ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಜಿಎಸ್‌ಟಿ ವಿರೋಧಿಸಿ ಬಂದ್ ಕರೆ ನೀಡಿದ ಬೆಳಗಾವಿಯ ಧಾನ್ಯ ವ್ಯಾಪಾರಿಗಳು

Last Updated 15 ಜುಲೈ 2022, 7:30 IST
ಅಕ್ಷರ ಗಾತ್ರ

ಬೆಳಗಾವಿ: ಆಹಾರ ಧಾನ್ಯಗಳ ಮೇಲಿನ ಜಿಎಸ್‌ಟಿ ಕೈಬಿಡಬೇಕು ಎಂದು ಆಗ್ರಹಿಸಿ ಇಲ್ಲಿನ ಆಹಾರ ಧಾನ್ಯ ವರ್ತಕರ ಕ್ಷೇಮಾಭಿವೃದ್ಧಿ ಸಂಘ ಕರೆ ನೀಡಿದ ಎಪಿಎಂಸಿ ಬಂದ್‌ಗೆ, ಶುಕ್ರವಾರ ಉತ್ತಮ ಸ್ಪಂದನೆ ಸಿಕ್ಕಿತು. ಪ್ರತಿದಿನ ನಸುಕಿನಲ್ಲೇ ಗಿಜಿಗುಡುತ್ತಿದ್ದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಜನರೇ ಇಲ್ಲದೇ ಬಿಕೋ ಎನ್ನುತ್ತಿತ್ತು.

ನಗರದಲ್ಲಿರುವ ಹಳೆಯ ಎಪಿಎಂಸಿಯಿಂದ ತರಕಾರಿ ಮಾರುಕಟ್ಟೆ ಸ್ಥಳಾಂತರವಾಗಿದೆ. ನ್ಯೂ ಗಾಂಧಿನಗರದಲ್ಲಿ ತೆರೆದ ಖಾಸಗಿ ಸಗಟು ಮಾರುಕಟ್ಟೆಯಲ್ಲಿ ಎಲ್ಲ ತರಕಾರಿ ಹಾಗೂ ದಿನಸಿ ವ್ಯಾಪಾರ ನಡೆಯುತ್ತದೆ. ಹಳೆಯ ಎಪಿಎಂಸಿ ಪ್ರಾಂಗಣದಲ್ಲಿ ಆಹಾರ ಧಾನ್ಯಗಳ ಸಗಟು ವ್ಯಾಪಾರ ಮಾತ್ರ ನಡೆಯುತ್ತಿತ್ತು. ಶುಕ್ರವಾರ ಬಂದ್‌ ಕರೆ ನೀಡಿದ್ದರಿಂದ ಇಡೀ ಮಾರುಕಟ್ಟೆ ಸ್ತಬ್ಧವಾಯಿತು.

ಕೇಂದ್ರ ಸರ್ಕಾರ ಆಹಾರ ಧಾನ್ಯಗಳ ವಹಿವಾಟಿನ ಮೇಲೂ ಶೇ 5ರಷ್ಟು ಜಿಎಸ್‌ಟಿ ವಿಧಿಸಿದೆ. ಇದರಿಂದ ಧಾನ್ಯ ವ್ಯಾಪಾರಿಗಳು ಸಂಕಷ್ಟ ಎದುರಿಸಬೇಕಾಗುತ್ತದೆ. ಈಗಾಗಲೇ ಎಪಿಎಂಸಿಗಳು ಮುಚ್ಚುವ ಹಂತ ತಲುಪಿವೆ. ಇದರ ಮಧ್ಯೆ ಜಿಎಸ್‌ಟಿ ವಿಧಿಸಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಜುಲೈ 15 ಹಾಗೂ 16ರಂದು ಬಂದ್‌ ಕರೆ ನೀಡಲಾಗಿದೆ ಎಂದು ಆಹಾರ ಧಾನ್ಯ ವ್ಯಾಪಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಳುಗಳ ಮಾರುಕಟ್ಟೆ ಬಂದ್ ಮಾಡಿದ್ದರಿಂದ ನಗರ ಹಾಗೂ ಜಿಲ್ಲೆಯ ಸಣ್ಣ ವ್ಯಾಪಾರಿಗಳು ಹಾಗೂ ಅಂಗಡಿಕಾರರು ಪರದಾಡುವಂತಾಯಿತು. ಹಮಾಲಿ ಕೆಲಸಗಾರರು ಅಲ್ಲಲ್ಲಿ ಗುಂಪುಗೂಡಿ ಕಾಲ ಕಳೆದರು. ಕಾಳು ಸಾಗಣೆ ಮಾಡುವ ವಾಹನಗಳು ಮಾರುಕಟ್ಟೆಯಲ್ಲೇ ಠಿಕಾಣೆ ಹೂಡಿದವು.

‘ರವಿವಾರ ಪೇಟೆ’ ಶನಿವಾರ ಬಂದ್‌

ಆಹಾರ ಧಾನ್ಯಗಳ ಮೇಲೆ ಕೇಂದ್ರ ಸರ್ಕಾರ ಶೇಕಡ 5ರಷ್ಟು ಜಿಎಸ್‌ಟಿ ವಿಧಿಸಿದ್ದನ್ನು ಖಂಡಿಸಿ ಜುಲೈ 16ರಂದು ಇಲ್ಲಿನ ‘ರವಿವಾರ ಪೇಟೆ’ ಬಂದ್‌ ಮಾಡಲು ವರ್ತಕರು ನಿರ್ಧರಿಸಿದ್ದಾರೆ.

ಶನಿವಾರ ಬೆಳಿಗ್ಗೆಯಿಂದಲೇ ಮಾರುಕಟ್ಟೆ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುವುದು. ಈ ಆದೇಶ ಹಿಂಪಡೆಯುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದು ವರ್ತಕಸಂಘಟನೆಯ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT