ಮಂಗಳವಾರ, ನವೆಂಬರ್ 19, 2019
29 °C

ಬೆಳಗಾವಿ ಜೈಲಿನಿಂದ ಪರಾರಿಯಾಗಿದ್ದ ಹಂತಕ ಕೈದಿ ತಮಿಳುನಾಡಿನಲ್ಲಿ ಸೆರೆ

Published:
Updated:

ಚಾಮರಾಜನಗರ: ಬೆಳಗಾವಿಯ ಹಿಂಡಲಗಾ ಜೈಲಿನಿಂದ ಏಪ್ರಿಲ್‌ 22ರಂದು ಪರಾರಿಯಾಗಿದ್ದ ಮರಣದಂಡನೆಗೆ ಗುರಿಯಾಗಿದ್ದ ಕೈದಿ ಮುರುಗೇಶನನ್ನು ತಮಿಳುನಾಡು ಪೊಲೀಸರು ಸೋಮವಾರ ಸೇಲಂನಲ್ಲಿ ಬಂಧಿಸಿದ್ದಾರೆ. 

ಕೊಳ್ಳೇಗಾಲದ ಹರಳೆ ಗ್ರಾಮದಲ್ಲಿ 2015ರ ಮೇ 11ರಂದು ಜಮೀನಿನಲ್ಲಿ ಕಬ್ಬ ಕಟಾವು ಮಾಡಲು ಬಂದಿದ್ದ ತಮಿಳುನಾಡಿನ ಐವರನ್ನು ಬರ್ಬರವಾಗಿ ಕೊಂದಿದ್ದ. ಆತನ ಪೈಶಾಚಿಕ ಕೃತ್ಯಕ್ಕೆ ಎಂಟು ವರ್ಷದ ಹೆಣ್ಣುಮಗಳೂ ಬಲಿಯಾಗಿದ್ದಳು. ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಎರಡು ದಿನಗಳ ಬಳಿಕ ಆತನನ್ನು ಬಂಧಿಸಿದ್ದರು. 

ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ 2017ರಲ್ಲಿ ಮುರುಗೇಶನಿಗೆ ಮರಣದಂಡನೆ ವಿಧಿಸಿತ್ತು. 2018ರಲ್ಲಿ ಹೈಕೋರ್ಟ್‌ ಆದೇಶವನ್ನು ಎತ್ತಿ ಹಿಡಿದಿತ್ತು. ನಂತರ ಆತನನ್ನು ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇರಿಸಲಾಗಿತ್ತು. ಇದೇ ಏಪ್ರಿಲ್‌ 22ರಂದು ಪೊಲೀಸರ ಕಣ್ತಪ್ಪಿಸಿ, ಜೈಲಿನ ಗೋಡೆಯಿಂದ ಜಿಗಿದು ಸಿನಿಮೀಯ ಮಾದರಿಯಲ್ಲಿ ಪರಾರಿಯಾಗಿದ್ದ.   

ಆತನ ಪತ್ತೆಗೆ ಬೆಳಗಾವಿ ಹಾಗೂ ಚಾಮರಾಜನಗರ ಜಿಲ್ಲೆಯ ಪೊಲೀಸರು ಬಲೆ ಬೀಸಿದ್ದರು. ನೆರೆಯ ರಾಜ್ಯಗಳ ಪೊಲೀಸರಿಗೂ ಸಂದೇಶ ರವಾನಿಸಿದ್ದರು. 

‘ತಮಿಳುನಾಡಿನ ಸೇಲಂನಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಅಲ್ಲಿನ ಎಸ್‌ಪಿ ಕನ್ನಡಿಗರೇ ಆದ ಗೀತಾ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬೆಳಗಾವಿ ಹಾಗೂ ಕಾರಾಗೃಹದ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಮುರುಗೇಶನನ್ನು ಕರೆ ತರಲು ಸಿದ್ಧತೆ ನಡೆದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.  

‘ಸೇಲಂ ನಗರ ಹಾಗೂ ಸುತ್ತಮುತ್ತ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮುರುಗೇಶನನ್ನು ಪೊಲೀಸರು ವಶಕ್ಕೆ ಪಡೆದು ಪ್ರಶ್ನಿಸಿದಾಗ, ಪರಾರಿಯಾಗಿರುವ ವಿಚಾರವನ್ನು ಬಾಯ್ಬಿಟ್ಟಿದ್ದಾನೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)