ಗುರುವಾರ , ಡಿಸೆಂಬರ್ 3, 2020
20 °C
ಮನೆಗಳಲ್ಲಿ ಕಂಗೊಳಿಸುತ್ತಿರುವ ಆಕಾಶ ಬುಟ್ಟಿಗಳು

ಬೆಳಕಿನ ಹಬ್ಬಕ್ಕೆ ಕುಂದಾನಗರಿ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಸಿದ್ಧತೆ ಮಾಡಿಕೊಂಡಿದ್ದಾರೆ. ಬಹುತೇಕ ಮನೆಗಳಲ್ಲಿ ಆಕಾಶ ಬುಟ್ಟಿಗಳು ತೂಗಾಡುತ್ತಿದ್ದು, ಸಡಗರದ ಸಂದೇಶ ಸಾರುತ್ತಿವೆ.

ಶನಿವಾರದಿಂದ ಆರಂಭವಾಗಿ ಮೂರು ದಿನಗಳವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮನೆಗಳು, ಅಂಗಡಿಗಳು, ಕೆಲಸದ ಸ್ಥಳಗಳಲ್ಲಿ ಲಕ್ಷ್ಮಿ ಪೂಜೆ ಮಾಡುವುದು ವಿಶೇಷ. ಇದಕ್ಕಾಗಿ ಜನರು ಪೂರ್ವಸಿದ್ಧತೆ ಮಾಡಿಕೊಂಡರು. ಹೀಗಾಗಿ, ಮಾರುಕಟ್ಟೆಯಲ್ಲಿ ಶುಕ್ರವಾರ ಜನಜಂಗುಳಿ ಕಂಡುಬಂತು. ಆಕಾಶ ಬುಟ್ಟಿಗಳು, ಹಣತೆಗಳು, ಬಣ್ಣ ಬಣ್ಣದ ರಂಗೋಲಿ ಪುಡಿಗಳು, ಪೂಜಾ ಸಾಮಗ್ರಿಗಳು, ಹೊಸ ಬಟ್ಟೆಗಳ ಖರೀದಿಯಲ್ಲಿ ಜನರು ತೊಡಗಿದ್ದರು.

ಈ ಹಬ್ಬದ ಸಂದರ್ಭದಲ್ಲಿ ಅಂಗಡಿಗಳು ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ಲಕ್ಷ್ಮಿಪೂಜೆ ನಡೆಸುವುದು ಹಾಗೂ ಅಲ್ಲಿ ಕೆಲಸ ಮಾಡುವವರಿಗೆ ಸಿಹಿ ಹಂಚುವುದು ಸಂಪ್ರದಾಯ. ಈ ಕಾರಣದಿಂದ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇತ್ತು. ಶೇ 20ರಷ್ಟು ಬೆಲೆ ಹೆಚ್ಚಾಗಿತ್ತು. ಬೆಲೆ ಏರಿಕೆಯ ನಡುವೆಯೂ ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು.

ವಿವಿಧ ವಿನ್ಯಾಸದ:

ಬಹುತೇಕ ಮನೆಗಳ ಮುಂದೆ ಅಕಾಶಬುಟ್ಟಿಗಳನ್ನು ಕಟ್ಟಿ, ಅವುಗಳಿಗೆ ದೀಪ ಅಳವಡಿಸಿ ಅಲಂಕರಿಸುವುದು ಸಾಮಾನ್ಯ. ಹೀಗಾಗಿ, ಹಲವು ಬಣ್ಣ ಹಾಗೂ ವಿನ್ಯಾಸದ ಅಕಾಶಬುಟ್ಟಿಗಳು ಮಾರುಕಟ್ಟೆಗೆ ಬಂದಿವೆ. ಇವುಗಳ ಬೆಲೆ ಸರಾಸರಿ ₹ 100ರಿಂದ ₹2500ವರೆಗೂ ಇತ್ತು. ಹೂಮಾಲೆ ಒಂದಕ್ಕೆ ಸರಾಸರಿ ₹ 120ರಿಂದ ₹ 360, ಐದು ವಿವಿಧ ರೀತಿಯ ಹಣ್ಣುಗಳಿಗೆ (ಪೂಜೆಗೆ) ₹ 125 ಇತ್ತು. ಮಣ್ಣಿನ ಹಣತೆ ಒಂದಕ್ಕೆ ಸರಾಸರಿ ₹ 30 ಬೆಲೆಯನ್ನು ವ್ಯಾಪಾರಿಗಳು ಹೇಳುತ್ತಿದ್ದರು. ಗಾಳಿಯಿಂದ ದೀಪ ಹಾರದಿರಲೆಂದು ಗೂಡಿನ ಮಾದರಿಯಲ್ಲಿ ಸಿದ್ಧಪಡಿಸಿರುವ ಹಣತೆಗಳು ಗಮನಸೆಳೆದವು.

‘ಈ ಹಬ್ಬದಲ್ಲಿ ಆಕಾಶಬುಟ್ಟಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಮುಂಬೈ, ಕೊಲ್ಹಾಪುರ ಮೊದಲಾದ ಕಡೆಗಳಿಂದ ಅವುಗಳನ್ನು ತಂದು ಮಾರುತ್ತೇವೆ’ ಎಂದು ಫಾಂಗುಳ ಗಲ್ಲಿಯ ವ್ಯಾಪಾರಿ ಹುಸೇನ್ ಹೇಳಿದರು.

ಹಲವು ಆಚರಣೆ:

ಇನ್ನು ಈ ಹಬ್ಬದಲ್ಲಿ, ಜಿಲ್ಲೆಯ ವಿವಿಧೆಡೆ ಅದರಲ್ಲೂ ಬೆಳಗಾವಿ, ಖಾನಾಪುರ ಹಾಗೂ ನಿಪ್ಪಾಣಿ ತಾಲ್ಲೂಕುಗಳಲ್ಲಿ ಮನೆಗಳ ಬಳಿ ಅಥವಾ ಗಲ್ಲಿಯ ಯಾವುದಾದರೊಂದು ಕಡೆ ಮಕ್ಕಳು ಕೋಟೆ ಮಾದರಿ ಕಟ್ಟಿ ಪ್ರದರ್ಶಿಸುವುದು ವಿಶೇಷ. ನಗರವೂ ಸೇರಿದಂತೆ ವಿವಿಧ ಕಡೆಗಳಲ್ಲಿ ಆ ಬಡಾವಣೆಗಳ ಅಥವಾ ಪ್ರದೇಶದ ಮಕ್ಕಳು ಈಗಾಗಲೇ ಮಾದರಿಗಳನ್ನು ಸಿದ್ಧಗೊಳಿಸಿದ್ದಾರೆ. ಅದರ ಬಳಿಯೇ ಬಡಾವಣೆಯ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ಪ್ರೋತ್ಸಾಹಿಸುವುದು ಕಂಡುಬರುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ಸಗಣಿಯಿಂದ ಮಾಡಿದ ಮೂರ್ತಿಗಳನ್ನು ‘ಹಟ್ಟೆವ್ವ’ ಅಥವಾ ‘ಪಾಂಡವರು’ ಎಂದು ಹೆಸರಿಸಿ ಪೂಜಿಸುವ ಸಂಪ್ರದಾಯವಿದೆ. ಮೂಡಲಗಿ ಮೊದಲಾದ ಕಡೆಗಳಲ್ಲಿ ಕುರಿಗಾಹಿಗಳು ಕುರಿಗಳನ್ನು ಬೆದರಿಸು ಕಾರ್ಯಕ್ರಮ ನಡೆಸುತ್ತಾರೆ. ಅಲ್ಲದೇ, ರಾತ್ರಿ ವೇಳೆ ಜನರು ಪಗಡೆ ಆಡುವ   ಆಚರಣೆಯೂ ಇದೆ. ನಗರದ ಅಲ್ಲಲ್ಲಿ ಗೌಳಿಗರು ಎಮ್ಮೆ ಮತ್ತು ಕೋಣಗಳನ್ನು ಅಲಂಕರಿಸಿ ಮೆರವಣಿಗೆ ನಡೆಸಿ, ತಮಗೆ ಆದಾಯ ತಂದುಕೊಡುವ ರಾಸುಗಳಿಗೆ ನಮಿಸುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು