ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನಗರದಲ್ಲಿ ‘ಆ‍‍‍‍‍ಪರೇಷನ್‌ ಡಾಗ್‌’ ಆರಂಭ

Last Updated 21 ಜುಲೈ 2022, 15:55 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಬೀದಿನಾಯಿಗಳ ಉಪಟಳ ತಪ್ಪಿಸುವ ಉದ್ದೇಶದಿಂದ, ಮಹಾನಗರ ಪಾಲಿಕೆ ‘ಆಪರೇಷನ್‌ ಡಾಗ್‌’ ಆರಂಭಿಸಿದೆ.

ಇದಕ್ಕಾಗಿ ಐದು ತಂಡಗಳನ್ನು ಸಿದ್ಧ ಮಾಡಲಾಗಿದ್ದು, ಮೂರು ದಿನಗಳಿಂದ ಕಾರ್ಯಾಚರಣೆ ನಡೆದಿದೆ. ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಇದರ ಟೆಂಡರ್ ನೀಡಲಾಗಿದ್ದು ‘ಪೆಟ್‌ ಟ್ರ್ಯಾಕರ್‌’ ಬಳಸಿ ನಾಯಿಗಳನ್ನು ಹಿಡಿಯಲಾಗುತ್ತಿದೆ.

ಬೆಳಗಾವಿ ತಾಲ್ಲೂಕಿನ ಪಂತ ಬಾಳೇಕುಂದ್ರಿಯಲ್ಲಿ ಎರಡು ವರ್ಷಗಳ ಹಿಂದೆ ಬೀದಿನಾಯಿಗಳು ಕಚ್ಚಿದ್ದರಿಂದ ಎಳೆಯ ಮಗು ಸಾವನ್ನಪ್ಪಿತ್ತು. ಈ ಕುರಿತು ಈಚೆಗೆ ತೀರ್ಪು ನೀಡಿದ ಹೈಕೋರ್ಟ್‌, ಮಗುವಿನ ಪಾಲಕರಿಗೆ ₹ 10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ಅಲ್ಲದೇ, ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಅಪಾಯ ಮಾಡುವ ನಾಯಿಗಳನ್ನು ಹಿಡಿಯುವಂತೆಯೂ ಮಹಾನಗರ ಪಾಲಿಕೆಗೆ ಆದೇಶ ನೀಡಿತ್ತು.

ಎರಡು ತಿಂಗಳ ಹಿಂದೆ ಎಂ.ಕೆ. ಹುಬ್ಬಳ್ಳಿಯಲ್ಲಿ ಕೂಡ 12 ಜನರಿಗೆ ನಾಯಿ ಕಚ್ಚಿತ್ತು. ಕಳೆದ ಮೂರು ವರ್ಷಗಳಿಂದಲೂ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿಲ್ಲ. ಇದರಿಂದಾಗಿ ಅವುಗಳ ಸಂಖ್ಯೆ ಮಿತಿಮೀರಿದೆ. ಹಲವು ಮಕ್ಕಳು, ಮಹಿಳೆಯರು, ವೃದ್ಧರಿಗೂ ಕಚ್ಚಿದ ಉದಾಹರಣೆಗಳು ಇವೆ.

ಹೀಗಾಗಿ, ಬೀದಿನಾಯಿಗಳನ್ನು ಹಿಡಿಯುವಂತೆ ಶಾಸಕರು ಸಹ ಪಾಲಿಕೆ ಅಧಿಕಾರಿಗಳಿಗೆ ಮೇಲಿಂದ ಮೇಲೆ ಸೂಚನೆ ನೀಡಿದ್ದರು.

ಈ ಎಲ್ಲದರ ಹಿನ್ನೆಲೆಯಲ್ಲಿ ‘ಆಪರೇಷನ್‌ ಡಾಗ್‌‘ಗೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ನಾಯಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ.

‘2016–17ರಲ್ಲಿ ಸಮಾರು 16 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳು ನಗರದಲ್ಲಿ ಇವೆ ಎಂದು ವರದಿ ನೀಡಲಾಗಿದೆ. ಈಗ ಇನ್ನೂ ಎರಡು ಸಾವಿರ ಹೆಚ್ಚಾಗಿರುವ ಸಾಧ್ಯತೆ ಇದೆ. ಕೇವಲ ಹೆಣ್ಣು ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನೀಡಲು ನಿರ್ದೇಶನವಿದೆ. ಆದರೆ, ಹೆಣ್ಣು ನಾಯಿಗಳನ್ನು ಹುಡುಕುತ್ತ ಕುಳಿತುಕೊಳ್ಳುವ ಬದಲು ಸಿಕ್ಕ ನಾಯಿಗಳನ್ನೆಲ್ಲ ಒಯ್ಯಲಾಗುತ್ತಿದೆ. ಅಪಾಯಕಾರಿಯಾದ ನಾಯಿಗಳನ್ನು ಕೊಲ್ಲಲು ನಿಯಮಗಳಿವೆ. ಅಗತ್ಯವಿದ್ದರೆ ಮಾತ್ರ ಈ ಕ್ರಮಕ್ಕೆ ಮುಂದಾಗಲಾಗುವುದು. ಇಲ್ಲದಿದ್ದರೆ ‘ಎಬಿಸಿ’ ಕೇಂದ್ರದಲ್ಲಿ ಮೂರು ದಿನ ಇಟ್ಟುಕೊಂಡು, ಚಿಕಿತ್ಸೆ ನೀಡಿ ಬಿಡಲಾಗುವುದು. ನಾಯಿಗಳನ್ನು ಎಲ್ಲಿಂದ ತರಲಾಗಿದೆಯೋ ಅಲ್ಲಿಗೇ ಮರಳಿ ಬಿಡಬೇಕು ಎಂಬ ನಿಯಮವಿದೆ’ ಎಂದು ಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

****

ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ನಿಯಮದಂತೆ ನಾಯಿಗಳನ್ನು ಹಿಡಿಯಲಾಗುತ್ತಿದೆ. ಪ್ರತಿ ನಾಯಿ ಹಿಡಿದು, ಶಸ್ತ್ರಚಿಕಿತ್ಸೆ ನೀಡಲು ₹ 1590 ದರ ನಿಗದಿ ಮಾಡಲಾಗಿದೆ. ಕಾರ್ಯಾಚರಣೆ ನಿರಂತರ ನಡೆಯಲಿದೆ ಎಂದು ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT