ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾಗಬೇಕು ಶಿಕ್ಷಣವೆಂಬ ಶಿಕ್ಷೆ

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

ಏಳು ದಶಕಗಳ ಹಿಂದೆ ಪ್ರಾಥಮಿಕ ಶಿಕ್ಷಣ ಹೇಗೆ ನಡೆದಿತ್ತು ಎಂದರೆ, ಒಂದರಿಂದ ಐದನೇ ತರಗತಿವರೆಗಿನ ಅಂದಿನ ಶಾಲೆಗಳಲ್ಲಿ ಇಬ್ಬರು ಅಥವಾ ಮೂವರು ಶಿಕ್ಷಕರು ಇರುತ್ತಿದ್ದರು. ಮಕ್ಕಳ ಕೈಯಲ್ಲಿ ಸ್ಲೇಟು ಎಂಬ ಸಾಧನ ಇರುತ್ತಿತ್ತು. ಶಿಕ್ಷಕ– ಶಿಕ್ಷಕಿಯರು ಶಾಲೆಯಲ್ಲೇ ಅಲ್ಲಿ ಇಲ್ಲಿ ನಿಂತು–ಕುಂತು ಹರಟೆ ಹೊಡೆಯುತ್ತಿರುತ್ತಿದ್ದರು. ಮಕ್ಕಳಿಗೆ ಸ್ಲೇಟಿನಲ್ಲಿ ಒಂದರಿಂದ ನೂರರತನಕ ಅಂಕೆಗಳನ್ನು ಅಥವಾ ಕನ್ನಡ ವರ್ಣಮಾಲೆ ಬರೆಯಲು ಹೇಳುತ್ತಿದ್ದರು. ಮಕ್ಕಳು ಬರೆದು ತಂದು ತೋರಿಸಿದ ಕೂಡಲೇ ‘ಅಳಿಸಿ ಪುನಃ ಬರೆಯಿರಿ’ ಎಂದು ಆಜ್ಞಾಪಿಸುತ್ತಿದ್ದರು. ಇದು ಅರ್ಧ ದಿನದ ಕಾಯಕ. ಉಳಿದರ್ಧ ದಿನ, ಕೆಲವೇ ಪುಟಗಳಿರುವ ಕನ್ನಡ ಪಠ್ಯಪುಸ್ತಕದ ಯಾವುದಾದರೊಂದು ಪಾಠವನ್ನು ಒಬ್ಬರಾದ ನಂತರ ಒಬ್ಬರಿಂದ ಓದಿಸುವುದು. ಕನ್ನಡ ಪಾಠ ಎಂದರೆ ಇಷ್ಟೆ. ಆಯ್ದ ಒಬ್ಬ ಹುಡುಗನಿಗೆ ಹತ್ತಿರದ ಹೋಟೆಲ್‌ನಿಂದ ಶಿಕ್ಷಕ–ಶಿಕ್ಷಕಿಯರಿಗೆ ಚಹಾ ತರುವ ಕೆಲಸವಿರುತ್ತಿತ್ತು. ಗಣಿತ ಕಲಿಕೆ ಎಂದರೆ ಮುಖ್ಯವಾಗಿ ಪೆಟ್ಟುಗಳು! ಪೆಟ್ಟುಗಳು!

‘ಇಂಥ ಶಾಲೆಯಲ್ಲಿ ಓದಿ ಶ್ರೇಷ್ಠ ವ್ಯಕ್ತಿಗಳಾದವರು ಇದ್ದರು’ ಎನ್ನುವ ಶಿಕ್ಷಕರಿದ್ದರೆ ಅವರನ್ನು ಆತ್ಮವಂಚಕರು ಎಂದು ತಿಳಿಯಬೇಕಾಗುತ್ತದೆ. ಯಾಕೆಂದರೆ, ಹಾಗೆ ಯಾರೋ ಕೆಲವರು ಶ್ರೇಷ್ಠರಾಗಲು ಕಾರಣ ಆ ಮಕ್ಕಳ ತಾಯಿ– ತಂದೆ ಅಥವಾ ಅಪರೂಪಕ್ಕೆ ಯಾರೋ ಒಬ್ಬ ಒಳ್ಳೆಯ ಶಿಕ್ಷಕ ಅಥವಾ ಸುಶಿಕ್ಷಿತ ಬಂಧು.

ಇಂದಿನ ಕೆಜಿ ಶಾಲಾ ಹಂತದಿಂದ ಪ್ರಾಥಮಿಕ, ಮಾಧ್ಯಮಿಕ ಶಾಲೆಯವರೆಗಿನ ಶಿಕ್ಷಣದ ಸ್ವರೂಪ ಹೇಗಿದೆ ಎಂದುಹೇಳುವುದು ಸುಲಭವಲ್ಲ. ಅದಕ್ಕಾಗಿ ಕೆಲವು ಸಾವಿರ ಅಥವಾ ಕೆಲವು ಲಕ್ಷ ರೂಪಾಯಿಗಳನ್ನು ಸುರಿಯುವ ತಾಯಿತಂದೆಯರೇ ಆ ಬಗ್ಗೆ ಯೋಚಿಸಬೇಕು.

ಇವತ್ತು ಶಾಲೆಗೆ ಹೋಗುತ್ತಿರುವ ಮಕ್ಕಳ ಮತ್ತು ಪೋಷಕರ ಶಾಂತಿ ಮತ್ತು ಸಂತೋಷವನ್ನು ಕದಡುತ್ತಿರುವ ಶಿಕ್ಷಣ ಕ್ರಮದ ಬಗ್ಗೆ ಸರ್ಕಾರ ಯೋಚಿಸಬೇಕು. ಎಷ್ಟೋ ಕಾಲದಿಂದ ಖಾಸಗಿ ಶಾಲೆಗಳು ಶಾಲೆಗಳಾಗಿರದೆ, ಕೋಟಿಗಟ್ಟಲೆ ಹಣ ಮಾಡುವ ‘ಎಜುಕೇಷನಲ್ ಫ್ಯಾಕ್ಟರಿ’ಗಳಾಗಿರುವ ಬಗ್ಗೆ ಸಮಾಜ ಯೋಚಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕೂಡ ಇದೇ ಮಾದರಿಯಲ್ಲಿ ಕಲಿಸಲು ಶಿಕ್ಷಕ– ಶಿಕ್ಷಕಿಯರ ಮೇಲೆ ಅಪಾರವಾದ ಒತ್ತಡ ಹೇರುವಂಥ ಸಿಲೆಬಸ್ ಮತ್ತು ಶಿಕ್ಷಣ ಪದ್ಧತಿ ಈಗ ಜಾರಿಯಲ್ಲಿದೆ. ಇದರಲ್ಲಿ ಮುಖ್ಯವಾಗಿ ಕಲಿಕೆಗಿಂತ ಆ್ಯಕ್ಟಿವಿಟೀಸ್ ಅರ್ಥಾತ್ ಚಟುವಟಿಕೆ ಎಂಬ ಪಿಶಾಚಿಯದೇ ಕಾರುಬಾರು. ಚಿಕ್ಕ ಮಕ್ಕಳ ಕೈಯಲ್ಲಿ ಇಷ್ಟೆಲ್ಲ ಆ್ಯಕ್ಟಿವಿಟೀಸ್ ಮಾಡಿಸುವುದು ಅಗತ್ಯವೇ ಎಂದು ಯೋಚಿಸುವರೇ ಇಲ್ಲ. ಮಗುವಿಗೆ ಕಲಿಕೆಯಲ್ಲಿ ಆನಂದ ಎಂಬುದು ಇಲ್ಲ. ಇದರ ಜೊತೆ ಮಕ್ಕಳು ಮತ್ತು ಶಿಕ್ಷಕ– ಶಿಕ್ಷಕಿಯರು ಮಾತ್ರವಲ್ಲ, ಮಕ್ಕಳ ತಾಯಿತಂದೆ ಕೂಡ ಬಹುಮಹಡಿ ಕಟ್ಟುವ ಕೆಲಸಗಾರರಂತೆ ಸತತವಾಗಿ ದುಡಿಯಬೇಕು! ಮಕ್ಕಳಿಗೋ ಉಸಿರಾಡಲೂ ಅವಕಾಶ ಸಿಗದಂತೆ ಉರು ಹಾಕುವ ‘ಓದು’ ಎಂಬ ಕೆಲಸ, ಟ್ಯೂಷನ್ ಮತ್ತು ಆ್ಯಕ್ಟಿವಿಟೀಸ್ ಎಂಬ ದುಡಿತ. ಇದರ ಮುಕ್ಕಾಲಂಶ ಪೋಷಕರೇ ಮಾಡಿಕೊಡಬೇಕಾದುದರಿಂದ ಇದು ಮಕ್ಕಳಿಗೂ ಮಕ್ಕಳ ಪೋಷಕರಿಗೂ ವಾರ್ಷಿಕ ರಜಾಕಾಲವನ್ನು ಕಾನ್ಸಂಟ್ರೇಷನ್ ಕ್ಯಾಂಪಾಗಿಸುತ್ತದೆ. ಹೇಗೆಂದರೆ, ಈಗ ಹಲವು ವರ್ಷಗಳಿಂದ ಮಕ್ಕಳು ತಮ್ಮ ಪೋಷಕರ ಜೊತೆ ಇರಬಾರದು ಎಂಬ ರೀತಿಯಲ್ಲಿ ಮಕ್ಕಳ ರಜಾಕಾಲ ಮತ್ತು ಶಿಕ್ಷಕರಾಗಿರುವ ಪೋಷಕರ ರಜಾಕಾಲವನ್ನು ವಿಚ್ಛೇದಿಸಲಾಗಿದೆ. ಇದರಿಂದಾಗಿ ಮಕ್ಕಳಿಗೆ ಅಪ್ಪ ಅಮ್ಮನ ಜೊತೆಯೋ ಅಜ್ಜ ಅಜ್ಜಿಯರ ಜೊತೆಯೋ, ಸ್ನೇಹಿತರ, ಬಂಧುಗಳ ಮನೆಗೆ ಹೋಗಿ ಅಲ್ಲಿರುವ ಮಕ್ಕಳ ಸ್ನೇಹಿತರ ಜೊತೆಯೋ ಓಡಿಯಾಡಿ ರಜೆಯನ್ನು ಆನಂದದಿಂದ ಕಳೆಯುವ ಅವಕಾಶವೇ ಇಲ್ಲವಾಗುತ್ತದೆ. ಇದರಿಂದಾಗಿ ಮಕ್ಕಳು ಎಮೋಷನಲ್ ಸ್ಟಾರ್ವೇಷನ್‌ಗೆ ಗುರಿಯಾಗುತ್ತಾರೆ. ಶಿಕ್ಷಕರು ತಮ್ಮ ತರಬೇತಿ ಕಾಲದಲ್ಲಿ ಮಕ್ಕಳ ಮನೋವಿಜ್ಞಾನದ ಅಧ್ಯಯನ ಮಾಡಿರುವುದಿಲ್ಲವೇನೊ ಎಂಬ ಸಂದೇಹವುಂಟಾಗುತ್ತದೆ. ಈ ಪರಿಯ ಶಿಕ್ಷಣದಿಂದ ಶಾಲೆಗೆ ಏನು ಲಾಭವೋ, ಸಮಾಜಕ್ಕೇನು ಲಾಭವೋ ಶಿಕ್ಷಣ ಇಲಾಖೆಯೇ ಹೇಳಬೇಕು. ತಮ್ಮ ಮನಸ್ಸಿನಲ್ಲಿರುವ ಭಾವನೆಗಳಿಗೆ ಜೀವ ಕೊಡಲು ಇವತ್ತು ಮಕ್ಕಳಿಗೆ ಅವಕಾಶ ಸಿಗುತ್ತಿಲ್ಲ. ಚಿಂತನಶೀಲತೆ, ಸೃಜನಶೀಲತೆ ಕುಂಠಿತವಾಗುತ್ತಿದೆ. ಮಕ್ಕಳು ರೊಬೊಟುಗಳಂತಾಗುತ್ತಿದ್ದಾರೆ. ಸಮಾಜ ಕೂಡ ದ್ರವ್ಯದೇವತೆಯ ಧ್ಯಾನದಲ್ಲಿದೆ. ಮಕ್ಕಳು ಕೂಡ ಅದೇ ಧ್ಯಾನದಲ್ಲಿ ಬೆಳೆದರೆ ಮುಂದೆ ಅವರಿಗೆ ಬದುಕು ಅರ್ಥವಾದೀತೇ?

ವಾಸ್ತವದಲ್ಲಿ, ಶಿಕ್ಷಣ ಎಂದರೆ ಏನು, ಆ ಮೂಲಕ ಮಗು ಆಗಬೇಕಾದ್ದು ಏನು? ಈಗ ಆಗುತ್ತಿರುವುದು ಏನು, ಮಗುವಿನ ಬದುಕಿನ ಸಂತೋಷವನ್ನು ಕಸಿಯುತ್ತಿರುವುದು ಏನು? ಮಕ್ಕಳು ಮತ್ತು ಪೋಷಕರ ನಡುವಿನ ಬಾಂಧವ್ಯ ಮತ್ತು ಪ್ರೀತಿಯನ್ನು ಕೃಶಗೊಳಿಸುತ್ತಿರುವುದು ಏನು? ಮೂರ್ನಾಲ್ಕು ವರ್ಷದ ಮಗುವಿನ ಮನಸ್ಸು ಅರಳುವ ಮುನ್ನವೇ ಮನಸ್ಸಿನ ಮೇಲೆ ಆರೇಳು ವರ್ಷ ಪ್ರಾಯದಲ್ಲಿ ಕಲಿಯಬೇಕಾದ ಹಲವು ವಿಷಯಗಳನ್ನು ಕಲಿಯುವ ಒತ್ತಡ ಹೇರುವ ಸಿಲೆಬಸ್, ಎಲ್ಲವನ್ನೂ ಅರೆದು ಮಗುವಿನ ಮಿದುಳಿನಲ್ಲಿ ತುಂಬುವ ಶಿಕ್ಷಕರು ಮತ್ತು ಟ್ಯೂಷನ್ ಮೇಷ್ಟ್ರುಗಳು ಮತ್ತು ಅದೇ ಶ್ರೇಷ್ಠವಾದ ಕಲಿಕೆ ಎಂದು ನಂಬಿರುವ ಪೋಷಕರು! ‘ಮಗೂ, ನಿನಗೆ ಓದಿನಲ್ಲಿ ಸಂತೋಷ ಇದೆಯೇ’ ಎಂಬ ಪ್ರಶ್ನೆಯನ್ನು ಯಾರೂ ಕೇಳುವುದಿಲ್ಲ. ಕೇಳಿದರೆ ಸತ್ಯ ತಿಳಿಯುತ್ತದೆ. ಸತ್ಯ ಯಾರಿಗೂ ಬೇಕಾಗಿಲ್ಲ.

ಬಹಳ ವರ್ಷಗಳಿಂದ ಖಾಸಗಿ ಶಾಲೆಗಳು ಲಕ್ಷಾಂತರ, ಕೋಟ್ಯಂತರ ಹಣ ಗಳಿಸುವ ದ್ರವ್ಯಪೂಜೆಯನ್ನು ಮಾಡುತ್ತಿರುವುದು ಲೋಕಕ್ಕೇ ತಿಳಿದಿದೆ. ಆದರೂ ಸರ್ಕಾರವು ಖಾಸಗಿ ಶಾಲೆಗಳ ಹಣ ಮಾಡುವ ದಂಧೆಯನ್ನು ತಡೆಯುತ್ತಿಲ್ಲ. ದ್ರವ್ಯಸಂಗ್ರಹ ದಂಧೆ ನಡೆಸುವ ಖಾಸಗಿ ಶಾಲೆಗಳನ್ನು ರಾಷ್ಟ್ರೀಕೃತ ಶಾಲೆಗಳಾಗಿಸಿ ಶಾಲೆಯ ಆಡಳಿತವನ್ನು ವಶಪಡಿಸಿಕೊಳ್ಳಬೇಕು. ನಾನಾ ರೀತಿಯಲ್ಲಿ ಪೋಷಕರನ್ನು ಸುಲಿಯುವ ಖಾಸಗಿ ಶಾಲೆಗಳ ದಂಧೆಯನ್ನು ಕೊನೆಗೊಳಿಸಬೇಕು. ಖಾಸಗಿ ಶಾಲೆಗಳ ಕಪಿಮುಷ್ಟಿಗೆ ಸಿಲುಕಿ ಸದಾ ಭಯದಿಂದ ನಡುಗುವ ಪೋಷಕರನ್ನು ಭಯದಿಂದ ಮುಕ್ತವಾಗಿಸಬೇಕು. ಮಕ್ಕಳ ಪೋಷಕರಿಂದ ಫೀಸು ಪಡೆಯುವ ಕೆಲಸ ಸರ್ಕಾರದ ಸುಪರ್ದಿಯಲ್ಲಿ ನಡೆಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT