ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಶ್ವಾನದ ಜನ್ಮದಿನ: 5,000 ಜನರಿಗೆ ಬಾಡೂಟ

Last Updated 23 ಜೂನ್ 2022, 14:40 IST
ಅಕ್ಷರ ಗಾತ್ರ

ಮೂಡಲಗಿ (ಬೆಳಗಾವಿ ಜಿಲ್ಲೆ): ರಾಜಕಾರಣಿಗಳು ಜನ್ಮದಿನದಂದು ಊರಿಗೆ ಊಟ ಹಾಕಿಸುವುದನ್ನು ನೋಡಿದ್ದೀರಿ. ಆದರೆ, ಇಲ್ಲೊಬ್ಬರು ರಾಜಕೀಯ ವಿರೋಧಿಗಳಿಗೆ ಉತ್ತರ ನೀಡಲು ತಮ್ಮ ನೆಚ್ಚಿನ ನಾಯಿಯ ಜನ್ಮದಿನದ ಅಂಗವಾಗಿ ಮೆರವಣಿಗೆ ಮಾಡಿ, ಊರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ!

ಮೂಡಲಗಿ ತಾಲ್ಲೂಕಿನ ತುಕ್ಕಾನಟ್ಟಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವಪ್ಪ ಮರ್ದಿ ಅವರು ಸಾಕಿದ ‘ಕ್ರಿಶ್‌’ ಎಂಬ ನಾಯಿ ಕೇಕ್‌ ತಿಂದು ಸಂಭ್ರಮಿಸಿದೆ. ಜೂನ್‌ 21ರಂದು ಕ್ರಿಶ್‌ ಜನ್ಮದಿನಾಚರಣೆ ಮಾಡಿದ್ದು, ಅದರ ವಿಡಿಯೊಗಳು ಈಗ ಹರಿದಾಡುತ್ತಿವೆ.

ನಾಯಿಯನ್ನು ಅಲಂಕೃತ ಜೀಪ್‌ನಲ್ಲಿ ಹತ್ತಿಸಿ, ವಾದ್ಯಮೇಳಗಳೊಂದಿಗೆ ಮೆರವಣಿಗೆ ಮಾಡಲಾಗಿದೆ. 50 ಕೆ.ಜಿ ತೂಕದ ಕೇಕ್‌ ಕತ್ತರಿಸಿ ನಾಯಿಗೂ ತಿನ್ನಿಸಿ, ಜನರಿಗೂ ಹಂಚಲಾಗಿದೆ. ಊರ ಜನರಿಗಾಗಿ 2 ಕ್ವಿಂಟಲ್‌ ಚಿಕನ್‌, 200 ಮೊಟ್ಟೆ, 50 ಕೆ.ಜಿ ಕಾಜೂಕರಿ ಸೇರಿದಂತೆ ಒಟ್ಟು 5ಸಾವಿರ ಮಂದಿಗೆ ಊಟ ಹಾಕಿಸಲಾಗಿದೆ.

‘20 ವರ್ಷಗಳಿಂದ ನಾನು ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದೆ. ಈ ಬಾರಿ ಹೊಸಬರು ಆಯ್ಕೆಯಾಗಿದ್ದಾರೆ. ಈಚೆಗೆ ಅವರ ಜನ್ಮದಿನ ಆಚರಿಸಿಕೊಂಡರು. ಆ ಸಂದರ್ಭದಲ್ಲಿ ‘ಈ ಹಿಂದಿನ ಸದಸ್ಯರು ಅನುದಾನವನ್ನು ನಾಯಿಯಂತೆ ತಿಂದು ಹೋಗಿದ್ದಾರೆ’ ಎಂಬ ಆರೋಪ ಮಾಡಿದ್ದರು. ಅವರ ಮಾತಿಗೆ ತಕ್ಕ ಉತ್ತರ ನೀಡಲು ನನ್ನ ನಾಯಿಯ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ್ದೇನೆ’ ಎಂದು ಶಿವಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಕ್ರಿಶ್‌ ಜನ್ಮದಿನದ ಪೋಸ್ಟ್ ನೋಡಿ ಸಾಮಾಜಿಕ ಜಾಲತಾಣಗಳಲ್ಲಿ ತಮಾಶೆಯ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಒಂದೆಡೆ ‘ಚಾರ್ಲಿ’ಯ ಓಟ, ಇನ್ನೊಂದೆದೆ ‘ಕ್ರಿಶ್‌’ ಬಾಡೂಟ ಎಂದೂ ಯುವಜನರು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT