೆಗೆ ಈಗಲೇ ಮುಂದಾದರೆ, ಆಗಾಗ ಗಡಿ ತಕರಾರು ತೆಗೆಯುವವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಇಲ್ಲಿರುವ ವಾತಾವರಣ ಮತ್ತಷ್ಟು ಹಾಳಾಗುವುದಕ್ಕೆ ಅವಕಾಶ ಕೊಟ್ಟಂತಾಗುತ್ತದೆ. ಹೀಗಾಗಿ, ಈ ವಿಷಯದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗಂಭೀರ ಹೆಜ್ಜೆಗಳನ್ನು ಇಡಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಸೂಚ್ಯವಾಗಿ ತಿಳಿಸಿದರು.

‘ಯಾವುದೋ ರಾಜಕಾರಣಿಗಳ ವೈಯಕ್ತಿಕ ಹಿತಾಸಕ್ತಿ ಕಾಪಾಡುವುದಕ್ಕಾಗಿ ಆತುರ ಮಾಡಬಾರದು. ವಿರೋಧದ ನಡುವೆಯೂ ವಿಭಜನೆಗೆ ಮುಂದಾಗುವುದು ಸರಿಯಲ್ಲ. ಜಿಲ್ಲೆ ಒಡೆಯುವುದರಿಂದ ಗಡಿ ಸಮಸ್ಯೆ ಉಲ್ಬಣಗೊಳ್ಳುತ್ತದೆ ಎನ್ನುವ ಎಚ್ಚರವಿರಲಿ’ ಎಂದು ಕಿವಿಮಾತು ಹೇಳಿದರು.

ಧಕ್ಕೆಯಾಗುತ್ತದೆ: ‘ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಗಳಾಗಿ ರಚನೆಯಾದರೆ, ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ, ಖಾನಾಪುರ ಹಾಗೂ ಹುಕ್ಕೇರಿ ತಾಲ್ಲೂಕುಗಳು ಮಾತ್ರವೇ ಉಳಿಯುತ್ತವೆ. ಇದರಿಂದ, ಮರಾಠಿ ಪ್ರಭಾವ ಜಾಸ್ತಿಯಾಗುತ್ತದೆ. ಇದು ರಾಜ್ಯದ ಹಿತಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ, ಯಥಾಸ್ಥಿತಿ ಮುಂದುವರಿಸಬೇಕು. ಸುಪ್ರೀಂ ಕೋರ್ಟ್‌ನಲ್ಲಿ ನಿರ್ಣಯ ಬಂದ ಬಳಿಕ, ಆಯಾ ತಾಲ್ಲೂಕುಗಳ ಜನರ ಅಭಿಪ್ರಾಯ ಆಲಿಸಿ ಅಗತ್ಯವಿದ್ದರೆ ವಿಭಜನೆಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮಾತನಾಡಿ, ‘ಗಡಿ ಜಿಲ್ಲೆಯ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲು ಸಮಯ ಕೋರಿ ಸಮಿತಿಯಿಂದ ಜೂನ್ 18ಕ್ಕೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆವು. ಪ್ರತಿಕ್ರಿಯೆ ಬರಲಿಲ್ಲ. ಸೆ. 15ರಂದು ನಗರಕ್ಕೆ ಬಂದಾಗಲಾದರೂ ಸಮಯ ಕೊಡುವಂತೆ ಕೋರಿ ಪತ್ರ ಕಳುಹಿಸಿದ್ದೆವು. ಆದರೆ, ಸ್ಪಂದನೆ ಸಿಕ್ಕಿಲ್ಲ’ ಎಂದು ದೂರಿದರು.

‘ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ, ಅಲ್ಲಿನ ಜನರಿಗೆ ಅನುಕೂಲ ಮಾಡಿಕೊಡಲಿ. ಅದನ್ನು ಬಿಟ್ಟು ಜಿಲ್ಲೆಯನ್ನು ಒಡೆದು ಇಲ್ಲಿನ ಕನ್ನಡಿಗರಿಗೆ ಅನ್ಯಾಯ ಮಾಡುವುದು ಸರಿಯಲ್ಲ. 1997ರ ಆಗಸ್ಟ್‌ನಲ್ಲೂ ಜಿಲ್ಲೆ ವಿಭಜನೆ ಬಗ್ಗೆ ಪ್ರಸ್ತಾಪವಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಜೆ.ಎಚ್‌. ಪಟೇಲ್‌ ವಿರುದ್ಧ ಜನಾಂದೋಲನ ನಡೆಸಲಾಗಿತ್ತು. ತಿಂಗಳ ನಂತರ ಪ್ರಸ್ತಾವವನ್ನು ವಾಪಸ್‌ ಪಡೆದುಕೊಳ್ಳಲಾಗಿತ್ತು. ಜಿಲ್ಲೆಯ ವಿಭಜನೆಗೆ ಈಗಲೂ ನಮ್ಮ ವಿರೋಧವಿದೆ’ ಎಂದು ವಿವರಿಸಿದರು.

‌ಸ್ಥಳಾಂತರಿಸಿ: ‘ಮುಖ್ಯಮಂತ್ರಿ ಯಾವುದೇ ಕಾರಣಕ್ಕೂ ದುಡುಕಿನ ನಿರ್ಣಯ ಕೈಗೊಳ್ಳಬಾರದು. ಜನಾಭಿಪ್ರಾಯ ಆಲಿಸಿ ಕ್ರಮ ಕೈಗೊಳ್ಳಬೇಕು. ಗಡಿ ವಿವಾದ ಬಗೆಹರಿಯುವವರೆಗೂ ಕಾಯಬೇಕು. ಪ್ರಮುಖ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಕೂಡಲೇ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿದರು.

ಸಾಹಿತಿ ರಾಘವೇಂದ್ರ ಜೋಶಿ ಮಾತನಾಡಿ, ‘ಬೆಳಗಾವಿಯನ್ನು 2ನೇ ರಾಜಧಾನಿಯನ್ನಾಗಿ ಅಧಿಕೃತವಾಗಿ ಘೋಷಿಸಿ, ಕೂಡಲೇ ಅನುಷ್ಠಾನಕ್ಕೆ ತರಬೇಕು’ ಎಂದು ಕೋರಿದರು.

ಕನ್ನಡ ಹೋರಾಟಗಾರರಾದ ಮಹಾದೇವ ತಳವಾರ, ಶಂಕರ ಬಾಗೇವಾಡಿ, ದೀಪಕ ಗುಡಗನಟ್ಟಿ, ಬಾಬು ಸಂಗೋಡಿ, ಗಣೇಶ ರೋಕಡೆ, ಎಂ.ಜಿ. ಮಕಾನದಾರ, ಸಲೀಂ ಖತೀಬ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !