ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಚುನಾವಣೆಯಲ್ಲಿ ಬೆಳಗಾವಿ ನಾಯಕರ ತಂತ್ರ

ಬಿಜೆಪಿ, ಕಾಂಗ್ರೆಸ್ ನಾಯಕರಿಂದ ಪ್ರಚಾರ
Last Updated 30 ಜನವರಿ 2022, 7:32 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರುವ ಗೋವಾದಲ್ಲಿ ಫೆ.14ರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಬೆಳಗಾವಿ ನಾಯಕರು ಭಾಗವಹಿಸುತ್ತಿದ್ದಾರೆ.

ಆ ರಾಜ್ಯದವರು ತಾಜಾ ತರಕಾರಿಗೆ ಬೆಳಗಾವಿಯನ್ನು ಅವಲಂಬಿಸಿದ್ದಾರೆ. ನಿತ್ಯವೂ ಲೋಡ್‌ಗಟ್ಟಲೆ ತರಕಾರಿ ಅಲ್ಲಿಗೆ ಹೋಗುತ್ತದೆ. ಅಲ್ಲಿಂದ ಮೀನುಗಳನ್ನು ಇಲ್ಲಿಗೆ ತರಲಾಗುತ್ತದೆ. ವಾರಾಂತ್ಯದಲ್ಲಿ ಅಲ್ಲಿನವರು ಇಲ್ಲಿಗೆ ಹಾಗೂ ಇಲ್ಲಿನವರು ಅಲ್ಲಿಗೆ ಪ್ರವಾಸಕ್ಕೆ ಹೋಗುವುದು ಸಾಮಾನ್ಯವಾಗಿದೆ. ಹೀಗಾಗಿ, ಎರಡೂ ರಾಜ್ಯಗಳೊಂದಿಗೆ ಉತ್ತಮ ಬಾಂಧವ್ಯವಿದೆ; ನೆಂಟಸ್ತಿಕೆಯೂ ಇದೆ. ಹೆಚ್ಚಾಗಿ ಅಲ್ಲಿನ ಹಲವು ಕ್ಷೇತ್ರಗಳಲ್ಲಿ ಕನ್ನಡ ಭಾಷಿಗರು ನಿರ್ಣಾಯಕ ಸಂಖ್ಯೆಯಲ್ಲಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಇಲ್ಲಿನ ನಾಯಕರನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ಪ್ರಚಾರಕರನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ, ಯಾರೇ ಗೆದ್ದರೂ ಬೆಳಗಾವಿಗರ ಪಾತ್ರದ ಪಾಲು ಕೂಡ ಇರಲಿದೆ.

ನಾಯಕರ ತಂತ್ರ

ಇಲ್ಲಿನವರಿಗೆ ಕನ್ನಡದೊಂದಿಗೆ ಹಿಂದಿ, ಮರಾಠಿ ಭಾಷೆಯೂ ಸರಾಗವಾಗಿ ಬರುತ್ತದೆ. ಇದರಿಂದ, ಕನ್ನಡಿಗರೊಂದಿಗೆ ಇತರ ಭಾಷಿಗರ ಮನವೊಲಿಕೆಯೂ ಸಾಧ್ಯವಾಗಬಹುದು ಎನ್ನುವುದು ರಾಷ್ಟ್ರೀಯ ಪಕ್ಷಗಳ ನಾಯಕರ ತಂತ್ರವಾಗಿದೆ.

ಜಿಲ್ಲೆಯಲ್ಲಿ ವಿಧಾನಪರಿಷತ್‌ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಣತಂತ್ರ ಹೆಣದು ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರಣವಾದ ಯಮಕನಮರಡಿ ಕ್ಷೇತ್ರದ ಶಾಸಕರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರಿಗೆ ಗೋವಾ ವಿಧಾನಸಭೆ ಚುನಾವಣೆ ಜವಾಬ್ದಾರಿಯನ್ನು ಪಕ್ಷ ವಹಿಸಿದೆ. ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಎಐಸಿಸಿ ಗೋವಾ ವೀಕ್ಷಕ ಸುನೀಲ ಹನಮನ್ನವರ, ಗ್ರಾಮೀಣ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿ ಪ್ರದೀಪ್‌ ಎಂ.ಜೆ. ತಂಡದಲ್ಲಿದ್ದಾರೆ. ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ವಿಶ್ವಾಸ ವೈದ್ಯ, ಪಂಚನಗೌಡ ದ್ಯಾಮನಗೌಡ್ರ, ಸಿದ್ದು ಗುಣಗಾರ, ರಾಜದೀಪ ಕೌಜಲಗಿ ಮೊದಲಾದದವರು ಪ್ರಚಾರ ಮಾಡಿದ್ದಾರೆ.

ಬಿಜೆಪಿಯಿಂದ ನಗರಪಾಲಿಕೆ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ತಂದು ಕೊಟ್ಟ ಜೋಡಿ, ಶಾಸಕರಾದ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಅವರನ್ನು ನಿಯೋಜಿಸಲಾಗಿದೆ. ಅವರೊಂದಿಗೆ ಆ ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಮೊದಲಾದವರು ಬೆಂಬಲಿಗರೊಂದಿಗೆ ತೆರಳಿ ಅಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ.

ಎಲ್ಲರಿಗೂ ಗೆಲ್ಲುವ ವಿಶ್ವಾಸ

‘ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಹಾಗೂ ನನಗೆ ದಕ್ಷಿಣ ಗೋವಾದ 15 ಕ್ಷೇತ್ರಗಳ ಉಸ್ತುವಾರಿಯನ್ನು ವರಿಷ್ಠರು ವಹಿಸಿದ್ದಾರೆ. ನಾನು 6 ಕ್ಷೇತ್ರಗಳಲ್ಲಿ ಹೆಚ್ಚು ಗಮನಹರಿಸಿದ್ದೇನೆ. ಪ್ರಚಾರ ನಡೆಸಿದ್ದೇನೆ. ಕನ್ನಡಿಗರು ಸೇರಿದಂತೆ ಎಲ್ಲರಿಂದಲೂ ಬೆಂಬಲ ಕೇಳುತ್ತಿದ್ದೇವೆ. ಉತ್ತಮ ಪ್ರತಿಕ್ರಿಯೆ ಸಿಗುತ್ತದೆ’ ಎಂದು ಅಭಯ ಪಾಟೀಲ ತಿಳಿಸಿದರು.

‘ಗೋವಾ– ಬೆಳಗಾವಿ ನಡುವೆ ಉತ್ತಮ ನಂಟಿದೆ. ಅದನ್ನು ಈ ಚುನಾವಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಚುನಾವಣಾ ಉಸ್ತುವಾರಿ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕಾರ್ಯತಂತ್ರ ರೂಪಿಸಿದ್ದೇವೆ. ಕಾಂಗ್ರೆಸ್‌ ಅಧಿಕಾರ ಹಿಡಿಯುವುದು ಖಚಿತ’ ಎಂದು ಸತೀಶ ಜಾರಕಿಹೊಳಿ ವಿಶ್ವಾಸ ವ್ಯಕ್ತ‍ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT