ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 5 ತಿಂಗಳಾದರೂ ಶುರುವಾಗದ ಜಿಲ್ಲಾಸ್ಪತ್ರೆ ಕ್ಯಾಂಟೀನ್!

ಸಿದ್ಧಗೊಂಡಿದ್ದರೂ ಉದ್ಘಾಟನೆ ಭಾಗ್ಯ ಕಾಣುವುದು ಕೂಡ ವಿಳಂಬವಾಗಿತ್ತು
Last Updated 19 ಜೂನ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆ ಅವರಣದಲ್ಲಿ ನಿರ್ಮಿಸಲಾದ ನಾಗರಿಕ ಸೌಲಭ್ಯಗಳ ಸಂಕೀರ್ಣದಲ್ಲಿ ಕ್ಯಾಂಟೀನ್‌ ಹಾಗೂ ಇತರ ಮಳಿಗೆಗಳು ಅಧಿಕೃತವಾಗಿ ಉದ್ಘಾಟನೆಯಾಗಿ ಐದು ತಿಂಗಳುಗಳು ಕಳೆದರೂ ಕಾರ್ಯಾರಂಭ ಮಾಡಿಲ್ಲ!

ಸತೀಶ ಜಾರಕಿಹೊಳಿ ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಅವರನ್ನು ‘ಖುಷಿ’ಪಡಿಸಲು ಜ. 14ರಂದು ಅವರಿಂದ ಈ ಸಂಕೀರ್ಣದ ಉದ್ಘಾಟನೆ ಮಾಡಿಸಿದ್ದ ಆರೋಗ್ಯ ಇಲಾಖೆ, ಬಿಮ್ಸ್‌ ಅಧಿಕಾರಿಗಳು, ಸಾರ್ವಜನಿಕರಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸುವುದಕ್ಕೆ ಕಾಳಜಿ ತೋರಿಲ್ಲ. ಹೀಗಾಗಿ, ಮಳಿಗೆಗೆಳ ಬಾಗಿಲು ಅಂದಿನಿಂದ ಇಂದಿನವರೆಗೂ ತೆರೆದೇ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರೂ ಇತ್ತ ತಲೆಕೆಡಿಸಿಕೊಂಡಿಲ್ಲ.

ಜಿಲ್ಲಾಸ್ಪತ್ರೆ ಆವರಣವೂ ಸೇರಿದಂತೆ ಜಿಲ್ಲೆಯ 13 ಕಡೆಗಳಲ್ಲಿ ಇಂತಹ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳಿಂದ ಸಾರ್ವಜನಿಕರಿಗೆ ‘ಸೇವೆ’ ದೊರೆಯುತ್ತಿಲ್ಲ.

ಪಾಳು ಬಿದ್ದಿವೆ:

ಜಿಲ್ಲಾಸ್ಪತ್ರೆ ಆವರಣ, ಎಲ್ಲ ತಾಲ್ಲೂಕು ಆಸ್ಪತ್ರೆಗಳು ಹಾಗೂ ಮೂಡಲಗಿ, ಯರಗಟ್ಟಿ ಹಾಗೂ ನಿಪ್ಪಾಣಿಯಲ್ಲಿ ತಲಾ ₹ 25 ಲಕ್ಷ ವೆಚ್ಚದಲ್ಲಿ ಈ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ. ಇವುಗಳು ಬಳಕೆಯಾಗದೇ ‘ಪಾಳು’ ಬಿದ್ದಿವೆ.

ಸರ್ಕಾರಿ ಆಸ್ಪತ್ರೆಗಳಿಗೆ ಸಾಮಾನ್ಯವಾಗಿ ಬಡವರು ಹಾಗೂ ಮಧ್ಯಮ ವರ್ಗದವರು ಬರುತ್ತಾರೆ. ಅಲ್ಲಿ ಅವರಿಗೆ ರಿಯಾಯಿತಿ ದರದಲ್ಲಿ ಊಟ, ಉಪಾಹಾರ ಒದಗಿಸುವ ಕ್ಯಾಂಟೀನ್‌ಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ. ರಿಯಾಯಿತಿ ದರದ ಈ ಕ್ಯಾಂಟೀನ್‌ಗಳು ಕಾರ್ಯಾರಂಭಿಸದೇ ಇರುವುದರಿಂದ, ಸಾರ್ವಜನಿಕರು ಇತರ ಹೋಟೆಲ್‌ಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ.

ರೋಗಿಗಳು ಹಾಗೂ ಸಂಬಂಧಿಕರಿಗೆ ಹಾಲು (ಹಾಲು ಒಕ್ಕೂಟದಿಂದ ನಂದಿನಿ ಮಿಲ್ಕ್ ಪಾರ್ಲರ್), ಬ್ರೆಡ್‌, ಹಣ್ಣು, ಶುದ್ಧ ಕುಡಿಯುವ ನೀರು ಮೊದಲಾದವುಗಳು ಆಸ್ಪತ್ರೆ ಆವರಣದಲ್ಲೇ ಸಿಗುವಂತಾಗಲಿ ಎಂಬ ಉದ್ದೇಶದಿಂದ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಮಳಿಗೆಗಳನ್ನು ಕಟ್ಟಿಸಲಾಗಿದೆ. ಜೆನರಿಕ್‌ ಔಷಧ ಮಳಿಗೆ, ಪುಸ್ತಕ ಮಳಿಗೆ, ಎಸ್‌ಟಿಡಿ ಬೂತ್, ಶೌಚಾಲಯಕ್ಕೂ ವ್ಯವಸ್ಥೆ ಕಲ್ಪಿಸಲಾಗಿದೆ.

ಕಡಿಮೆ ದರಕ್ಕೆ:

ಇಲ್ಲಿ ಕ್ಯಾಂಟೀನ್‌ ನಡೆಸುವವರು ಸರ್ಕಾರ ನಿಗದಿಪಡಿಸಿದ ದರವನ್ನಷ್ಟೇ ವಿಧಿಸಬೇಕು. ಅತ್ಯಂತ ಕಡಿಮೆ ದರಕ್ಕೆ ಊಟ, ಉಪಾಹಾರ ಸಿಗುವುದರಿಂದ ಸಾರ್ವಜನಿಕರಿಗೆ ಬಹಳ ಅನುಕೂಲವಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು.

ನಿರ್ಮಾಣಕ್ಕೆ ತೋರಿದ್ದ ಆಸಕ್ತಿಯನ್ನು ಆರೋಗ್ಯ ಇಲಾಖೆಯವರು ಉದ್ಘಾಟನೆಗೆ ಪ್ರದರ್ಶಿಸಿರಲಿಲ್ಲ. ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಹಾಗೂ ಸುಧಾರಣಾ ಯೋಜನೆ (ಕೆಎಚ್‌ಎಸ್‌ಡಿಆರ್‌ಪಿ)ಯಡಿ ಈ ಸಂಕೀರ್ಣಗಳನ್ನು ನಿರ್ಮಿಸಿ, ಸಂಬಂಧಿಸಿದ ಆಸ್ಪತ್ರೆಗಳಿಗೆ (ಆರೋಗ್ಯ ಇಲಾಖೆಗೆ) ಹಸ್ತಾಂತರಿಸಿತ್ತು. ಇದಾಗಿ ವರ್ಷದ ನಂತರ ಉದ್ಘಾಟನೆ ಭಾಗ್ಯ ದೊರೆತಿತ್ತು. ಆದರೆ, ಈಗ ಕಾರ್ಯಾರಂಭ ಭಾಗ್ಯಕ್ಕಾಗಿ ಇವು ಕಾದಿವೆ.

ಪ್ರಸ್ತುತ ಆಸ್ಪತ್ರೆಗಳಿಗೆ ಬರುವವರು, ದುಬಾರಿ ದರ ವಿಧಿಸುವ ಅಕ್ಕಪಕ್ಕದ ಕ್ಯಾಂಟೀನ್‌ಗಳು ಅಥವಾ ಅಂಗಡಿಗಳನ್ನೇ ಅವಲಂಬಿಸಬೇಕಾಗಿದೆ, ಅಲೆದಾಡಬೇಕಾಗಿದೆ ಮತ್ತು ತೊಂದರೆ ಅನುಭವಿಸಬೇಕಾಗಿದೆ. ಕೆಲವೆಡೆ, ಆಸ್ಪತ್ರೆ ಆವರಣದಲ್ಲಿಯೇ ಅಂಗಡಿಗಳಿದ್ದು ಅವರು ಮನಬಂದಂತೆ ದರ ವಿಧಿಸುವುದು ಸಾಮಾನ್ಯವಾಗಿದೆ.

ಟೆಂಡರ್‌ ಪ್ರಕ್ರಿಯೆ:

ಇಲ್ಲಿ ಕ್ಯಾಂಟೀನ್‌ ಗುತ್ತಿಗೆ ನೀಡುವಾಗ ಮಹಿಳಾ ಸ್ವಸಹಾಯ ಸಂಘದವರು, ಅಂಗವಿಕಲರು ಹಾಗೂ ವಿಧವೆಯರಿಗೆ ಆದ್ಯತೆ ಕೊಡಬೇಕು. ನೀರು ಹಾಗೂ ವಿದ್ಯುತ್‌ ಅನ್ನು ಆಯಾ ಆಸ್ಪತ್ರೆಯಿಂದಲೇ ಪೂರೈಸಲಾಗುವುದು. ಎಂಎಸ್‌ಐಎಸ್‌ನಿಂದ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಲಾಗುವುದು. ಅಕ್ಕಿ, ಗೋಧಿ, ಬೇಳೆ ಮೊದಲಾದ ದಿನಸಿಗಳನ್ನು ಆಹಾರ ಇಲಾಖೆಯಿಂದ ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಬಿಮ್ಸ್‌ ನಿರ್ದೇಶಕ ಡಾ.ಷಣ್ಮುಖ ಕಳಸದ, ‘ಒಮ್ಮೆ ಕರೆದಿದ್ದ ಟೆಂಡರ್‌ ಪ್ರಕ್ರಿಯೆ ಯಶಸ್ವಿಯಾಗಲಿಲ್ಲ. ಹೀಗಾಗಿ, ಇನ್ನೊಮ್ಮೆ ಟೆಂಡರ್‌ ಕರೆಯಲಾಗುವುದು. ಗುತ್ತಿಗೆದಾರರು ಸಿಕ್ಕ ನಂತರ ಕ್ಯಾಂಟೀನ್ ಆರಂಭಿಸಲಾಗುವುದು. ನಂದಿನಿ ಮಿಲ್ಕ್‌ ಪಾರ್ಲರ್‌ ಆರಂಭಿಸಲು ಬೆಮುಲ್‌ಗೆ, ಹಣ್ಣಿನ ಅಂಗಡಿ ತೆರೆಯಲು ಹಾಪ್‌ಕಾಮ್ಸ್‌ಗೆ ಮಳಿಗೆ ಹಂಚಿಕೆ ಮಾಡಲಾಗಿದೆ. ಅವರು ಏಕೆ ಆರಂಭಿಸಿಲ್ಲ ಎನ್ನುವುದು ಗೊತ್ತಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT