ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೊರೊನಾತಂಕದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ, ಸಿದ್ದತೆ ಪರಿಶೀಲಿಸಿದ ಸಚಿವ

ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ
Last Updated 24 ಜೂನ್ 2020, 14:16 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ಸೋಂಕಿನ ಆತಂಕದ ನಡುವೆ ಹಾಗೂ ಆರೋಗ್ಯ ರಕ್ಷಣೆಯ ಸವಾಲಿನೊಂದಿಗೆ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳೆರಡರ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯು ಜೂನ್ 25ರಿಂದ ಆರಂಭಗೊಳ್ಳಲಿದೆ. ಇದಕ್ಕಾಗಿ ಶಿಕ್ಷಣ ಇಲಾಖೆಯಿಂದ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪರ-ವಿರೋಧ ಅಭಿಪ್ರಾಯಗಳ ನಡುವೆ ಪರೀಕ್ಷಾ ಕೇಂದ್ರಗಳಲ್ಲಿ ತಯಾರಿ ನಡೆದಿದೆ. ‘ಸುರಕ್ಷತಾ ಕ್ರಮ ಕೈಗೊಂಡು, ಸುಗಮವಾಗಿ ಪರೀಕ್ಷೆ ನಡೆಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ‘ಇದು ವಿದ್ಯಾರ್ಥಿ ಜೀವನದ ಪ್ರಮುಖ ಪರೀಕ್ಷೆ ಆಗಿರುವುದರಿಂದಾಗಿ ಆತಂಕ ಬಿಟ್ಟು, ಆತ್ಮವಿಶ್ವಾಸದಿಂದ ಎದುರಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ಮುನ್ನಾ ದಿನವಾದ ಬುಧವಾರ ಕೇಂದ್ರಗಳಲ್ಲಿ ಸೋಂಕುನಿವಾರಕ ಸಿಂಪಡಿಸಲಾಯಿತು. ಅಂತರ ಕಾಪಾಡಿಕೊಳ್ಳುವುದಕ್ಕಾಗಿ ಆವರಣ ಹಾಗೂ ಕೊಠಡಿಗಳಲ್ಲಿ ಮಾರ್ಕಿಂಗ್ ಪ್ರಕ್ರಿಯೆ ನಡೆಯಿತು. ಡಿಡಿಪಿಐಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿವಿಧ ಕೇಂದ್ರಗಳಿಗೆ ಭೇಟಿ ನೀಡಿ ತಯಾರಿಯನ್ನು ಪರಿಶೀಲಿಸಿದರು. ಕೆಲವು ಕಡೆಗಳಲ್ಲಿ ಅಣಕು ಪರೀಕ್ಷೆ ನಡೆಸಲಾಗಿದೆ.

36,327 ವಿದ್ಯಾರ್ಥಿಗಳು

ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 7 ವಲಯಗಳಲ್ಲಿ 124 ಕೇಂದ್ರಗಳಿವೆ. 36,327 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮಾಸ್ಕ್‌, ಸ್ಯಾನಿಟೈಸರ್‌ ಒದಗಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

ನಕಲು ತಡೆಯುವ ದೃಷ್ಟಿಯಿಂದ ಎಲ್ಲ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 124 ಸ್ಥಾನಿಕ ಜಾಗೃತ ದಳಗಳು, 104 ಮುಖ್ಯ ಸೂಪರಿಂಟೆಂಡೆಂಟ್‌ಗಳು, 30 ಉಪ ಮುಖ್ಯ ಸೂಪರಿಂಟೆಂಡೆಂಟ್‌ಗಳು, 1,923 ಕೊಠಡಿ ಮೇಲ್ವಿಚಾರಕರು, 44 ಮಾರ್ಗಾಧಿಕಾರಿಗಳು ಹಾಗೂ 65 ಜಿಲ್ಲಾಮಟ್ಟದ ವೀಕ್ಷಕರು ಕಾರ್ಯ ನಿರ್ವಹಿಸಲಿದ್ದಾರೆ.

ಮೂವರಿಗೆ ಅವಕಾಶವಿಲ್ಲ

‘ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 58 ಮಂದಿ ವಿದ್ಯಾರ್ಥಿಗಳು ‘ಕಂಟೈನ್ಮೆಂಟ್‌ ಝೋನ್‌’ (ನಿರ್ಬಂಧಿತ ಪ್ರದೇಶ) ವ್ಯಾಪ್ತಿಯವರಾಗಿದ್ದಾರೆ. ಇವರಲ್ಲಿ 44 ಮಂದಿ ಬೆಳಗಾವಿ ತಾಲ್ಲೂಕು, 3 ಕಿತ್ತೂರು ಹಾಗೂ 11 ಮಂದಿ ಸವದತ್ತಿ ತಾಲ್ಲೂಕಿನವರು. ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ ಹಾಗೂ ಎನ್‌–95 ಮಾಸ್ಕ್‌ಗಳನ್ನು ಒದಗಿಸಲಾಗುವುದು. ಆತ್ಮವಿಶ್ವಾಸ ತುಂಬಲು ಆಪ್ತಸಮಾಲೋಚನೆ ನಡೆಸಿದ್ದೇವೆ’ ಎಂದು ಡಿಡಿಪಿಐ ಆನಂದ ಪುಂಡಲೀಕ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಒಬ್ಬ ಸೋಂಕಿತ ವಿದ್ಯಾರ್ಥಿ ಹಾಗೂ ಕ್ವಾರಂಟೈನ್‌ನಲ್ಲಿರುವ ಇಬ್ಬರಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗಿಲ್ಲ’ ಎಂದು ತಿಳಿಸಿದರು.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 40,834 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. 147 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT