ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸೇವಕ ಸಮಾವೇಶ: ಕೇಸರಿಮಯವಾದ ಬೆಳಗಾವಿ

ಪಾಲಿಕೆ, ಜಿಲ್ಲಾ–ತಾಲ್ಲೂಕು ಪಂಚಾಯ್ತಿ, ಉಪ ಚುನಾವಣೆ ಮೇಲೆ ಬಿಜೆಪಿ ಕಣ್ಣು
Last Updated 16 ಜನವರಿ 2021, 8:06 IST
ಅಕ್ಷರ ಗಾತ್ರ

ಬೆಳಗಾವಿ: ಬಿಜೆಪಿಯಿಂದ ಭಾನುವಾರ (ಜ.17) ಮಧ್ಯಾಹ್ನ 3ಕ್ಕೆ ಆಯೋಜಿಸಿರುವ ‘ಜನಸೇವಕ ಸಮಾವೇಶ ಸಮಾರೋಪ’ಕ್ಕೆ ಇಲ್ಲಿನ ಜಿಲ್ಲಾ ಕ್ರೀಡಾಂಗಣ ಸಜ್ಜಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಸಂಪುಟದ ಬಹುತೇಕ ಸದಸ್ಯರು, ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು ಸೇರಿದಂತೆ ನೂರಾರು ಗಣ್ಯರು, ಸಹಸ್ರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಕೋವಿಡ್–19 ಕಾಣಿಸಿಕೊಂಡ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ಮೊದಲ ಬೃಹತ್‌ ಸಮಾವೇಶ ಇದಾಗಿದೆ.

ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ರಸ್ತೆ ವಿಭಜಕಗಳಲ್ಲಿ ಆ ಪಕ್ಷದ ಬಾವುಟಗಳು, ನಾಯಕರ ಕಟೌಟ್‌ಗಳು ಮತ್ತು ಬ್ಯಾನರ್‌ಗಳು ರಾರಾಜಿಸುತ್ತಿವೆ. ರಾಣಿ ಚನ್ನಮ್ಮ ವೃತ್ತದಲ್ಲಿರುವ ಪ್ರತಿಮೆಯ ಸ್ಥಳವನ್ನೂ ಬಿಜೆಪಿಯ ಬಾವುಟದ ಬಣ್ಣದ ಬಟ್ಟೆಗಳಿಂದ ಅಲಂಕರಿಸಲಾಗಿದೆ. ಎಲ್ಲೆಡೆ ಕೇಸರಿಮಯ ವಾತಾವರಣ ಕಂಡುಬರುತ್ತಿದೆ.

ದೊಡ್ಡ ಮಟ್ಟದಲ್ಲಿ

ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಲೋಕಸಭಾ ಕ್ಷೇತ್ರದ ಉಪ ಚುನಾವಣೆ, ನಗರಪಾಲಿಕೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿಗಳ ಚುನಾವಣೆ ಮೇಲೆ ಕಣ್ಣಿಟ್ಟು ಸಮಾವೇಶ ಆಯೋಜಿಸಲಾಗಿದೆ. ಪಕ್ಷದ ವರಿಷ್ಠರಲ್ಲಿ ಒಬ್ಬರಾದ ಅಮಿತ್‌ ಶಾ ಬರುತ್ತಿರುವುದು ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದೆ. ರಮೇಶ ಜಾರಕಿಹೊಳಿ ಅವರು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಇಲ್ಲಿ ನಡೆಯುತ್ತಿರುವ ಪಕ್ಷದ ದೊಡ್ಡ ಮಟ್ಟದ ಸಮಾವೇಶ ಇದಾಗಿರುವುದರಿಂದ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ‘3–4 ಲಕ್ಷ ಮಂದಿ ಸೇರಿಸುತ್ತೇವೆ. ಅಭೂತಪೂರ್ವ ಯಶಸ್ಸು ಸಿಗುವಂತೆ ಮಾಡುತ್ತೇವೆ’ ಎಂದು ಹೇಳಿದ್ದಾರೆ.

ಈ ಸಮಾವೇಶದ ಮೂಲಕ, ಬಿಜೆಪಿಯು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಹೊಸ್ತಿಲಲ್ಲಿ ಪ್ರಚಾರಕ್ಕೆ ರಣಕಹಳೆ ಮೊಳಗಿಸುವ ಸಾಧ್ಯತೆ ಇದೆ. ವಿಶೇಷವಾಗಿ, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಬೆಂಬಲಿತರನ್ನು ಅಭಿನಂದಿಸಲಾಗುವುದು.

ಸಮಾವೇಶದ ಶಾ ಅವರು, ಪಕ್ಷದ ಜನಪ್ರತಿನಿಧಿಗಳು ಹಾಗೂ ಪ್ರಮುಖರ ಸಭೆ ನಡೆಸಲಿದ್ದಾರೆ. ಅಲ್ಲಿ ಮುಖ್ಯವಾಗಿ ಉಪ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಚರ್ಚೆಯಾಗುವ ನಿರೀಕ್ಷೆ ಇದೆ. ಸಚಿವ ಸಂಪುಟದಲ್ಲಿ ಸ್ಥಾನ ಸಿಗದೆ ಅತೃಪ್ತರಾಗಿರುವವರು ‘ದೂರು’ ಹೇಳಿಕೊಳ್ಳುವುದಕ್ಕೆ ಸಿದ್ಧವಾಗಿದ್ದಾರೆ ಎನ್ನಲಾಗುತ್ತಿದೆ.

ಮುಂಜಾಗ್ರತಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

***

ವಿರೋಧ ಪಕ್ಷಗಳಿಂದ ಆಕ್ಷೇಪ

ಕೋವಿಡ್–19 ಭೀತಿಯ ನಡುವೆಯೂ ಸಹಸ್ರಾರು ಮಂದಿಯನ್ನು ಸೇರಿಸಿ ಸಮಾವೇಶ ನಡೆಸುತ್ತಿರುವುದಕ್ಕೆ ವಿರೋಧ ಪಕ್ಷದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಕೋವಿಡ್ ಮಾರ್ಗಸೂಚಿ ಜಾರಿಗೊಳಿಸಿದವರೆ ಅದನ್ನು ಉಲ್ಲಂಘಿಸುತ್ತಿದ್ದಾರೆ. ಬಿಜೆಪಿಯವರು ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ’ ಎಂದು ದೂರಿದ್ದಾರೆ.

ಈ ನಡುವೆ, ನೂತನ ಕೃಷಿ ಕಾಯ್ದೆಗಳನ್ನು ಖಂಡಿಸಿ ಪ್ರತಿಭಟಿಸುವುದಾಗಿ ರೈತ ಸಂಘದ ಮುಖಂಡರು ತಿಳಿಸಿದ್ದಾರೆ.

***

ಕೋವಿಡ್ ಮಾರ್ಗಸೂಚಿಗಳ ಪ್ರಕಾರವೇ ಸಮಾವೇಶ ನಡೆಸಲಾಗುತ್ತಿದೆ. ಕಾರ್ಯಕರ್ತರು ಅಂತರ ಕಾಯ್ದುಕೊಂಡು ಪಾಲ್ಗೊಳ್ಳಲಿದ್ದಾರೆ
ರಮೇಶ ಜಾರಕಿಹೊಳಿ

-ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT