ಬೆಳಗಾವಿ ಕ್ಷೇತ್ರ: ಸುರೇಶ ಅಂಗಡಿ ನಾಲ್ಕನೇ ಬಾರಿಗೆ ಸಂಸತ್‌ ಪ್ರವೇಶಿಸುವವರೇ?

ಮಂಗಳವಾರ, ಜೂನ್ 18, 2019
27 °C
ಮತಗಳ ಎಣಿಕೆ ಇಂದು

ಬೆಳಗಾವಿ ಕ್ಷೇತ್ರ: ಸುರೇಶ ಅಂಗಡಿ ನಾಲ್ಕನೇ ಬಾರಿಗೆ ಸಂಸತ್‌ ಪ್ರವೇಶಿಸುವವರೇ?

Published:
Updated:
Prajavani

ಬೆಳಗಾವಿ: ಹಾಲಿ ಸಂಸದ, ಬಿಜೆಪಿಯ ಸುರೇಶ ಅಂಗಡಿ ನಾಲ್ಕನೇ ಬಾರಿಗೆ ಸಂಸತ್‌ ಪ್ರವೇಶಿಸುವವರೇ? ಅಥವಾ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿರುವ ಕಾಂಗ್ರೆಸ್‌ನ ಡಾ.ವಿ.ಎಸ್‌. ಸಾಧುನವರ ಸಂಸತ್‌ ಮೆಟ್ಟಿಲೇರುವವರೇ ಎನ್ನುವುದಕ್ಕೆ ಗುರುವಾರ ಉತ್ತರ ದೊರೆಯಲಿದೆ.

ಕಳೆದ ತಿಂಗಳು 23ರಂದು ಮತದಾನ ನಡೆದಿತ್ತು. ಕ್ಷೇತ್ರದ 17,71,829 ಮತದಾರರ ಪೈಕಿ 11,94,909 ಮಂದಿ ಮತ ಚಲಾಯಿಸಿದ್ದರು. ಶೇ 67.44ರಷ್ಟು ಮತದಾನವಾಗಿತ್ತು. 6,23,003 ಪುರುಷರು ಹಾಗೂ 5,71,898 ಮಹಿಳೆಯರು ಹಾಗೂ 8 ಮಂದಿ ಇತರರು ಮತ ಚಲಾಯಿಸಿದ್ದರು. ಈ ಮತಗಳ ಎಣಿಕೆ ಕಾರ್ಯವು ಬೆಳಿಗ್ಗೆ 8 ಗಂಟೆಯಿಂದ ನಗರದ ಆರ್‌ಪಿಡಿ ಕಾಲೇಜಿನಲ್ಲಿ ನಡೆಯಲಿದೆ.

ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ 57 ಅಭ್ಯರ್ಥಿಗಳು ಕಣದಲ್ಲಿದ್ದರು. ಇದು ರಾಜ್ಯದಲ್ಲಿಯೇ ಗರಿಷ್ಠ ಪ್ರಮಾಣವಾಗಿತ್ತು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ತಮ್ಮ ಬೇಡಿಕೆ ಕುರಿತು ರಾಷ್ಟ್ರದ ಗಮನ ಸೆಳೆಯಲು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಹಲವು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇವರಲ್ಲಿ ಬಹುತೇಕರ ಸ್ಪರ್ಧೆಯೂ ಸಾಂಕೇತಿಕವಾಗಿತ್ತು. ಬಿಜೆಪಿ– ಕಾಂಗ್ರೆಸ್‌ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಮೋದಿ ಅಲೆ:

‘ಹಿಂದಿನ ಮೂರು ಅವಧಿಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ನನ್ನ ಗೆಲುವಿಗೆ ಸಹಕಾರಿಯಾಗಲಿದೆ’ ಎಂದು ಬಿಜೆಪಿಯ ಸುರೇಶ ಅಂಗಡಿ ನೆಚ್ಚಿಕೊಂಡಿದ್ದಾರೆ.

ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರು ಇದ್ದಾರೆ. ಇದರ ಲಾಭ ಮೋದಿ ಅವರಿಗೆ ದಕ್ಕುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬದಲಾವಣೆ ಬಯಸಿದ್ದಾರೆ:

‘ಬೆಳಗಾವಿಯ ಅಭಿವೃದ್ಧಿಗಾಗಿ ಸುರೇಶ ಅಂಗಡಿ ಯಾವುದೇ ವಿಶೇಷ ಯೋಜನೆಯನ್ನು ತಂದಿಲ್ಲ. ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿಲ್ಲ. ಇದರಿಂದ ಬಹಳಷ್ಟು ಜನ ಅಸಮಾಧಾನಗೊಂಡಿದ್ದು, ಬದಲಾವಣೆ ಬಯಸಿದ್ದಾರೆ. ಇದು ತಮಗೆ ವರವಾಗಲಿದೆ’ ಎಂದು ಕಾಂಗ್ರೆಸ್‌ ಅಭ್ಯರ್ಥಿ ಡಾ.ವಿ.ಎಸ್‌. ಸಾಧುನವರ ಹೇಳಿದ್ದಾರೆ.

‘ಉತ್ತರ ಭಾರತದಲ್ಲಿ ಮಾತ್ರ ಮೋದಿ ಅಲೆ ಇದೆ. ಬೆಳಗಾವಿಯಲ್ಲಿ ಇಲ್ಲ. ಮತದಾರರು ಸ್ಥಳೀಯ ಅಭ್ಯರ್ಥಿಗಳನ್ನು ನೋಡಿ ಮತ ಹಾಕುತ್ತಾರೆ. ಶಿಕ್ಷಣ ಸಂಸ್ಥೆ ಹಾಗೂ ಹಣಕಾಸು ಸಂಸ್ಥೆಗಳನ್ನು ಕಟ್ಟಿರುವ ತಮಗೆ ಜನರ ಸಂಪರ್ಕ ನಿರಂತರವಾಗಿದೆ. ಇದು ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ’ ಎನ್ನುವ ವಿಶ್ವಾಸ ಹೊಂದಿದ್ದಾರೆ.

ರಮೇಶ ಮುನಿಸು:

ಕಾಂಗ್ರೆಸ್‌ನಿಂದ ಮುನಿಸಿಕೊಂಡಿರುವ ಗೋಕಾಕ ಶಾಸಕ, ರಮೇಶ ಜಾರಕಿಹೊಳಿ ಪಕ್ಷದ ಅಭ್ಯರ್ಥಿ ಪರ ಒಮ್ಮೆಯೂ ಪ್ರಚಾರ ನಡೆಸಲಿಲ್ಲ. ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ತಮ್ಮ ಬೆಂಬಲಿಗರ ಸಭೆ ಕರೆದು, ಬಿಜೆಪಿ ಪರವಾಗಿ ಕೆಲಸ ಮಾಡುವಂತೆ ಸೂಚಿಸಿದ್ದರು ಎಂದು ಹೇಳಲಾಗುತ್ತಿತ್ತು. ಇದು ಗೋಕಾಕ, ಅರಭಾವಿ ಕ್ಷೇತ್ರದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ಕಳೆದ ಬಾರಿ ಚುನಾವಣೆಯಲ್ಲಿ ಇವೆರಡು ಕ್ಷೇತ್ರಗಳಲ್ಲಿಯೇ ಕಾಂಗ್ರೆಸ್‌ಗೆ ಹೆಚ್ಚಿನ ಮತಗಳು ಲಭಿಸಿದ್ದವು. ಆ ಮತಗಳು ಈ ಸಲ ಯಾರ ಪಾಲಿಗೆ ಹೋಗುತ್ತವೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಸತೀಶ ಸತತ ಪ್ರಚಾರ:

ಸಹೋದರ, ರಮೇಶ ಅವರ ಕೊರತೆಯನ್ನು ತುಂಬಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಯತ್ನಿಸಿದರು. ಪಕ್ಷದ ಅಭ್ಯರ್ಥಿ ಸಾಧುನವರ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡರು. ಬೆಳಗಾವಿ, ಯಮಕನಮರಡಿ, ಗೋಕಾಕ ಸೇರಿದಂತೆ ಬಹುತೇಕ ಕ್ಷೇತ್ರದ ತುಂಬೆಲ್ಲಾ ಪ್ರಚಾರ ಮಾಡಿದರು. ರಮೇಶ ಅವರು ಪ್ರಚಾರದಲ್ಲಿ ತೊಡಗಿಸಿಕೊಳ್ಳದಿದ್ದರಿಂದ ತಮ್ಮ ಮತ್ತೊಬ್ಬ ಸಹೋದರ ಲಖನ್‌ ಜಾರಕಿಹೊಳಿ ಅವರಿಗೆ ಗೋಕಾಕದಲ್ಲಿ ಪ್ರಚಾರ ನಡೆಸುವ ಜವಾಬ್ದಾರಿ ನೀಡಿದರು. ಇದು ಎಷ್ಟರ ಮಟ್ಟಿಗೆ ಫಲ ನೀಡಿದೆ ಎನ್ನುವುದು ಫಲಿತಾಂಶ ಬಂದ ಮೇಲೆ ಗೊತ್ತಾಗಲಿದೆ.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !