ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯ ಉದ್ಯಮಬಾಗ್‌ನಲ್ಲಿ ಅಧ್ವಾನಗಳ ಸಂತೆ!

ಮೂಲಸೌಲಭ್ಯಗಳೂ ಇಲ್ಲದೆ ಬಳಲುತ್ತಿರುವ ಕೈಗಾರಿಕಾ ಪ್ರದೇಶ
Last Updated 8 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ: ಹೊಂಡ, ಗುಂಡಿಗಳ ಸಾಮ್ರಾಜ್ಯ. ಅಲ್ಲಲ್ಲಿ ಕೆಸರಿನಿಂದ ಕೂಡಿರುವ ರಸ್ತೆಗಳು. ಸರ್ಕಸ್ ಮಾಡುತ್ತಾ ಸಂಚರಿಸಬೇಕಾದ ಪರಿಸ್ಥಿತಿ. ಎಲ್ಲೆಂದರಲ್ಲಿ ಹರಡಿರುವ ತ್ಯಾಜ್ಯ. ಸ್ವಚ್ಛತೆಯ ಕೊರತೆ. ಅಸಮರ್ಪಕ ಚರಂಡಿ ವ್ಯವಸ್ಥೆ. ಕಳೆ ಗಿಡಗಳಿಂದ ಕೂಡಿರುವ ರಸ್ತೆ ಬದಿಗಳು.

– ಇದು ಯಾವುದೋ ಅತ್ಯಂತ ಹಿಂದುಳಿದ ಹಳ್ಳಿಯ ಚಿತ್ರಣವಲ್ಲ. ರಾಜ್ಯದ ಅತ್ಯಂತ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಮತ್ತು ಆಟೊಮೊಬೈಲ್‌ ಬಿಡಿಭಾಗಗಳ ತಯಾರಿಕೆ ಹಾಗೂ ರಫ್ತಿಗೆ ಹೆಸರುವಾಸಿಯಾದ ಹಾಗೂ ಫೌಂಡ್ರಿ (ಎರಕ) ಉದ್ಯಮದಿಂದ ಗಮನಸೆಳೆದಿರುವ ಇಲ್ಲಿನ ‘ಉದ್ಯಮಬಾಗ್‌’ನ ದುಃಸ್ಥಿತಿ.

ಇದು ಕೈಗಾರಿಕಾ ಪ್ರದೇಶವೋ, ಹಾಳು ಕೊಂಪೆಯೋ ಎನ್ನುವ ಪ್ರಶ್ನೆ ಅಲ್ಲಿಗೆ ಹೋದಾಗ ಬಾರದಿರದು. ಹಲವು ವರ್ಷಗಳಿಂದಲೂ ಇಲ್ಲಿ ಸುಧಾರಣೆ ಇರಲಿ, ಕನಿಷ್ಠ ಮೂಲಸೌಲಭ್ಯಗಳೂ ಇಲ್ಲ! ಇದು ಪರೋಕ್ಷವಾಗಿ ಅಲ್ಲಿನ ಕೈಗಾರಿಕೆಗಳ ಅಭಿವೃದ್ಧಿಗೂ ತೊಡಕಾಗಿ ಪರಿಣಮಿಸಿದೆ.

ಮೂಗು ಮುಚ್ಚಿಕೊಂಡು:

ಇಲ್ಲಿ ತಯಾರಾಗುವ ಉತ್ಪನ್ನಗಳ ಖರೀದಿ, ಒಪ್ಪಂದ, ಮಾತುಕತೆ, ಕೈಗಾರಿಕೆ ವೀಕ್ಷಣೆ ಮೊದಲಾದವುಗಳಿಗೆ ಬೇರೆ ಕಡೆಗಳಿಂದ ಬರುವ ಉದ್ಯಮಿಗಳು ಅಥವಾ ಪ್ರತಿನಿಧಿಗಳು ಮೂಗು ಮುರಿಯುವ, ಕೆಲವೆಡೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಈ ಕೈಗಾರಿಕಾ ಪ್ರದೇಶದಲ್ಲಿದೆ. ಇದೆಲ್ಲದರ ಪರಿಣಾಮವನ್ನು ಕೈಗಾರಿಕೋದ್ಯಮಿಗಳು ಹಾಗೂ ಕಾರ್ಮಿಕರು ಎದುರಿಸಬೇಕಾಗಿದೆ.

ಅಲ್ಲಿನ ಉದ್ಯಮಗಳಿಂದ ಕಾಲಕಾಲಕ್ಕೆ ತೆರಿಗೆ ಕಟ್ಟಿಸಿಕೊಳ್ಳುವ ಸರ್ಕಾರ ಆ ಪ್ರದೇಶದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಸಾಧ್ಯವಾಗಿಲ್ಲ. ಹೀಗಾಗಿ, ಉದ್ಯಮಿಗಳ ಬೇಡಿಕೆಗಳು ಹಲವು ವರ್ಷಗಳಿಂದಲೂ ಈಡೇರಿಲ್ಲ.

ಕೈಗಾರಿಕಾ ಪ್ರದೇಶ ಎಂದ ಮೇಲೆ ಇಡೀ ದಿನ ಅಲ್ಲಿಗೆ ದ್ವಿಚಕ್ರವಾಹನಗಳಿಂದ ಹಿಡಿದು ಭಾರಿ ವಾಹನಗಳ ಓಡಾಟ ಇದ್ದೇ ಇರುತ್ತದೆ. ಆದರೆ, ಕಾಲಕಾಲಕ್ಕೆ ರಸ್ತೆಗಳನ್ನು ಸುಧಾರಿಸುವ ಕಾರ್ಯ ನಡೆಯುತ್ತಿಲ್ಲ. ರಸ್ತೆಗಳಲ್ಲಿ ಗುಂಡಿಗಳಿವೆಯೋ, ಗುಂಡಿಗಳೊಳಗೆ ರಸ್ತೆ ಇದೆಯೋ ಎನ್ನುವಂತಹ ಪ್ರಶ್ನೆ ಅಲ್ಲಿ ಸಂಚರಿಸಿದಾಗ ಮೂಡುತ್ತದೆ. ಅಷ್ಟರ ಮಟ್ಟಿಗೆ ಸರ್ಕಸ್ ಮಾಡಿಕೊಂಡು ವಾಹನಗಳ ಚಲಾಯಿಸಬೇಕಾದ ಸ್ಥಿತಿ ಅಲ್ಲಿನದು.

ಶೌಚಾಲಯ ವ್ಯವಸ್ಥೆಯೂ ಇಲ್ಲ!

‘ನಗರದ ಉದ್ಯಮಬಾಗ್, ಮಚ್ಚೆ, ಚನ್ನಮ್ಮನಗರ, ನಾವಗೆ ಕೈಗಾರಿಕಾ ಪ್ರದೇಶಗಳಲ್ಲಿ 2ಸಾವಿರಕ್ಕೂ ಹೆಚ್ಚಿನ ಉದ್ಯಮಗಳು ನಡೆಯುತ್ತಿವೆ. ಬಹುತೇಕ ಕಡೆಗಳಲ್ಲಿ ಕಚ್ಚಾ ರಸ್ತೆಗಳೇ ಇವೆ. ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯವರು ಹಿಂದೆ ನೀರಿನ ಸಂಪರ್ಕವನ್ನೇ ಪಡೆಯದವರಿಗೆ ಬಿಲ್‌ ಕಳುಹಿಸಿದ್ದರು. ಅದನ್ನು ಪಾವತಿಸಿಲ್ಲವೆಂದು ಇದುವರೆಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಬಹಳಷ್ಟು ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಬಹಳ ಮಂದಿ ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ಕೆಲವರು ಕೊಳವೆಬಾವಿ ಕೊರೆಸಿಕೊಂಡಿದ್ದಾರೆ. ಹಲವು ವರ್ಷಗಳ ಈ ವಿವಾದ ಬಗೆಹರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಉದ್ಯಮಿ ಉಮೇಶ್ ಶರ್ಮಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಈ ಪ್ರದೇಶ ಅಕ್ಷರಶಃ ನಲುಗುತ್ತಿದೆ. ಹೊರಗಿನಿಂದ ಬರುವವರ ಅನುಕೂಲಕ್ಕೆಂದು ಸಾಮೂಹಿಕ ಶೌಚಾಲಯದ ವ್ಯವಸ್ಥೆಯೂ ಅಲ್ಲಿಲ್ಲ! ಇದರಿಂದಾಗಿ ಅವರು ಬಯಲನ್ನೇ ಆಶ್ರಯಿಸಬೇಕಾದ ದುಃಸ್ಥಿತಿ ಇದೆ. ರಸ್ತೆಗಳೆಲ್ಲ ಹಾಳಾಗಿರುವುದರಿಂದ ಅಪಘಾತಗಳು ಸಾಮಾನ್ಯ ಎನ್ನುವಂತಾಗಿವೆ.

‘ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗುವ ಕೈಗಾರಿಕಾ ಪ್ರದೇಶವಿದು. ಆದರೆ, ಸೌಲಭ್ಯಗಳಲ್ಲಿ ಬಹಳ ಹಿಂದುಳಿದಿದೆ. ನೆರೆಯ ಗೋವಾ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ ಇಲ್ಲಿನ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಬೇಕು’ ಎಂದು ಉದ್ಯಮಿ ಕರಣ್‌ ಜವಳಿ ಒತ್ತಾಯಿಸಿದರು.

‘ಕೈಗಾರಿಕಾ ಸಚಿವರ ಭೇಟಿ ಮನವಿ ಸಲ್ಲಿಕೆಗಷ್ಟೇ ಸೀಮಿತವಾಯಿತು. ಉದ್ಯಮಿಗಳ ಅಹವಾಲನ್ನು ಅವರು ಆಲಿಸಲಿಲ್ಲ. ಅವರು ಕೊಟ್ಟಿರುವ ಭರವಸೆಯಾದರೂ ಈಡೇರುವುದೇ ಕಾದು ನೋಡಬೇಕು’ ಎನ್ನುವುದು ಅಲ್ಲಿನ ಉದ್ಯಮಿಗಳ ನಿರೀಕ್ಷೆಯಾಗಿದೆ.

ಮಳೆಗಾಲದಲ್ಲಿ ಕೆಸರು, ಬೇಸಿಗೆಯಲ್ಲಿ ಧೂಳು!

ಅದರಲ್ಲೂ ಮಳೆ ಬಂದಾಗಲಂತೂ ರಸ್ತೆಗಳು ಅಲ್ಲಲ್ಲಿ ಕಾಲುವೆಗಳು, ಅಲ್ಲಲ್ಲಿ ಕೆಸರು ಗದ್ದೆಗಳಂತಾಗಿರುತ್ತವೆ! ಹಲವು ಕೈಗಾರಿಕೆಗಳಿಗೆ ನೀರು ನುಗ್ಗಿದ ಘಟನೆಗಳೂ ನಡೆದಿದ್ದವು. ಇಲ್ಲಿ ಸಂಚರಿಸುವವರಿಗೆ ಮಳೆಗಾಲದಲ್ಲಿ ಕೆಸರಿನ ಅಭಿಷೇಕವಾದರೆ, ಬೇಸಿಗೆ ಕಾಲದಲ್ಲಿ ಧೂಳಿನ ಮಜ್ಜನವಾಗುತ್ತದೆ. ಸಂಚಾರಕ್ಕೆ ಯೋಗ್ಯವಿಲ್ಲದ ಈ ರಸ್ತೆಗಳಲ್ಲಿ ನಿತ್ಯವೂ ಓಡಾಡುವವರ ಸಂಕಟ ಹೇಳತೀರದು.

ಬೀದಿದೀಪಗಳ ನಿರ್ವಹಣೆಯೂ ಇಲ್ಲಿ ಸಮರ್ಪಕವಾಗಿಲ್ಲ. ಇಲ್ಲಿನ ಬಹುಪಾಲು ಪ್ರದೇಶ ರಾತ್ರಿ ವೇಳೆ ಕತ್ತಲಿನಲ್ಲಿ ಮುಳುಗಿರುತ್ತದೆ. ಈ ಮೂಲಕ ಅನೈತಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತಿದೆ ಎನ್ನುವ ದೂರುಗಳಿವೆ. ವಿದ್ಯುತ್‌ ಸಂಪರ್ಕ ಕಡಿತ ಮೊದಲಾದ ಸಮಸ್ಯೆಗಳು ಎದುರಾದಾಗ ಹೆಸ್ಕಾಂನವರು ತುರ್ತಾಗಿ ಸ್ಪಂದಿಸುವುದಿಲ್ಲ ಎನ್ನುವ ಆರೋಪಗಳೂ ಇವೆ.

15 ವರ್ಷಗಳಿಂದಲೂ...

15 ವರ್ಷಗಳ ಹಿಂದೆ ‘ಅಸೈಡ್’ ಯೋಜನೆಯಡಿ, ಕೈಗಾರಿಕೋದ್ಯಮಿಗಳಿಂದ ಸಂಗ್ರಹಿಸಿದ ಹಣದಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಬಳಿಕ ರಸ್ತೆಗಳು ಅಭಿವೃದ್ಧಿ ‘ಭಾಗ್ಯ’ ಕಂಡಿಲ್ಲ. ಅವುಗಳನ್ನು ಬಳಸುವವರಿಗೆ ತೊಂದರೆ ತಪ್ಪಿಲ್ಲ. ಇದೇ ಪ್ರದೇಶದಲ್ಲಿಯೇ ಕೈಗಾರಿಕಾ ಇಲಾಖೆಯ ಕಚೇರಿಯೂ ಇದೆ. ಆದರೆ, ಅಲ್ಲಿನ ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ. ಕಾಲಕಾಲಕ್ಕೆ ತೆರಿಗೆ ತುಂಬಿಸಿಕೊಳ್ಳುವ ನಗರಪಾಲಿಕೆ ಅಧಿಕಾರಿಗಳು ಕೂಡ ಮೂಲಸೌಲಭ್ಯ ವೃದ್ಧಿಗೆ ಗಮನ ಕೊಟ್ಟಿಲ್ಲ ಎನ್ನುವುದು ಉದ್ಯಮಿಗಳ ಆರೋಪವಾಗಿದೆ.

ಇಲ್ಲಿ ಸೌಲಭ್ಯಗಳ ಕೊರತೆಗಳ ನಡುವೆಯೇ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ.

ಕ್ರಮಕ್ಕೆ ಸೂಚಿಸಿದ್ದೇನೆ

ಉದ್ಯಮಿಗಳಿಗೆ ಕೊಟ್ಟಿದ್ದ ಭರವಸೆಯಂತೆ ಈಚೆಗಷ್ಟೇ ಉದ್ಯಮಬಾಗ್‌ ರಸ್ತೆಗಳೆಲ್ಲವನ್ನೂ ಖುದ್ದು ವೀಕ್ಷಿಸಿದ್ದೇವೆ. ಅವುಗಳ ದುರಸ್ತಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವುದು ಅಗತ್ಯವಾಗಿದೆ ಎನ್ನುವುದು ಮನವರಿಕೆಯಾಗಿದೆ. ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

– ಜಗದೀಶ ಶೆಟ್ಟರ್‌, ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ

**

ಶೀಘ್ರವೇ ಟೆಂಡರ್ ಕರೆಯಲಾಗುವುದು

ಉದ್ಯಮಬಾಗ್‌ನಲ್ಲಿ ಅವ್ಯವಸ್ಥೆಗಳಿರುವುದು ಗಮನಕ್ಕೆ ಬಂದಿದೆ. ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನ ನೀಡುವಂತೆ ಕೈಗಾರಿಕಾ ಸಚಿವರನ್ನೂ ಕೋರಿದ್ದೇನೆ. ಸದ್ಯಕ್ಕೆ ₹ 6 ಕೋಟಿ ವೆಚ್ಚದಲ್ಲಿ ರಸ್ತೆ ಮೊದಲಾದ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶೀಘ್ರವೇ ಟೆಂಡರ್‌ ಪ್ರಕ್ರಿಯೆ ಆರಂಭಗೊಳ್ಳಲಿದೆ.

– ಅಭಯ ಪಾಟೀಲ, ಶಾಸಕ

**

ಪಾಲಿಕೆ ‘ಪಾಲು’ ಕೊಡಲು ಸಿದ್ಧವಿದ್ದೇವೆ

ಅಲ್ಲಿ ರಸ್ತೆ ಮೊದಲಾದ ಕಾಮಗಾರಿಗಳನ್ನು ಕೈಗೊಳ್ಳಲು ₹ 4.80 ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಶೇ 25ರಷ್ಟು ಪಾಲನ್ನು ನಗರಪಾಲಿಕೆಯಿಂದ ನೀಡುವಂತೆ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ ಪಾಟೀಲ ಮನವಿ ಸಲ್ಲಿಸಿದ್ದರು. ಇದರಂತೆ ನಮ್ಮ ಪಾಲು ₹ 1.20 ಕೋಟಿ ನೀಡಲು ಸಿದ್ಧವಿದ್ದೇವೆ. ಕೈಗಾರಿಕಾ ಇಲಾಖೆಯವರು ಸೂಚಿಸುವ ಏಜೆನ್ಸಿಗೆ ಹಣ ನೀಡಲಾಗುವುದು.

– ಕೆ.ಎಚ್‌. ಜಗದೀಶ್‌, ಆಯುಕ್ತ, ನಗರಪಾಲಿಕೆ

---

ಅಂಕಿ–ಅಂಶ

1,082 -ಉದ್ಯಮಬಾಗ್‌ನಲ್ಲಿರುವ ಆಸ್ತಿಗಳ ಸಂಖ್ಯೆ
₹ 3.50 ಕೋಟಿ -ನಗರಪಾಲಿಕೆಗೆ ವಾರ್ಷಿಕ ಬರಬೇಕಾದ ತೆರಿಗೆ
ಶೇ 50 -ಒಟ್ಟು ತೆರಿಗೆಯಲ್ಲಿ ಅಭಿವೃದ್ಧಿಗೆ ವಿನಿಯೋಗಿಸಬಹುದಾದ ಮೊತ್ತ
₹ 6 ಕೋಟಿ -ಸದ್ಯಕ್ಕೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಬಳಸಲು ಉದ್ದೇಶಿಸಿರುವ ಮೊತ್ತ
₹ 1.20 ಕೋಟಿ -ನಗರಪಾಲಿಕೆಯಿಂದ ದೊರೆಯಲಿರುವ ಪಾಲು
300 -ಇಲ್ಲಿರುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT