ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಚಯ ಸಭೆಯಲ್ಲೇ ಸಮಸ್ಯೆಗಳ ಅನಾವರಣ

10 ತಿಂಗಳಾದರೂ ನಡೆಯದ ಮೇಯರ್‌, ಉಪ ಮೇಯರ್‌ ಆಯ್ಕೆ
Last Updated 5 ಜುಲೈ 2022, 3:56 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನೂತನ ಸದಸ್ಯರ ಪರಿಚಯಾತ್ಮಕ ಕಾರ್ಯಕ್ರಮವು, ಸಮಸ್ಯೆಗಳನ್ನು ಹೇಳಿಕೊಳ್ಳುವ ಸಭೆಯಾಗಿ ಮಾರ್ಪಟ್ಟಿತು.

ಮಹಾನಗರ ಪಾಲಿಕೆಗೆ ಸದಸ್ಯರು ಆಯ್ಕೆಗೊಂಡು 10 ತಿಂಗಳಾಗಿದೆ. ಆದರೆ, ಮೇಯರ್‌, ಉಪ ಮೇಯರ್‌ ಚುನಾವಣೆಗೆ ನ್ಯಾಯಾಲಯದಲ್ಲಿ ತಡೆಬಿದ್ದಿದೆ. ಹೀಗಾಗಿ, ಇದೂವರೆಗೂ ಪಾಲಿಕೆ ಸದಸ್ಯರು ಪ್ರಮಾನ ವಚನ ಸ್ವೀಕರಿಸಿಲ್ಲ. ಹೀಗಾಗಿ, ತವು ಜನರಿಂದ ಆಯ್ಕೆಯಾಗಿದ್ದರೂ ಅವರ ಸಮಸ್ಯೆಗೆ ಸ್ಪಂದಿಸಲು ಆಗುತ್ತಿಲ್ಲ ಎಂದು ಬಹುಪಾಲು ಸದಸ್ಯರು ಗೋಳು ಹೇಳಿಕೊಂಡರು.

ಕೆಎಂಸಿ ಕಾಯ್ದೆ ಪ್ರಕಾರ ಪ್ರಮಾಣವಚನ ಸ್ವೀಕಾರ ಆಗುವವರೆಗೂ ಪಾಲಿಕೆಯಲ್ಲಿ ಸಭೆಗಳನ್ನು ನಡೆಸುವಂತಿಲ್ಲ. ಅಭಿವೃದ್ಧಿ ಕೆಲಸ ಮಾಡುವಂತಿಲ್ಲ. ಮೇಯರ್, ಉಪಮೇಯರ್ ಆಯ್ಕೆ ಬಳಿಕವೇ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯ. ಇದರಿಂದ ತಮ್ಮ ವಾರ್ಡ್‌ಗಳಲ್ಲಿ ಓಡಾಡದ ಸ್ಥಿತಿ ಬಂದಿದೆ ಎಂದೂ ಕೆಲವರು ಹೇಳಿದರು.

ಅಧಿಕಾರ ಸ್ವೀಕರಿಸದ ಕಾರಣ ಸ್ವತಃ ಪಾಲಿಕೆ ಅಧಿಕಾರಿಗಳೇ ನಮ್ಮ ಮಾತುಗಳಿಗೆ ಬೆಲೆ ಕೊಡುತ್ತಿಲ್ಲ. ವಾರ್ಡ್‌ನಲ್ಲಿ ಯಾವ ಕೆಲಸ ನಡೆದಿವೆ ಎಂಬ ಮಾಹಿತಿಯನ್ನೂ ನೀಡುತ್ತಿಲ್ಲ. ಅಧಿಕಾರಿಗಳ ವರ್ತನೆ ಹೀಗಾದರೆ, ಗುತ್ತಿಗೆದಾರರದು ಇನ್ನೊಂದು ವರಸೆ. ಅವರು ಕೆಲಸ ಮಾಡುವ ವಾರ್ಡ್‌ ಯಾರದು ಎಂಬ ಕನಿಷ್ಠ ಸೌಜನ್ಯವೂ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಮೇಲಾಗಿ, ತೆರಿಗೆ ಯಾರು ಸಂಗ್ರಹಿಸುತ್ತಿದ್ದಾರೆ, ಆದಾಯ ಎಷ್ಟು ಬಂದಿದೆ, ಕಾಮಗಾರಿಗೆ ಅನುಮತಿ ಯಾರು ನೀಡುತ್ತಿದ್ದಾರೆ ಎಂಬ ಕನಿಷ್ಠ ಮಾಹಿತಿಯೂ ಸಿಗುತ್ತಿಲ್ಲ ಎಂದು ಕೆಲ ಮಹಿಳಾ ಸದಸ್ಯರು ದೂರಿದರು.

ಪಾಲಿಕೆಯ ಎಲ್ಲ 58 ವಾರ್ಡ್‌ಗಳಲ್ಲೂ ಚರಂಡಿ, ಕುಡಿಯುವ ನೀರು, ರಸ್ತೆ, ಬೀದಿ ದೀಪ, ಸಾರಿಗೆ ಸೇರಿದಂತೆ ವಿವಿಧ ಸಮಸ್ಯೆಗಳು ಇವೆ. ಈಗ ಮಳೆಗಾಲ ಆರಂಭವಾಗಿದ್ದು ಜನರು ದಿನವೂ ಫೋನ್‌ ಮಾಡಿ ಸಮಸ್ಯೆ ಹೇಳುತ್ತಿದ್ದಾರೆ. ಇದನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಎಂದೂ ಹೇಳಿಕೊಂಡರು.

ನಂತರ ಮಾತನಾಡಿದ ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ‘ಪಾಲಿಕೆಯ ವ್ಯಾಪ್ತಿಯ ಯಾವುದೇ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡರೂ ಸ್ಥಳೀಯ ಸದಸ್ಯರಿಗೆ ಮಾಹಿತಿ ನೀಡಬೇಕು. ವಾರ್ಡ್‌ಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು. ಅಧಿಕಾರಿಳು, ಸಿಬ್ಬಂದಿ ನಗರ ಸೇವಕರನ್ನು ಪರಿಚಯ ಮಾಡಿಕೊಳ್ಳಿ’ ಎಂದು ತಿಳಿಸಿದರು.

ಪಾಲಿಕೆ ಸದಸ್ಯರಾದವಾಣಿ ಜೋಶಿ, ಸಂತೋಷ ಪಡ್ನೇಕರ್, ನೇತ್ರಾವತಿ ಭಾಗವತ,ಹನುಮಂತ ಕೊಂಗಾಲಿ, ಜಯತೀರ್ಥ ಸವದತ್ತಿ, ರಾಜು ಭಾತಖಾಂಡೆ, ರವಿರಾಜ ಸಾಂಬ್ರೇಕರ,ರವಿ ಧೋತ್ರೆ, ರಾಜಶೇಖರ ಡೋಣಿ, ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ, ಆರೋಗ್ಯ ಅಧಿಕಾರಿ ಡಾ.ಸಂಜಯ ಡುಮ್ಮಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT