ಶನಿವಾರ, ಮೇ 8, 2021
17 °C
ಶಂಕರಗೌಡ ಪಾಟೀಲ ಭೇಟಿ, ಪರಿಶೀಲನೆ

ಬೆಳಗಾವಿ ಜಿಲ್ಲಾಸ್ಪತ್ರೆ ಅವ್ಯವಸ್ಥೆ: ಅಧಿಕಾರಿಗಳಿಗೆ ಸಿಎಂ ಕಾರ್ಯದರ್ಶಿ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದ ಜಿಲ್ಲಾಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ವಿವಿಧ ವಿಭಾಗಗಳನ್ನು ಪರಿಶೀಲಿಸಿದ ಅವರು, ನಿರ್ವಹಣೆಯಲ್ಲಿ ಲೋಪ ಇರುವುದನ್ನು ಗಮನಿಸಿದರು. ‘ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರದಿಂದ ಜನಸಾಮಾನ್ಯರಿಗೆ ಸಿಗುವ ಆರೋಗ್ಯ ಸೇವೆಗಳ ಮಾಹಿತಿ ಫಲಕಗಳನ್ನು ಅಲ್ಲಲ್ಲಿ ಹಾಕಬೇಕು. ಹೃದ್ರೋಗ ಮೊದಲಾದವುಗಳಿಗೆ ಚಿಕಿತ್ಸೆ ಲಭ್ಯವಿಲ್ಲದಿದ್ದಲ್ಲಿ ಕೂಡಲೇ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಬೇಕು. ಸಂಬಂಧಿಸಿದ ಪತ್ರ ವ್ಯವಹಾರವನ್ನು ತ್ವರಿತವಾಗಿ ನಡೆಸಬೇಕು’ ಎಂದು ಸೂಚಿಸಿದರು.

ತೊಂದರೆಯಾಗದಂತೆ ನೋಡಿಕೊಳ್ಳಿ: ‘ಹೆಚ್ಚುವರಿ ಕೊಠಡಿಗಳ ನಿರ್ಮಾಣದಿಂದ ರೋಗಿಗಳಿಗೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ನಾವೇ ಮನೆ ನಿರ್ಮಿಸುವಾಗ ಅಥವಾ ನವೀಕರಿಸುವಾಗ ಶೌಚಾಲಯ ಮೊದಲಾದವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಿಲ್ಲವೇ? ಹಾಗೆಯೇ ಇಲ್ಲೂ ಮಾಡಬೇಕು. ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಆಗಾಗ ನಾನು ಭೇಟಿ ನೀಡುತ್ತಿರುತ್ತೇನೆ. ಪರಿಸ್ಥಿತಿ ಸುಧಾರಿಸದಿದ್ದಲ್ಲಿ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಪ್ರಸೂತಿ ಹಾಗೂ ಹೆರಿಗೆ ವಾರ್ಡ್‌ಗಳ ಕೊಠಡಿಗಳ ಸಮೀಪದಲ್ಲಿ ಸಂಗ್ರಹವಾಗಿದ್ದ ಕಟ್ಟಡ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಬೇಕು. ರೋಗಿಗಳಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು. ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ನಿರ್ದೇಶನ ನೀಡಿದರು.

ಪ್ರಯೋಜನವಾಗಿಲ್ಲ: ‘ಹಲವು ಬಾರಿ ದೂರು ನೀಡಿದ್ದರೂ, ಪ್ರತಿಭಟಿಸಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ವೈದ್ಯರು ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ’ ಎಂದು ವಕೀಲ ಎನ್.ಆರ್. ಲಾತೂರ ದೂರಿದರು.

‘ಹುದ್ದೆಗಳ ಭರ್ತಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದು ಬಿಮ್ಸ್‌ ನಿರ್ದೇಶಕ ಡಾ.ಎಸ್.ಟಿ. ಕಳಸದ ತಿಳಿಸಿದರು. ‘ಪತ್ರದ ಪ್ರತಿಗಳನ್ನು ಕಳುಹಿಸಿಕೊಡಿ, ಫಾಲೋಅಪ್‌ ಮಾಡುತ್ತೇನೆ’ ಎಂದು ಶಂಕರಗೌಡ ತಿಳಿಸಿದರು.

‘ಆಸ್ಪತ್ರೆಯಲ್ಲಿ ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳನ್ನು ಕಡೆಗಣಿಸಲಾಗುತ್ತಿದೆ. ಎರಡು ವರ್ಷಗಳ ಹಿಂದೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಮಹಿಳೆಯರೊಬ್ಬರು ಮೃತಪಟ್ಟರು. ಅವರ ಮಗು ಈಗ ಅನಾಥವಾಗಿದೆ. ಅವರಿಗೆ ಪರಿಹಾರ ಕೊಡಿಸಬೇಕು. ಸ್ತ್ರೀರೋಗ ತಜ್ಞರ ಕೊರತೆ ನಿವಾರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತೆ ಶಾರದಾ ಗೋಪಾಲ ಒತ್ತಾಯಿಸಿದರು.

ಸಾಮಾಜಿಕ ಕಾರ್ಯಕರ್ತ ಶಿವಾಜಿ ಕಾಗಣಿಕರ ಇದ್ದರು.

ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ‘ಪ್ರಜಾವಾಣಿ’ಯ ‘ನಮ್ಮ ನಗರ ನಮ್ಮ ಧ್ವನಿ’ಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು.

ದೂರುಗಳ ಸುರಿಮಳೆ...

ಸಾಮಾಜಿಕ ಕಾರ್ಯಕರ್ತ ಕಿರಣ್‌ಕುಮಾರ್‌, ‘ಆಸ್ಪತ್ರೆಯಲ್ಲಿ ವೈದ್ಯರ ಹಕ್ಕುಗಳ ಕುರಿತಷ್ಟೇ ಮಾಹಿತಿ ಫಲಕ ಹಾಕಲಾಗಿದೆ. ಆದರೆ, ರೋಗಿಗಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲ. ಅವರ ಹಕ್ಕುಗಳ ರಕ್ಷಣೆ ಆಗುತ್ತಿಲ್ಲ.  ಬಹುತೇಕ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳನ್ನು ಸೌಜನ್ಯದಿಂದ ಕಾಣುವುದಿಲ್ಲ’ ಎಂದು ದೂರಿದರು.

‘ವೈದ್ಯರಾಗಲೀ, ಅಧಿಕಾರಿಗಳಾಗಲೀ ತಮ್ಮ ಕಚೇರಿಗಳನ್ನು ವ್ಯವಸ್ಥಿತವಾಗಿ ಇಟ್ಟುಕೊಂಡಿದ್ದಾರೆ. ಆದರೆ, ರೋಗಿಗಳ ವಾರ್ಡಗಳಲ್ಲಿ ಅವ್ಯವಸ್ಥೆ ಇದೆ. ಏನು ಕೇಳಿದರೂ ಸರ್ಕಾರಕ್ಕೆ ಬರೆದಿದ್ದೇವೆ, ಅನುದಾನ ಬಂದಿಲ್ಲ ಎನ್ನುತ್ತಾರೆ. ಅವರಿಗೆ ಸಂಬಳ ಸಿಗದಿದ್ದರೆ ಸುಮ್ಮನಿರುತ್ತಾರೆಯೇ? ಅದೇ ಕಾಳಜಿಯನ್ನು ರೋಗಿಗಳ ವಿಷಯದಲ್ಲಿ ತೋರುವುದಿಲ್ಲ. ಜನರ ತೆರಿಗೆ ಹಣದಿಂದ ಸಂಬಳ ಪಡೆಯುತ್ತಿದ್ದೇವೆ ಎನ್ನುವುದನ್ನು ಮರೆತಿದ್ದಾರೆ’ ಎಂದು ಕಿಡಿಕಾರಿದರು.

ವಕೀಲ ಎನ್.ಆರ್. ಲಾತೂರ, ‘ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಂಆರ್‌ಐ ಯಂತ್ರ ಬಂದ್‌ ಆಗಿ ಹಲವು ತಿಂಗಳುಗಳೇ ಕಳೆದಿದ್ದರೂ ದುರಸ್ತಿ ಮಾಡಿಸಿಲ್ಲ. ಗುತ್ತಿಗೆ ನೌಕರರ ಹೆಸರಿನಲ್ಲಿ ಹಣ ಗುಳುಂ ಮಾಡಲಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.‌

ರೋಗಿಗಳು ಹಾಗೂ ಸಂಬಂಧಿಕರು ಹಲವು ಕುಂದುಕೊರತೆಗಳನ್ನು ಹೇಳಿಕೊಂಡರು.

ನೋಟಿಸ್ ಕೊಡಿ...

‘ನಾನು ಬರುವುದು ಗೊತ್ತಿದ್ದರೂ ಗೈರುಹಾಜರಾದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹುಸೇನಸಾಬ್‌ ಖಾಜಿ ಅವರಿಗೆ ನೋಟಿಸ್‌ ಜಾರಿಗೊಳಿಸಬೇಕು. ಇಲ್ಲಿ ನನ್ನದೇನೂ ಜವಾಬ್ದಾರಿ ಇಲ್ಲ; ನಿರ್ದೇಶಕರೇ ನೋಡಿಕೊಳ್ಳಬೇಕು ಎನ್ನುವ ಅವರು ಈಗ ಎಲ್ಲಿಗೆ ಹೋಗಿದ್ದಾರೆ, ಜನರ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು? ಅವರ ಅಮಾನತಿಗೂ ಕ್ರಮ ಕೈಗೊಳ್ಳಬೇಕು’  ಎಂದು ಬಿಮ್ಸ್ ನಿರ್ದೇಶಕ ಡಾ.ಎಸ್‌.ಟಿ. ಕಳಸದ ಅವರಿಗೆ ಶಂಕರಗೌಡ ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು