ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೆಎಲ್ಇ ಆಸ್ಪತ್ರೆಗೆ ‘ಮಾನ್ಯತಾ’ ‍ಪ್ರಶಸ್ತಿ

ದಾದಿಯರಿಗೆ ಯಶಸ್ವಿಯಾಗಿ ತರಬೇತಿ ನೀಡಿದ್ದಕ್ಕೆ ಮನ್ನಣೆ
Last Updated 12 ಜೂನ್ 2020, 12:20 IST
ಅಕ್ಷರ ಗಾತ್ರ

ಬೆಳಗಾವಿ: ‘ತಾಯ್ತನ ಅದ್ಭುತ ಅನುಭವ. ಅದನ್ನು ಇನ್ನಷ್ಟು ಫಲಪ್ರದವಾಗಿಸಲು ಸುರಕ್ಷಿತವಾಗಿ ಹೆರಿಗೆ ಮಾಡುವಲ್ಲಿ ವೈದ್ಯರು ಮತ್ತು ದಾದಿಯರ ಪಾತ್ರ ಬಹುಮುಖ್ಯವಾದುದು’ ಎಂದು ಯುಎಸ್ಎಂ–ಕೆಎಲ್ಇ ನಿರ್ದೇಶಕ ಡಾ.ಎಚ್.ಬಿ. ರಾಜಶೇಖರ ಹೇಳಿದರು.

ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್‌ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗವು ‘ಮಾನ್ಯತಾ’ ಪ್ರಶಸ್ತಿ ಪಡೆದ ಕಾರಣಕ್ಕಾಗಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಫೋಗ್ಸಿ (ಫೆಡರೇಷನ್ ಆಫ್ ಒಬಿಜಿ ಆಂಡ್ ಗೈನಾಕಲಾಜಿ ಆಫ್ ಇಂಡಿಯಾ) ಪ್ರಾಯೋಜಕತ್ವದಲ್ಲಿ ಜರುಗುವ ಈ ಕಾರ್ಯಕ್ರಮದಲ್ಲಿ ಆಸ್ಪತ್ರೆಯು ಅತ್ಯುನ್ನತ ತರಬೇತಿ ನೀಡುತ್ತಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ’ ಎಂದು ಸಂತಸ ವ್ಯಕ್ತಪಡಿಸಿದರು.

ವೈಜ್ಞಾನಿಕ ತಳಹದಿಯಲ್ಲಿ:

ಸ್ತ್ರೀ ರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ.ರಾಜೇಶ್ವರಿ ಕಡಕೋಳ ಮಾತನಾಡಿ, ‘ಖಾಸಗಿ ಆಸ್ಪತ್ರೆಗಳಲ್ಲಿ ತಾಯಂದಿರು ಹಾಗೂ ಮಕ್ಕಳ ಮರಣ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆಗೊಳಿಸುವ ಉದ್ದೇಶದಿಂದ ರಾಷ್ಟ್ರ ಮಟ್ಟದಲ್ಲಿ ಫೋಗ್ಸಿ ಪ್ರಾಯೋಜಕತ್ವದಲ್ಲಿ ತರಬೇತಿ ನಡೆಯುತ್ತದೆ. ಪ್ರಸವ ಪೂರ್ವ, ಪ್ರಸವ ಹಾಗೂ ನಂತರದ ಕಾಳಜಿ ಬಗ್ಗೆ ವೈಜ್ಞಾನಿಕ ತಳಹದಿಯ ಆಧಾರದ ಮೇಲೆ ದಾದಿಯರಿಗೆ ತರಬೇತಿ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಅನೇಕ ಸಮಯದಲ್ಲಿ ಪ್ರಸವ ಕೋಣೆಯಲ್ಲಿ ಆಗುವ ಸಣ್ಣಪುಟ್ಟ ತಪ್ಪುಗಳಿಂದ ತಾಯಂದಿರು ಹಾಗೂ ನವಜಾತ ಶಿಶುಗಳ ಮರಣ ಸಂಭವಿಸಿರುವ ಉದಾಹರಣೆಗಳಿವೆ. ಕ್ಲಿಷ್ಟಕರ ಸಂದರ್ಭಗಳಲ್ಲಿ ಹಾಗೂ ವೈದ್ಯರ ಗೈರುಹಾಜರಿಯಲ್ಲಿ ದಾದಿಯರು ನಿರ್ವಹಿಸಲೇಬೇಕಾದ ಕ್ರಮಗಳ ಕುರಿತು ತಿಳಿಸಲಾಗಿದೆ. ಬೆಳಗಾವಿಯಲ್ಲಿ ಒಟ್ಟು 9 ಆಸ್ಪತ್ರೆಗಳು ನೋಂದಾಯಿಸಿಕೊಂಡಿದ್ದು, ಅಲ್ಲಿನ ದಾದಿಯರು ತರಬೇತಿ ಪಡೆದಿದ್ದಾರೆ. ಈ ಎಲ್ಲ ಸಿಬ್ಬಂದಿಗೆ ಯಶಸ್ವಿಯಾಗಿ ತರಬೇತಿ ನೀಡಿದ ಕಾರಣದಿಂದ ನಮ್ಮ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗಕ್ಕೆ ಪ್ರಶಸ್ತಿ ಲಭಿಸಿದೆ’ ಎಂದು ಮಾಹಿತಿ ನೀಡಿದರು.

ಮುಖ್ಯ ಜವಾಬ್ದಾರಿ:

ಆಸ್ಪತ್ರೆ ನಿರ್ದೇಶಕ ಡಾ.ಎಸ್.ಸಿ. ಧಾರವಾಡ, ‘ವೈದ್ಯ ವಿಜ್ಞಾನವು ಅಭಿವೃದ್ಧಿ ಹೊಂದುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ತನ್ನ ಆಸ್ಪತ್ರೆಗಳಲ್ಲಿ ತರಬೇತಿ ಕಾರ್ಯಕ್ರಮ ಹಾಗೂ ಕಾರ್ಯಾಗಾರಗಳನ್ನು ಆಗಾಗ ನಡೆಸುತ್ತಿದೆ. ಆದರೆ, ಖಾಸಗಿ ಹಾಗೂ ಸ್ಥಳೀಯ ಆರೋಗ್ಯ ಸಂಸ್ಥೆಗಳು ಪ್ರಾಥಮಿಕವಾಗಿ ಗರ್ಭಿಣಿಯರ ಆರೈಕೆಯಲ್ಲಿ ಇರುವುದರಿಂದ ಅಲ್ಲಿನ ದಾದಿಯರು ಹಾಗೂ ಸಹಾಯಕ ಸಿಬ್ಬಂದಿಗೆ ತರಬೇತಿ ನೀಡುವ ಅತಿ ಮುಖ್ಯವಾದ ಜವಾಬ್ದಾರಿಯನ್ನು ನಮ್ಮ ಆಸ್ಪತ್ರೆ ಪರಿಣಾಮಕಾರಿಯಾಗಿ ನಿರ್ವಹಿಸಿ ಪ್ರಶಸ್ತಿಗೆ ಭಾಜನವಾಗಿದೆ’ ಎಂದರು.

‘ಕಡಿಮೆ ಅವಧಿಯಲ್ಲಿ ಪ್ರಶಸ್ತಿ ಪಡೆದಿದ್ದಕ್ಕಾಗಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಅಭಿನಂದಿಸಿದ್ದಾರೆ’ ಎಂದು ಹೇಳಿದರು.

ಹಿರಿಯ ವೈದ್ಯರಾದ ಡಾ.ಆರ್.ಜಿ. ನೆಲವಿಗಿ, ಡಾ.ಸಿ.ಎನ್. ತುಗಶೆಟ್ಟಿ, ಡಾ.ಬಿ.ಬಿ. ಪುಟ್ಟಿ, ಡಾ.ಸತೀಶ ಧಾಮಣಕರ, ಡಾ.ಬಿ.ಎಸ್. ಮಹಾಂತಶೆಟ್ಟಿ, ಡಾ.ಆರ್.ಆರ್. ವಾಳ್ವೇಕರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT