ಶುಕ್ರವಾರ, ನವೆಂಬರ್ 22, 2019
19 °C

ಮುಂದುವರಿದ ಮಳೆ; ಜಲಾಶಯಗಳು ಭರ್ತಿ

Published:
Updated:

ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಅಲ್ಲಿನ ವಿವಿಧ ಜಲಾಶಯಗಳಿಂದ ರಾಜ್ಯಕ್ಕೆ ಅಂದರೆ ಕೃಷ್ಣಾ ನದಿಗೆ 1.78 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜಿಂದ 1.50 ಲಕ್ಷ ಕ್ಯುಸೆಕ್ ಹಾಗೂ ದೂಧಗಂಗಾ ನದಿಯಿಂದ 27ಸಾವಿರ ಕ್ಯುಸೆಕ್ ಸೇರಿದಂತೆ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ  1.78 ಲಕ್ಷ ಕ್ಯುಸೆಕ್ ನೀರು ಸೇರುತ್ತಿದೆ.

ಖಾನಾಪುರ ಅರಣ್ಯದಲ್ಲಿ‌ ಶನಿವಾರಕ್ಕಿಂತ ಭಾನುವಾರ ಮಳೆಯ ಪ್ರಮಾಣ ಹೆಚ್ಚಾಗಿದೆ. ಮೂಲಗಳ ಪ್ರಕಾರ ಖಾನಾಪುರ ಅರಣ್ಯದಲ್ಲಿ ಸುರಿದ ಮಳೆಯಿಂದ ಮಲಪ್ರಭಾ ನದಿಗೆ ಹರಿದುಬರುವ ನೀರು ಕಣಕುಂಬಿಯಿಂದ 12೦ ಕಿಮೀ ದೂರದ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯ ತಲುಪಲು 18 ಗಂಟೆ ಸಮಯ ಬೇಕು. ಹೀಗಾಗಿ ಇಂದು ಮುಂಜಾನೆವರೆಗೆ ಖಾನಾಪುರ ತಾಲ್ಲೂಕಿನ ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆ‌‌ಯಿಂದ ಸಂಗ್ರಹಗೊಂಡ ನೀರು ಸೋಮವಾರ ನವಿಲುತೀರ್ಥ ತಲುಪಲಿದೆ.

ಭಾನುವಾರ ಮುಂಜಾನೆ ಮಳೆಯ ರಭಸ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಆದರೂ ಮಲಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಕಣಕುಂಬಿಯಿಂದ ಎಂ.ಕೆ ಹುಬ್ಬಳ್ಳಿಯವರೆಗೆ ಒಟ್ಟು 8 ಸೇತುವೆಗಳು ಜಲಾವೃತಗೊಂಡಿವೆ.

ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ.

ಪ್ರತಿಕ್ರಿಯಿಸಿ (+)