ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್–ಜೆಡಿಎಸ್ ನಡುವೆ ನೇರ ಹಣಾಹಣಿ

ಕೆಂಪೇಗೌಡರ ನಾಡಿನಲ್ಲಿ ಪಟ್ಟಕ್ಕಾಗಿ ಸೆಣೆಸಾಟ: ಬಿಜೆಪಿಯಿಂದ ಲೆಕ್ಕಾಚಾರದ ಪ್ರಯತ್ನ lಪಕ್ಷಗಳಿಂದ ಬಿರುಸಿನ ಪ್ರಚಾರ
Last Updated 7 ಮೇ 2018, 13:42 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಕಟ್ಟಿ ಆಳಿದ ಮಾಗಡಿಯ ಗದ್ದುಗೆ ಏರಲು ಈ ಬಾರಿ ತುರುಸಿನ ಪೈಪೋಟಿ ನಡೆದಿದೆ. ಕಾಂಗ್ರೆಸ್‌–ಜೆಡಿಎಸ್ ಅಭ್ಯರ್ಥಿಗಳು ಜಿದ್ದಾಜಿದ್ದಿನ ಕದನದಲ್ಲಿ ತೊಡಗಿಸಿಕೊಂಡಿದ್ದರೆ, ಬಿಜೆಪಿ ಸದ್ದಿಲ್ಲದೆ ಪ್ರಚಾರ ನಡೆಸಿದೆ.

ಮಾಗಡಿ ತಾಲ್ಲೂಕಿನ ನಾಲ್ಕು ಹಾಗೂ ರಾಮನಗರ ತಾಲ್ಲೂಕಿನ ಬಿಡದಿ ಮತ್ತು ಕೂಟಗಲ್‌ ಹೋಬಳಿಗಳನ್ನು ಒಳಗೊಂಡ ಈ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಕ್ಷೇತ್ರದ ಹಳ್ಳಿ–ಹಳ್ಳಿಗಳಲ್ಲಿ ಸಂಚಾರ ಕೈಗೊಂಡು ಮತದಾರರ ಇಂಗಿತ ಅರಿಯುವ ಪ್ರಯತ್ನವನ್ನು ‘ಪ್ರಜಾವಾಣಿ’ಯು ಮಾಡಿತು. ಈ ಸಂದರ್ಭ ವ್ಯಕ್ತವಾದ ಅಭಿಪ್ರಾಯದಂತೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್‌.ಸಿ. ಬಾಲಕೃಷ್ಣ ಹಾಗೂ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿರುವುದು ಕಂಡು ಬಂದಿತು.

ಐದು ಚುನಾವಣೆಗಳಿಂದ ಕ್ಷೇತ್ರದಲ್ಲಿ ಕಣದಲ್ಲಿರುವ ಬಾಲಕೃಷ್ಣ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಅನುಭವ ಹೊಂದಿದ್ದಾರೆ. ಅವರ ತಂದೆ ಎಚ್‌.ಜಿ. ಚನ್ನಪ್ಪ ಇಲ್ಲಿಂದಲೇ ಮೂರು ಬಾರಿ ಶಾಸಕರಾದವರು. ಹೀಗಾಗಿ ಕ್ಷೇತ್ರದಲ್ಲಿ ಹಿಡಿತ ಇದ್ದು, ಅಭಿವೃದ್ಧಿಯ ಕೆಲಸಗಳು ಮತಗಳಾಗಿ ಪರಿವರ್ತನೆ ಹೊಂದುವ ವಿಶ್ವಾಸದಲ್ಲಿದ್ದಾರೆ.

ಜೆಡಿಎಸ್ ಅಭ್ಯರ್ಥಿಯಾಗಿರುವ ಎ.ಮಂಜುನಾಥ್ ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಸೋಲು ಅನುಭವಿಸಿದವರು. ತದನಂತರದಲ್ಲಿ ಕುದೂರು ಜಿಲ್ಲಾ ಪಂಚಾಯಿತಿಯ ಸದಸ್ಯರಾಗಿ ಆಯ್ಕೆಯಾಗಿ ಜಿ.ಪಂ. ಅಧ್ಯಕ್ಷ ಸ್ಥಾನದಿಂದ ವಂಚಿತರಾದವರು. ಈ ಎರಡೂ ಅನುಕಂಪದ ಜೊತೆಗೆ ಜೆಡಿಎಸ್ ಪರವಾದ ಅಲೆ ಗೆಲುವಿಗೆ ಸಹಕಾರಿಯಾಗಲಿದೆ ಎನ್ನುವುದು ಅವರ ವಿಶ್ವಾಸ.

ಬಿಜೆಪಿಯಿಂದ ಹನುಮಂತರಾಜು ಕಣದಲ್ಲಿ ಇದ್ದಾರೆ. ಹಳ್ಳಿ–ಪಟ್ಟಣದಲ್ಲಿ ಸದ್ದಿಲ್ಲದೆ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷಕ್ಕೆ ಇರುವ ಸಾಂಪ್ರದಾಯಿಕ ಮತಗಳ ಜೊತೆಗೆ ಮೇಲ್ವರ್ಗದ ಸಮುದಾಯಗಳ ಮತಗಳನ್ನು ಒಟ್ಟುಹಾಕುವ ಲೆಕ್ಕಾಚಾರ ಅವರದ್ದು.

ಹೋಬಳಿಗಳಲ್ಲಿ ಸಮಬಲ: ‘ಪ್ರಜಾವಾಣಿ’ ಕ್ಷೇತ್ರ ಪ್ರವಾಸದ ಸಂದರ್ಭ ಕಂಡುಕೊಂಡಂತೆ ಹಳ್ಳಿಗಳಲ್ಲಿ ಬಾಲಕೃಷ್ಣ ಹಾಗೂ ಮಂಜುನಾಥ್ ಸಮಬಲ ಸಾಧಿಸಿದ್ದಾರೆ. ಕುಮಾರಸ್ವಾಮಿ ಹಿಡಿತವಿರುವ ರಾಮನಗರ ತಾಲ್ಲೂಕಿನ ಕೂಟಗಲ್‌ ಹೋಬಳಿಯಲ್ಲಿ ಜೆಡಿಎಸ್‌ ಸಂಘಟನೆಯಲ್ಲಿ ಮುಂದೆ ಇದೆ. ಬಾಲಕೃಷ್ಣ ಸಹೋದರ ಅಶೋಕ್‌ ಇಲ್ಲಿಂದಲೇ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದು, ಈಗ ಅಣ್ಣನ ಪರ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿ ಇದ್ದಾರೆ.

ಬಿಡದಿ ಹೋಬಳಿಯಲ್ಲಿ ಈ ಇಬ್ಬರು ನಾಯಕರ ನಡುವೆ ತೀವ್ರ ಪೈಪೋಟಿ ಇದೆ. ಕೆಲವು ಹಳ್ಳಿಗಳಲ್ಲಿ ಮಂಜು ಪರ ಅಲೆ ಇದ್ದರೆ, ಪಟ್ಟಣ ಹಾಗೂ ಸುತ್ತಮುತ್ತ ಬಾಲಕೃಷ್ಣ ಅವರ ಅಭಿಮಾನಿಗಳೂ ಇದ್ದಾರೆ. ಹೀಗಾಗಿಯೇ ಉಭಯ ಅಭ್ಯರ್ಥಿಗಳು ಈ ಹೋಬಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಮಾಡಿದ ಕುದೂರು ಹೋಬಳಿಯಲ್ಲಿ ಮಂಜು ಈಗಲೂ ಕೊಂಚ ಹಿಡಿತ ಉಳಿಸಿಕೊಂಡಿದ್ದಾರೆ. ಆ ಹಿಡಿತ ಸಡಿಲಗೊಳಿಸಿ ಮತದಾರರನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಪ್ರಯತ್ನದಲ್ಲಿ ಇದೆ. ಬಾಲಕೃಷ್ಣರ ಸ್ವಕ್ಷೇತ್ರವಾದ ಮಾಡಬಾಳ್ ಹಾಗೂ ತಿಪ್ಪಸಂದ್ರ ಹೋಬಳಿಗಳಲ್ಲಿ ಅಲ್ಲಲ್ಲಿ ಬಾಲಕೃಷ್ಣ ಅಲೆ ಇದ್ದರೆ, ಕೆಲವು ಹಳ್ಳಿಗಳಲ್ಲಿ ಕುಮಾರಣ್ಣನ ಅಭಿಮಾನಿಗಳು ಹೆಚ್ಚಾಗಿದ್ದಾರೆ. ಕಸಬಾ ಹೋಬಳಿಯಲ್ಲಿ ಇಬ್ಬರು ನಾಯಕರು ಸಮಬಲ ಹೊಂದಿದ್ದಾರೆ. ಕೆಲವೆಡೆ ಹಿಂದಿನಿಂದಲೂ ಬಿಜೆಪಿ ಬೆಂಬಲಿಸುತ್ತಾ ಬಂದಿರುವ ಮತದಾರರು ಇದ್ದಾರೆ.

ಪಟ್ಟಣದ ಒಲವು ಯಾರಿಗೆ?: ಮಾಗಡಿ ಪಟ್ಟಣದ ಮತದಾರರ ಒಲವು ಯಾರ ಕಡೆಗೆ ಹೆಚ್ಚು ಎಂಬುದು ಸ್ಪಷ್ಟವಾಗುತ್ತಿಲ್ಲ. ಸದ್ಯ ಇಲ್ಲಿನ ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಇದ್ದು, ಅದರ ಲಾಭ ಪಡೆಯುವ ನಿರೀಕ್ಷೆಯಲ್ಲಿ ಬಾಲಕೃಷ್ಣ ಇದ್ದಾರೆ. ಆದರೆ ಮಾರುಕಟ್ಟೆ ವಿಷಯದಲ್ಲಿ ಆದ ಗೊಂದಲ ಹಾಗೂ ಅಧ್ಯಕ್ಷರ ಆಯ್ಕೆ ಸಂದರ್ಭ ನಡೆದ ಚಕಮಕಿ ಅವರ ನಿದ್ದೆಕೆಡಿಸಿವೆ. ಪಟ್ಟಣದಲ್ಲಿ ಕುಮಾರಸ್ವಾಮಿ ಪರವಾದ ಅಲೆ ಇದ್ದು, ಅದೇ ತಮಗೆ ವರವಾಗಲಿದೆ ಎಂಬುದು ಮಂಜು ನಂಬಿಕೆಯಾಗಿದೆ.

ಇಲ್ಲಿಯೂ ಬಿಜೆಪಿ ತನ್ನದೇ ಆದ ಮತದಾರರನ್ನು ಹೊಂದಿದ್ದು, ಸಾಧ್ಯವಾದಷ್ಟು ಮತಗಳನ್ನು ತನ್ನತ್ತ ಸೆಳೆಯುವ ನಿರೀಕ್ಷೆ ಇಟ್ಟುಕೊಂಡಿದೆ.

ಪಕ್ಷಾಂತರ ಮತ್ತು ಅನುಕಂಪ: ಸದ್ಯ ಮಾಗಡಿಯ ರಾಜಕಾರಣದಲ್ಲಿ ಹೆಚ್ಚು ಚರ್ಚೆಯಲ್ಲಿ ಇರುವ ವಿಷಯಗಳೆಂದರೆ ಪಕ್ಷಾಂತರ ಮತ್ತು ಅನುಕಂಪದ ಅಲೆ. ಬಾಲಕೃಷ್ಣ ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ ಬಗ್ಗೆ ಜನರಲ್ಲಿ ಮಿಶ್ರ ಅಭಿಪ್ರಾಯವಿದೆ.

‘ಬಾಲು ಮತ್ತು ಕುಮಾರಣ್ಣ ಅಣ್ಣ–ತಮ್ಮಂದಿರಂತೆ ಇದ್ದರು’ ಎಂದು ಕೆಲ ಮತದಾರರು ನೆನಪು ಮಾಡಿಕೊಳ್ಳುತ್ತಾರೆ. ಆದರೆ ತಾನು ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡ ನಂತರ ಕ್ಷೇತ್ರದ ಅಭಿವೃದ್ಧಿಯಲ್ಲಾದ ಬದಲಾವಣೆಯ ಲೆಕ್ಕ ಕೊಡುವ ಬಾಲಕೃಷ್ಣ ತಮ್ಮ ನಡೆಯನ್ನು ಸಮರ್ಥಿಸಿಕೊಳ್ಳುತ್ತಾರೆ.ವೈಯಕ್ತಿಕ ವರ್ಚಸ್ಸಿನ ಜೊತೆಗೆ ಕುಮಾರಸ್ವಾಮಿ ಮತ್ತು ದೇವೇಗೌಡರ ನಾಮಬಲವನ್ನು ನಂಬಿ ಕಣಕ್ಕೆ ಇಳಿದಿರುವ ಮಂಜು ಈ ಬಾರಿ ಅನುಕಂಪದ ಅಲೆ ಕೆಲಸ ಮಾಡಲಿದೆ ಎನ್ನುವ ವಿಶ್ವಾಸದಲ್ಲಿ ಇದ್ದಾರೆ.

ಮಾಗಡಿ ಕ್ಷೇತ್ರ ವಿಶೇಷಗಳು
‌ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮಹಿಳಾ ಮತದಾರರು ಕಡಿಮೆ ಇರುವ ಏಕೈಕ ಕ್ಷೇತ್ರ ಮಾಗಡಿ

ಆರಂಭದಲ್ಲಿ ಪ್ರಜಾಸತ್ತಾತ್ಮಕ ಪಕ್ಷದ ಅಭ್ಯರ್ಥಿಗಳಿಗೆ ಒಲವು ತೋರಿದ್ದ ಇಲ್ಲಿನ ಮತದಾರರು ನಂತರದಲ್ಲಿ ಕಾಂಗ್ರೆಸ್, ಜನತಾ ಪರಿವಾರ, ಜನತಾದಳಕ್ಕೆ ಹೆಚ್ಚು ಮತ ನೀಡಿದ್ದಾರೆ. ಒಮ್ಮೆ ಮಾತ್ರ ಬಿಜೆಪಿ ಅಭ್ಯರ್ಥಿ ಗೆದ್ದಿದ್ದಾರೆ

1957ರಿಂದ ಈವರೆಗೂ ಇಲ್ಲಿ ಒಂದು ಉಪಚುನಾವಣೆಯೂ ನಡೆದಿಲ್ಲ

ಒಟ್ಟು 13 ಸಾರ್ವತ್ರಿಕ ಚುನಾವಣೆಗಳ ಪೈಕಿ 7ರಲ್ಲಿ ಬಾಲಕೃಷ್ಣ ಕುಟುಂಬದವರೇ ಆಯ್ಕೆ ಆಗಿದ್ದಾರೆ

**
ಬಿಡದಿ ಭಾಗದಲ್ಲಿ ಆಗಿನಿಂದಲೂ ಕಾಂಗ್ರೆಸ್‌–ಜೆಡಿಎಸ್‌ ಪೈಪೋಟಿ ಹೆಚ್ಚು. ಈ ಬಾರಿ ನಮ್ಮಲ್ಲಿ ಕುಮಾರಸ್ವಾಮಿ ಅಲೆ ಇದೆ
 – ತಗಡಪ್ಪ, ಬೈರಮಂಗಲ

**
ಬಾಲಕೃಷ್ಣ 20 ವರ್ಷಗಳ ರಾಜಕೀಯ ಅನುಭವ ಹೊಂದಿದ್ದು, ಶಾಸಕರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಪಟ್ಟಣದಲ್ಲಿ ಅವರ ಪರ ಒಲವು ಇದೆ
ಮಂಜುನಾಥ್, ಮಾಗಡಿ

**
ಮಾಗಡಿ ಕ್ಷೇತ್ರದಾದ್ಯಂತ ಇಬ್ಬರ ನಡುವೆ ಪ್ರಬಲ ಪೈಪೋಟಿ ಇದೆ. ಬಿಜೆಪಿಯೂ ಪ್ರಚಾರ ನಡೆಸಿದೆ. ಇಂತಹವರೇ ಗೆಲ್ಲುತ್ತಾರೆ ಎಂದು ಹೇಳಲಾಗದು
– ಶಿವಣ್ಣ, ಗೆಜ್ಜಗಾರಗುಪ್ಪೆ
**

ಕೂಟಗಲ್‌ ಹೋಬಳಿಯವರು ಆಗಿನಿಂದಲೂ ಜೆಡಿಎಸ್ ಬೆಂಬಲಿಸುತ್ತಾ ಬಂದಿದ್ದೇವೆ. ಈ ಬಾರಿಯು ಇಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಅಭ್ಯರ್ಥಿ ಮಾತ್ರ ಬದಲಾಗಿದ್ದಾರೆ
– ನಂಜುಂಡಪ್ಪ, ವಡ್ಡರದೊಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT