ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭಾ ಚುನಾವಣೆ ತಂತ್ರ; ಬೆಳಗಾವಿ ಪಾಲಿಕೆ ಮತ್ತೆ ಮರಾಠಿ ಭಾಷಿಗರ ಉಡಿಗೆ

Last Updated 6 ಫೆಬ್ರುವರಿ 2023, 19:48 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಅವರ ತಂತ್ರದಿಂದಾಗಿ ಮಹಾನಗರ ಪಾಲಿಕೆ ಮತ್ತೆ ಮರಾಠಿ ಭಾಷಿಗರ ಪರವಾಯಿತು.

ವಿಧಾನಸಭಾ ಚುನಾವಣೆಯಲ್ಲಿ ಮರಾಠಿ ಮತಗಳನ್ನು ಸೆಳೆಯುವ ಉದ್ದೇಶದಿಂದಲೇ ಮೇಯರ್‌, ಉಪ ಮೇಯರ್ ಸ್ಥಾನಗಳನ್ನು ಮರಾಠಿಗರಿಗೆ ‘ಉಡುಗೊರೆ’ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪಾಲಿಕೆಯಲ್ಲಿ ಇಷ್ಟು ವರ್ಷಗಳೂ ಭಾಷೆ ಆಧಾರಿತ ಚುನಾವಣೆ ನಡೆಯು ತ್ತಿತ್ತು. ಎಲ್ಲ ಸದಸ್ಯರು ಪಕ್ಷೇತರರೇ ಆಗಿರುತ್ತಿದ್ದರು. 2021ರ ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಪಕ್ಷಗಳ ಚಿಹ್ನೆ ಅಡಿ ಚುನಾವಣೆ ನಡೆಯಿತು. ಕನ್ನಡ ಹಾಗೂ ಮರಾಠಿ ಭಾಷಿಗರು ಬಿಜೆಪಿ, ಕಾಂಗ್ರೆಸ್‌ ಸೇರಿಕೊಂಡರು.

ಇಷ್ಟು ವರ್ಷದ ನಂತರವಾದರೂ ಬೆಳಗಾವಿಗೆ ಎಂಇಎಸ್‌ ಮುಷ್ಟಿಯಿಂದ ‘ಬಿಡುಗಡೆ’ ಸಿಕ್ಕಿತು ಎಂದು ಕನ್ನಡಿಗರು ನಿಟ್ಟುಸಿರು ಬಿಟ್ಟಿದ್ದರು. ಬೆಳಗಾವಿಯಲ್ಲಿ ಗಡಿ ತಂಟೆ ಹೆಚ್ಚಾಗಿದೆ.

ಅರ್ಹರಿದ್ದರೂ ಸಿಗದ ಪಟ್ಟ: 58 ವಾರ್ಡ್‌ಗಳ ಪೈಕಿ ಬಿಜೆಪಿ 35, ಕಾಂಗ್ರೆಸ್‌ 10, ಪಕ್ಷೇತರ 12 (ನಾಲ್ಕು ಎಂಇಎಸ್‌ ಸೇರಿ), ಎಂಎಂಐಎಂ 1 ಸ್ಥಾನ ಹೊಂದಿವೆ. ಸ್ಪಷ್ಟ ಬಹುಮತ ಹೊಂದಿದ ಬಿಜೆಪಿಯಲ್ಲಿ 16 ಮಹಿಳಾ ಸದಸ್ಯರಿದ್ದು, 11 ಮಂದಿ ಕನ್ನಡಿಗರಾಗಿದ್ದಾರೆ.

ಕನ್ನಡತಿಯರಾದ ವಾಣಿ ವಿಲಾಸ ಜೋಶಿ, ಸವಿತಾ ಮರುಘೇಂದ್ರ ಪಾಟೀಲ, ದೀಪಾಲಿ ಟೊಪ್ಪಿಗೆ, ಸವಿತಾ ಕಾಂಬಳೆ, ಲಕ್ಷ್ಮೀ ರಾಠೋಡ, ವೀಣಾ ವಿಜಾಪುರ, ರೇಖಾ ಹೂಗಾರ, ರೂಪಾ ಚಿಕ್ಕಲದಿನ್ನಿ ಮೇಯರ್ ಸ್ಥಾನಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ, ಮರಾಠಿ ಭಾಷಿಗರನ್ನು ಓಲೈಸಲು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮೇಯರ್‌ ಹಾಗೂ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಉಪಮೇಯರ್‌ ಸ್ಥಾನಗಳನ್ನು ಶಾಸಕರೇ ಹಂಚಿಕೊಂಡಿದ್ದಾರೆ ಎನ್ನುವುದು ಕನ್ನಡಿಗರ ದೂರು. ದಕ್ಷಿಣ ಕ್ಷೇತ್ರದಲ್ಲಿ ಸುಮಾರು ಶೇ 60ರಷ್ಟು, ಉತ್ತರ ಕ್ಷೇತ್ರದಲ್ಲಿ ಶೇ 38ರಷ್ಟು ಮರಾಠಿ ಭಾಷಿಗ ಮತದಾರರು ಇದ್ದಾರೆ.

*

ಶೋಭಾ ಮೇಯರ್‌, ರೇಷ್ಮಾ ಉಪಮೇಯರ್‌

ಬೆಳಗಾವಿ: ಬೆಳಗಾವಿ ಮೇಯರ್‌ ಆಗಿ ಬಿಜೆಪಿಯ ಶೋಭಾ ಪಾಯಪ್ಪ ಸೋಮನಾಚೆ ಹಾಗೂ ಉಪಮೇಯರ್‌ ಆಗಿ ರೇಷ್ಮಾ ಪ್ರವೀಣ ಪಾಟೀಲ ಸೋಮವಾರ ಆಯ್ಕೆಯಾದರು. ಇದೇ ಮೊದಲ ಬಾರಿಗೆ ಮಹಾನಗರ ಪಾಲಿಕೆ ಸಂಪೂರ್ಣವಾಗಿ ಬಿಜೆಪಿ ತೆಕ್ಕೆಗೆ ಬಂದಿದೆ.

ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆ, ಉಪಮೇಯರ್‌ ಸ್ಥಾನ ಹಿಂದುಳಿದ ವರ್ಗ–ಬಿ ಮಹಿಳೆಗೆ ಮೀಸಲಾಗಿತ್ತು. 57ನೇ ವಾರ್ಡ್‌ನ ಸದಸ್ಯೆ ಶೋಭಾ ಒಬ್ಬರೇ ಮೇಯರ್‌ ಸ್ಥಾನದ ಉಮೇದುವಾರಿಕೆಗೆ ನಾಮಪತ್ರ ಸಲ್ಲಿಸಿದರು. ಅವಿರೋಧ ಆಯ್ಕೆ ಎಂದು ಘೋಷಿಸಲಾಯಿತು.

ಉಪಮೇಯರ್ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ರೇಷ್ಮಾ 42 ಮತಗಳನ್ನು ಹಾಗೂ ಎಂಇಎಸ್‌ ಬೆಂಬಲಿತ ವೈಶಾಲಿ ಭಾತಖಾಂಡೆ ಕೇವಲ 4 ಮತ ಗಳಿಸಿದರು. 38 ಮತಗಳ ಭರ್ಜರಿ ಅಂತರದಿಂದ ರೇಷ್ಮಾ ಆಯ್ಕೆಯಾದರು.

10 ಸ್ಥಾನ ಹೊಂದಿದ ಕಾಂಗ್ರೆಸ್‌ ಸದಸ್ಯರು ಮತದಾನ ಕಾಲಕ್ಕೆ ಹೊರನಡೆದರು.

*

ಮರಾಠಿ ಲಿಪಿಯಲ್ಲಿ ಕನ್ನಡ ಭಾಷಣ

ಮೇಯರ್‌ ಆಗಿ ಆಯ್ಕೆಯಾದ ಬಳಿಕ ಶೋಭಾ ಸೋಮನಾಚೆ ಅವರು ಮರಾಠಿ ಲಿಪಿಯಲ್ಲಿ ಬರೆದ ಕನ್ನಡ ಭಾಷಣ ಮಾಡಿದರು. ‘ಜನರ ವಿಶ್ವಾಸ ಗಳಿಸಿ, ಅಭಿವೃದ್ಧಿ ಕಡೆಗೆ ಗಮನ ಕೊಡುವುದಾಗಿ’ ಹೇಳಿದರು.

ನಾಡದ್ರೋಹಿ ಘೋಷಣೆ: ಚುನಾವಣೆಗೂ ಮುನ್ನ ಎಂಇಎಸ್‌ ಬೆಂಬಲಿತ ವೈಶಾಲಿ ಭಾತಖಾಂಡೆ ಹಾಗೂ ಇತರ ಇಬ್ಬರು ಸದಸ್ಯರು ನಾಡದ್ರೋಹಿ ಘೋಷಣೆ ಕೂಗಿದರು. ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಖಾನಾಪುರ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT