ಸಾಬರಮತಿ ಆಶ್ರಮ ಮಾದರಿಯಲ್ಲಿ ರೈಲು ನಿಲ್ದಾಣ ಅಭಿವೃದ್ಧಿ: ಸುರೇಶ ಅಂಗಡಿ

7
ಗಾಂಧಿ ಜಯಂತಿ ಆಚರಣೆ ಕಾರ್ಯಕ್ರಮ

ಸಾಬರಮತಿ ಆಶ್ರಮ ಮಾದರಿಯಲ್ಲಿ ರೈಲು ನಿಲ್ದಾಣ ಅಭಿವೃದ್ಧಿ: ಸುರೇಶ ಅಂಗಡಿ

Published:
Updated:
Deccan Herald

ಬೆಳಗಾವಿ: ಗಾಂಧೀಜಿ ಭೇಟಿ ನೀಡಿದ್ದ ಇಲ್ಲಿನ ರೈಲು ನಿಲ್ದಾಣವನ್ನು ಸಾಬರಮತಿ ಆಶ್ರಮದ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ಸುರೇಶ ಅಂಗಡಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ತಿಲಕವಾಡಿಯ ವೀರಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗಾಂಧೀಜಿ ಅವರು ಸ್ವತಃ ಪೊರಕೆ ಹಿಡಿದು ಸ್ವಚ್ಛತೆಯ ಅರಿವು ಮೂಡಿಸಿದರು. ಈ ರೀತಿ ನಾವೆಲ್ಲರೂ ಸ್ವಯಂಪ್ರೇರಣೆಯಿಂದ ಮುಂದಾದರೆ ಮಾತ್ರ ಸ್ವಚ್ಛ ಭಾರತ ನಿರ್ಮಾಣ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಇತಿಹಾಸ ಅರಿಯಬೇಕು:

‘ಅಂದು ಮಹಾತ್ಮ ಗಾಂಧಿ. ಇಂದು ನರೇಂದ್ರ ಮೋದಿ. ಅವರಿಂದಾಗಿ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುತ್ತಿದೆ. ಈ ಇತಿಹಾಸವನ್ನು ಎಲ್ಲರೂ ಅರಿತುಕೊಳ್ಳಬೇಕು. ಬದಲಾಗಬೇಕು’ ಎಂದು ಆಶಿಸಿದರು.

ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಮಾತನಾಡಿ, ‘ಅನೇಕ ಮಹನೀಯರ ಹೋರಾಟದ ಫಲವಾಗಿ ಸ್ವತಂತ್ರ ಹಾಗೂ ಸುರಕ್ಷಿತ ಭಾರತ ನಿರ್ಮಾಣವಾಗಿದೆ. ಇನ್ಮುಂದೆ ಗಾಂಧೀಜಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಛ ಭಾರತ ನಿರ್ಮಾಣ ಆಗಬೇಕಾಗಿದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಕೋರಿದರು. 

ಜಿಲ್ಲಾ ಪಂಚಾಯ್ತಿ ಸಿಇಒ ಆರ್. ರಾಮಚಂದ್ರನ್ ಮಾತನಾಡಿ, ‘ಸತ್ಯ-ಅಹಿಂಸೆಯ ಮಾರ್ಗದಲ್ಲಿ ನ್ಯಾಯ ಮತ್ತು ಧರ್ಮಕ್ಕಾಗಿ ಹೋರಾಡಿದ ಗಾಂಧೀಜಿ ಅವರ ಬದುಕು ಇಡೀ ವಿಶ್ವಕ್ಕೆ ಒಂದು ಸಂದೇಶವಾಗಿದೆ’ ಎಂದು ಬಣ್ಣಿಸಿದರು. 

‘ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತವೆಂದು ಶೀಘ್ರವೇ ಘೋಷಿಸಲಾಗುವುದು. ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಏಳು ಸಾವಿರ ಶೌಚಾಲಯಗಳ ನಿರ್ಮಾಣವಷ್ಟೇ ಬಾಕಿ ಉಳಿದಿದೆ’ ಎಂದು ಮಾಹಿತಿ ನೀಡಿದರು.

ವಿಚಾರಗಳು ಮಹತ್ವವಾದವು:

ಉಪನ್ಯಾಸ ನೀಡಿದ ನಾಟಕಕಾರ ಡಿ.ಎಸ್. ಚೌಗುಲೆ, ‘ಕಳೆದ ಶತಮಾನದ ಶತಪುರುಷ ಅವರು. ಹಿಂಸೆ, ಕೋಮುವಾದ, ಅಸಹಿಷ್ಣುತೆ ಕಾಡುತ್ತಿರುವ ಈ ಸಂದರ್ಭದಲ್ಲಿ ಗಾಂಧೀಜಿ ವಿಚಾರಗಳು ಮಹತ್ವದ್ದಾಗಿವೆ’ ಎಂದರು.

‘ಗಾಂಧೀಜಿ, ಮನುಷ್ಯನಿಗೆ ಬೇಕಾದ ಮಾನವೀಯ ಮೌಲ್ಯಗಳನ್ನು ಶೋಧಿಸಿಕೊಂಡವರು. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದ ಜನಾಂಗೀಯ ಹೋರಾಟ ಹಾಗೂ ಆದ ಅವಮಾನ ಅವರನ್ನು ಹೆಚ್ಚಾಗಿ ಪ್ರಜ್ಞಾವಂತರನ್ನಾಗಿಸುತ್ತಾ ಹೋಯಿತು. ಅವರಿಗೆ ಸತ್ಯಾಗ್ರಹದ ಮೊದಲ ಅಸ್ತ್ರ ಕೊಟ್ಟವರೇ ಅವರ ಪತ್ನಿ ಕಸ್ತೂರಬಾ ಎನ್ನಬಹುದು. ಸಾರ್ವಜನಿಕ ಜೀವನದಲ್ಲಿ ಇರುವವರು ಪ್ರತಿಫಲ ಬಯಸಬಾರದು ಎನ್ನುವ ಧೋರಣೆ, ಸರಳ ಬದುಕನ್ನು ಪ್ರತಿಪಾದಿಸಿದ ವ್ಯಕ್ತಿ ಮತ್ತು ಹಾಗೆಯೇ ಬದುಕಿದ್ದರು’ ಎಂದು ಸ್ಮರಿಸಿದರು.

ಜೊತೆಯಾಗಿ ಸಾಗಿದರು:

‘ಭಿನ್ನಾಭಿಪ್ರಾಯ ಹೇಳಿದರೆ ಅಪಾಯ ಎನ್ನುವಂತಹ ಪರಿಸ್ಥಿತಿ ಈಗ ಇದೆ. ಆದರೆ, ಗಾಂಧೀಜಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್‌ ಭಿನ್ನಾಭಿಪ್ರಾಯಗಳ ನಡುವೆಯೂ ಜೊತೆಯಲ್ಲಿಯೇ ಸಾಗಿದವರು. ಎಲ್ಲರನ್ನೂ ಒಳಗೊಳ್ಳುವ ಭಾರತ ಗಾಂಧೀಜಿ ಕನಸಾಗಿತ್ತು. ನನಸಾಗಿಸುವ ಜವಾಬ್ದಾರಿ ಜನಪ್ರತಿನಿಧಿಗಳೊಂದಿಗೆ ಎಲ್ಲರ ಮೇಲೂ ಇದೆ’ ಎಂದು ತಿಳಿಸಿದರು.

ವಾರ್ತಾ ಇಲಾಖೆ ಪ್ರಕಟಿಸಿರುವ, ಬೊಳುವಾರು ಮಹಮದ್ ಕುಂಞ ವಿರಚಿತ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ’ ಕಿರುಪುಸ್ತಕ, ಜನಪದ ಹಾಗೂ ಮಾರ್ಚ್‌ ಆಫ್‌ ಕರ್ನಾಟಕ ವಿಶೇಷ ಸಂಚಿಕೆಗಳನ್ನು ಬಿಡುಗಡೆ ಮಾಡಲಾಯಿತು. ಛಾಯಾಚಿತ್ರಗಳು ಹಾಗೂ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಮೇಯರ್‌ ಬಸಪ್ಪ ಚಿಕ್ಕಲದಿನ್ನಿ, ಉಪ ಮೇಯರ್‌ ಮಧುಶ್ರೀ ಪೂಜಾರಿ, ಪಾಲಿಕೆ ಸದಸ್ಯ ಅನಂತರಾವ್ ದೇಶಪಾಂಡೆ, ಪೊಲೀಸ್ ಆಯುಕ್ತ ಡಿ.ಸಿ. ರಾಜಪ್ಪ, ಪಾಲಿಕೆ ಆಯುಕ್ತ ಶಶಿಧರ ಕುರೇರ, ಎಂಜಿನಿಯರ್‌ ಲಕ್ಷ್ಮಿ ನಿಪ್ಪಾಣಿಕರ, ಜಿಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷ ವಿಠ್ಠಲರಾವ್ ಯಾಳಗಿ, ಕಾರ್ಯದರ್ಶಿ ಪಿ.ಬಿ. ನಂದಿಹಳ್ಳಿ, ಉಪಾಧ್ಯಕ್ಷ ರಾಜೇಂದ್ರ ಕಲಘಟಗಿ ಇದ್ದರು. 

ಮಹಾಂತೇಶ ನಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ನಡೆಸಿಕೊಟ್ಟರು. ಸ್ವರಾಂಜಲಿ ಸಂಗೀತ ವಿದ್ಯಾಲಯದ ಮೋರೆ ನೇತೃತ್ವದ ತಂಡ ಹಾಗೂ ಮರಾಠಾ ಮಹಿಳಾ ಭಜನ್ ಸಂಘದ ಸದಸ್ಯರು ಭಜನ್‌ಗಳನ್ನು ಪ್ರಸ್ತುತಪಡಿಸಿದರು. 

ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ ಸ್ವಾಗತಿಸಿದರು. ಸರ್ವಮಂಗಳಾ ಅರಳಿಮಟ್ಟಿ ನಿರೂಪಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !