ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಉಪ ಚುನಾವಣೆ: ಗೋಕಾಕ, ಅರಭಾವಿಯಿಂದ ಡಿಕೆಶಿ, ಸಿದ್ದರಾಮಯ್ಯ ದೂರ ಏಕೆ?

ಉಪ ಚುನಾವಣಾ ಕಣದಲ್ಲಿ ಸದ್ದು ಮಾಡದ ಸಿ.ಡಿ ಪ್ರಕರಣ
Last Updated 12 ಏಪ್ರಿಲ್ 2021, 1:23 IST
ಅಕ್ಷರ ಗಾತ್ರ

ಬೆಳಗಾವಿ: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ. ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿತು. ಹಲವು ವಿಶ್ಲೇಷಣೆ ಮತ್ತು ಚರ್ಚೆಗಳಿಗೂ ಕಾರಣವಾಯಿತು. ಈ ವಿಷಯವನ್ನು ಕಾಂಗ್ರೆಸ್‌ ನಾಯಕರು ವಿಧಾನಮಂಡಲ ಅಧಿವೇಶನದಲ್ಲೂ ಪ್ರಸ್ತಾಪಿಸಿದ್ದರು. ಆದರೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸದ್ದಾಗಲಿಲ್ಲ.

ಕಾಂಗ್ರೆಸ್‌ನವರು ಸಿ.ಡಿ. ಪ್ರಕರಣ ಮುಂದಿಟ್ಟುಕೊಂಡು ಉಪ ಚುನಾವಣೆಯಲ್ಲಿ ಮತ ಯಾಚಿಸಿ, ಲಾಭ ಪಡೆಯಲು ಯತ್ನಿಸಬಹುದು ಎಂಬ ರಾಜಕೀಯ ವಿಶ್ಲೇಷಕರ ನಿರೀಕ್ಷೆಗಳು ಹುಸಿಯಾದವು. ಏಕೆಂದರೆ, ಕಾಂಗ್ರೆಸ್‌ ನಾಯಕರು ಯಾವ ಪ್ರಚಾರ ಸಭೆಯಲ್ಲೂ ಆ ವಿಷಯ ಪ್ರಸ್ತಾಪಿಸಲೇ ಇಲ್ಲ. ರಮೇಶ ಜಾರಕಿಹೊಳಿ ವಿರುದ್ಧವಾಗಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿಯೂ ಮಾತನಾಡಲಿಲ್ಲ.

ಮುಜುಗರ ಆಗದಿರಲೆಂದು

ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಗೋಕಾಕ ಹಾಗೂ ಅರಭಾವಿ ಕ್ಷೇತ್ರಗಳೂ ಸೇರಿವೆ. ಗೋಕಾಕನ್ನು ರಮೇಶ ಜಾರಕಿಹೊಳಿ ಪ್ರತಿನಿಧಿಸಿದರೆ, ಅರಭಾವಿಯಲ್ಲಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಶಾಸಕರಾಗಿದ್ದಾರೆ. ಇಬ್ಬರೂ ಬಿಜೆಪಿಯಲ್ಲಿದ್ದಾರೆ. ಇವರಿಬ್ಬರ ಸಹೋದರ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ ಜಾರಕಿಹೊಳಿ ಕಾಂಗ್ರೆಸ್‌ನ ಅಭ್ಯರ್ಥಿ ಆಗಿದ್ದಾರೆ. ‘ಅವರಿಗೆ ಮುಜುಗರ ಉಂಟು ಮಾಡಬಾರದೆಂಬ ಕಾರಣಕ್ಕೆ ಸಿ.ಡಿ. ಪ್ರಕರಣವನ್ನು ಪ್ರಸ್ತಾಪಿಸದಿರಲು ಕಾಂಗ್ರೆಸ್‌ ಪಕ್ಷದ ವೇದಿಕೆಯಲ್ಲಿ ನಿರ್ಣಯಿಸಲಾಗಿತ್ತು. ನಾನು ಸ್ಪರ್ಧಿಸಬೇಕೆಂದರೆ, ಸಿ.ಡಿ. ಪ್ರಕರಣದ ವಿಷಯ ಚರ್ಚಿಸಬಾರದು ಎಂಬ ಷರತ್ತನ್ನು ವಿಧಿಸಿದ್ದರು. ಅಲ್ಲದೇ, ಗೋಕಾಕ ಮತ್ತು ಅರಭಾವಿಯ ಜವಾಬ್ದಾರಿ ನನಗೇ ಬಿಡಬೇಕು ಎಂದು ವರಿಷ್ಠರ ಎದುರು ತಿಳಿಸಿದ್ದರು. ಹೀಗಾಗಿ, ರಾಜ್ಯ ನಾಯಕರು ಸಿ.ಡಿ. ವಿಚಾರ ಪ್ರಸ್ತಾಪಿಸಲಿಲ್ಲ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೋಗಲೇ ಇಲ್ಲ

ಕ್ಷೇತ್ರದ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮೊದಲಾದ ನಾಯಕರು ಗೋಕಾಕ ಮತ್ತು ಅರಭಾವಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಲಿಲ್ಲ. ಕೆಪಿಸಿಸಿ ವಕ್ತಾರೆಯೂ ಆಗಿರುವ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನೂ ಆ ಕ್ಷೇತ್ರಗಳಿಂದ ದೂರವಿಡಲಾಯಿತು. ಅಲ್ಲಿ ಸತೀಶ ಏಕಾಂಗಿಯಾಗಿ ಪ್ರಚಾರ ಮಾಡಿದ್ದಾರೆ. ಸಹೋದರ ಲಖನ್‌ ಜಾರಕಿಹೊಳಿ ಕೂಡ ಸಾಥ್‌ ಕೊಟ್ಟಿಲ್ಲ.

ಮತದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿದ್ದರೂ, ಗೋಕಾಕದಲ್ಲಿ ರಮೇಶ ಹಾಗೂ ಅರಭಾವಿಯಲ್ಲಿ ಬಾಲಚಂದ್ರ ಪ್ರಚಾರ ನಡೆಸಿಲ್ಲ. ಅವರು ರಾಜಕಾರಣ ಆರಂಭಿಸಿದಾಗಿನಿಂದ ಪ್ರಚಾರದಿಂದ ದೂರ ಉಳಿದದ್ದು ಇದೇ ಮೊದಲ ಚುನಾವಣೆಯಾಗಿದೆ. ರಮೇಶ ಅವರಿಗೆ ಏ.1ರಂದು ಕೋವಿಡ್–19 ದೃಢಪಟ್ಟಿತ್ತು. ಚಿಕಿತ್ಸೆ ಪಡೆದು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಅದಕ್ಕಿಂತ ಮುಂಚೆಯೇ ಚುನಾವಣೆ ಘೋಷಣೆಯಾಗಿತ್ತಾದರೂ, ಸಿ.ಡಿ. ಪ್ರಕರಣದಿಂದಾಗಿ ಅವರು ಕ್ಷೇತ್ರಕ್ಕೆ ಬಂದಿರಲಿಲ್ಲ. ಬಾಲಚಂದ್ರ ಕೂಡ ಅವರ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ, ಬಿಜೆಪಿ ನಾಯಕರ ದಂಡೇ ಅಲ್ಲಿ ಪ್ರಚಾರ ನಡೆಸಿದೆ. ಜಾರಕಿಹೊಳಿ ಸಹೋದರರ ಮೌನ ಯಾರಿಗೆ ಲಾಭವಾಗಲಿದೆ, ಯಾರಿಗೆ ಅನುಕೂಲ ತರಲಿದೆ ಎನ್ನುವುದು ಜನರ ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT