ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ಸಂಭ್ರಮಕ್ಕೆ ಕುಂದಾನಗರಿ ಸಜ್ಜು

ಹೋದ ವರ್ಷ ನೆರೆ, ಈ ಬಾರಿ ಕೋವಿಡ್ ಕಾರಣದಿಂದ ಸರಳ ಆಚರಣೆ
Last Updated 31 ಅಕ್ಟೋಬರ್ 2020, 14:11 IST
ಅಕ್ಷರ ಗಾತ್ರ

ಬೆಳಗಾವಿ: ನಾಡಹಬ್ಬ ಕರ್ನಾಟಕ ರಾಜ್ಯೋತ್ಸವ ಸಂಭ್ರಮಕ್ಕೆ ಕುಂದಾನಗರಿ ನವ ವಧುವಿನಂತೆ ಸಿಂಗಾರಗೊಂಡಿದೆ.

ಹೋದ ವರ್ಷ ನೆರೆಯಿಂದಾಗಿ ಸರಳವಾಗಿ ನಡೆಸಲಾಗಿತ್ತು. ಅದಕ್ಕಿಂತ ಹಿಂದಿನ ವರ್ಷ ಹೆಲಿಕಾಪ್ಟರ್‌ನಿಂದ ಚನ್ನಮ್ಮ ಪ್ರತಿಮೆಗೆ ಪುಷ್ಪವೃಷ್ಟಿ ಮಾಡಿಸಲಾಗಿತ್ತು. ಈ ಬಾರಿ ಕೋವಿಡ್–19 ಕಾರಣದಿಂದಾಗಿ ಸರಳವಾಗಿ ಆಚರಿಸಲಾಗುತ್ತಿದೆ. ಆದರೆ, ಸಂಭ್ರಮಕ್ಕೆ ಕೊರತೆಯಾಗದಂತೆ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ.

ಸಿಪಿಇಡಿ ಕಾಲೇಜು ಮೈದಾನದಲ್ಲಿ ವೇದಿಕೆ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಜನಪ್ರತಿನಿಗಳು ಪಾಲ್ಗೊಳ್ಳಲಿದ್ದಾರೆ. ಬಳಿಕ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಕೊರೊನಾ ವೈರಾಣು ಹರಡದಂತೆ ತಡೆಯುವ ಉದ್ದೇಶದಿಂದಾಗಿ ಈ ಬಾರಿ ಕಲಾತಂಡಗಳು, ಸ್ತಬ್ಧಚಿತ್ರಗಳು ಮತ್ತು ರೂಪಕಗಳ ಅದ್ಧೂರಿ ಮರವಣಿಗೆಗೆ ಅವಕಾಶ ನೀಡಲಾಗಿಲ್ಲ. ಕನ್ನಡ ಪರ ಸಂಘಟನೆಗಳಿಂದ ನಡೆಸುತ್ತಿದ್ದ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತಿಲ್ಲ. ಸುರಕ್ಷತಾ ಕ್ರಮಗಳನ್ನು ಅನುಸರಿಸಿ ವೇದಿಕೆ ಸಮಾರಂಭ ಜರುಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ನಾಡಹಬ್ಬಕ್ಕಾಗಿ ನಗರಪಾಲಿಕೆಯಿಂದ ಇಲ್ಲಿನ ಹೃದಯ ಭಾಗವಾದ ರಾಣಿ ಚನ್ನಮ್ಮ ವೃತ್ತವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಹಳದಿ–ಕೆಂಪು ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಇದರೊಂದಿಗೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಆಕರ್ಷಕ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೇರಿದಂತೆ ವಿವಿಧೆಡೆ ಅಳವಡಿಸಿರುವ ಸ್ವಾಗತ ಕಮಾನು ಜನರನ್ನು ಕೈಬೀಸಿ ಕರೆಯುತ್ತಿದೆ.

ಸಮಾರಂಭದಲ್ಲಿ 20 ಕೊರೊನಾ ಯೋಧರನ್ನು ಸತ್ಕರಿಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ.

ವೇದಿಕೆಯ ಸಿದ್ಧತಾ ಕಾರ್ಯವನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ವೀಕ್ಷಿಸಿದರು. ನಗರಪಾಲಿಕೆಯಿಂದ ಚನ್ನಮ್ಮ ವೃತ್ತವನ್ನು ಮತ್ತಷ್ಟು ಆಕರ್ಷಕಗೊಳಿಸಲಾಗುತ್ತಿದೆ. ಚನ್ನಮ್ಮನ ಇತಿಹಾಸ ಸಾರುವ ಚಿತ್ರಗಳನ್ನು ಬಿಡಿಸುವ ಕಾರ್ಯದಲ್ಲಿ ಕಲಾವಿದರು ರಾತ್ರಿವರೆಗೂ ತೊಡಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT