ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ, ಕನ್ನಡ ಬನ್ನಿ ನಮ್ಮ ಸಂಗಡ...

ಕರ್ನಾಟಕ ರಾಜ್ಯೋತ್ಸವಕ್ಕೆ ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿರುವ ಕುಂದಾನಗರಿ
Last Updated 30 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಬೆಳಗಾವಿ: ಗಡಿನಾಡಿನಲ್ಲಿ ರಾಜ್ಯ ಭಾಷೆ ಕನ್ನಡದ ಕಂಪು ಪಸರಿಸುವ ನಿಟ್ಟಿನಲ್ಲಿ ಆಯೋಜಿಸುವ ಮಹತ್ವದ ಉತ್ಸವವಾದ ‘ಕರ್ನಾಟಕ ರಾಜ್ಯೋತ್ಸವ’ಕ್ಕೆ ವೇದಿಕೆ ಸಜ್ಜುಗೊಂಡಿದೆ. ‘ಕನ್ನಡ, ಕನ್ನಡ ಬನ್ನಿ ನಮ್ಮ ಸಂಗಡ’ ಎಂದು ಸಾರಲು ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ. ನಗರವು ಮಧುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ.

ಇತರ ಜಿಲ್ಲೆಗಳಿಗೆ ಹೋಲಿಸಿದರೆ, ಇಲ್ಲಿ ನಡೆಯುವ ಉತ್ಸವಕ್ಕೆ ಬಹಳ ಮಹತ್ವವಿದೆ. ಆಗಾಗ ಗಡಿ ವಿಷಯದಲ್ಲಿ ತಕರಾರು ತೆಗೆಯುವ ಮಹಾರಾಷ್ಟ್ರ ಏಕೀಕರಣ ಸಮಿತಿಯವರಿಗೆ (ಎಂಇಎಸ್) ತಿರುಗೇಟು ನೀಡುವ ಹಾಗೂ ಬೆಳಗಾವಿ ಕರ್ನಾಟಕದ್ದು ಎಂದು ಗಟ್ಟಿ ದನಿಯಲ್ಲಿ ಸಾರಿ ಹೇಳುವ ನಿಟ್ಟಿನಲ್ಲಿ ರಾಜ್ಯೋತ್ಸವಕ್ಕೆ ಪ್ರಾಮುಖ್ಯತೆ ಇದೆ. ಹೀಗಾಗಿ, ಜಿಲ್ಲಾಡಳಿತ, ಪಾಲಿಕೆ ಹಾಗೂ ಕನ್ನಡ ಸಂಘಟನೆಗಳ ಸಹಯೋಗದಲ್ಲಿ ಉತ್ಸವವನ್ನು ಸಡಗರದಿಂದ ಆಯೋಜಿಸಲಾಗುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ವರ್ಷ ವಿಜೃಂಭಣೆಯಿಂದ ಉತ್ಸವ ನಡೆಸಲಾಗುತ್ತಿದೆ. ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆಯೂ ಇದೆ.

ನವೀಕರಣ ಕಾಮಗಾರಿ: ರಾಜ್ಯೋತ್ಸವಕ್ಕಾಗಿ ನಗರದ ಪ್ರಮುಖ ಸ್ಥಳವಾದ ರಾಣಿ ಚನ್ನಮ್ಮ ವೃತ್ತದಲ್ಲಿಪಾಲಿಕೆಯು ಕೈಗೆತ್ತಿಕೊಂಡಿರುವ ನವೀಕರಣ ಕಾಮಗಾರಿ ಭರದಿಂದ ಸಾಗಿದೆ. ಚನ್ನಮ್ಮ ಮೂರ್ತಿಗೆ ಹೊಸ ರೂಪ ನೀಡಲಾಗುತ್ತಿದೆ. ಪ್ರತಿಮೆಯ ಸುತ್ತಲೂ ಕಬ್ಬಿಣದ ಗ್ರಿಲ್‌ (ಕಟ್ಟೆ ರೀತಿ) ಅಳವಡಿಸಿ ಅಂದಗೊಳಿಸಲಾಗುತ್ತಿದೆ. ಸುತ್ತಲೂ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದ್ದು, ವೃತ್ತವು ರಾತ್ರಿ ವೇಳೆ ವಿಶೇಷ ಆಕರ್ಷಣೆ ಪಡೆದು ಮಿಂಚುತ್ತಿದೆ. 1960ರಲ್ಲಿ ಪ್ರತಿಮೆ ಸ್ಥಾಪಿಸಿದ ನಂತರ, ದೊಡ್ಡ ಪ್ರಮಾಣದಲ್ಲಿ ನವೀಕರಣ ಕಾಮಗಾರಿಯನ್ನು ಇದೇ ಮೊದಲಿಗೆ ಇಲ್ಲಿ ಕೈಗೊಳ್ಳಲಾಗಿದೆ.

ಜಿಲ್ಲಾಧಿಕಾರಿ ಕಚೇರಿ, ಚನ್ನಮ್ಮ ವೃತ್ತ, ನೆಹರೂ ನಗರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಸ್ವಾಗತ ಕಮಾನುಗಳು ಆಕರ್ಷಿಸುತ್ತಿವೆ; ಕಾರ್ಯಕ್ರಮಕ್ಕೆ ಜನರನ್ನು ಆಹ್ವಾನಿಸುತ್ತಿವೆ. ಹಳದಿ–ಕೆಂಪು ಬಣ್ಣದ ಕನ್ನಡ ಬಾವುಟಗಳು ರಾರಾಜಿಸುತ್ತಿವೆ.

ಅಂಗವಿಕಲರು ಹಾಗೂ ವೃದ್ಧರು ಮೆರವಣಿಗೆ ವೀಕ್ಷಿಸಲು ಅನುವಾಗುವಂತೆ ಚನ್ನಮ್ಮ ವೃತ್ತದಲ್ಲಿ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಎರಡು ವರ್ಷದ ಹಿಂದೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಮ್ಮ ನೇತೃತ್ವದಲ್ಲಿ ಹೋಳಿಗೆ ಊಟದ ವ್ಯವಸ್ಥೆಯನ್ನು ಸರ್ದಾರ್‌ ಮೈದಾನದಲ್ಲಿ ಮಾಡಿಸಿದ್ದರು. ಈ ವರ್ಷವೂ ಸಾರ್ವಜನಿಕರಿಗೆ ಬಿಸಿಯಾದ ಸಿಹಿಯೂಟ ದೊರೆಯಲಿದೆ. ಹೋಟೆಲ್‌ಗಳಲ್ಲಿ ಶೇ 25ರಷ್ಟು ರಿಯಾಯಿತಿ ದರದಲ್ಲಿ ಉಪಾಹಾರ ಸಿಗಲಿದೆ. ಲಡ್ಡುಗಳ ವಿತರಣೆ ಕಾರ್ಯಕ್ರಮವೂ ನಡೆಯಲಿದೆ.

ಹಾಡುಗಳು ವೈರಲ್: ‘ಯಾರಪ್ಪಂದ ಏನೈತಿ ಬೆಳಗಾವಿ ನಮ್ಮದೈತಿ’ ಎಂಬಿತ್ಯಾದಿ ಕನ್ನಡ ಪ್ರೇಮ ಮೆರೆಯುವ ಘೋಷಣೆಗಳುಳ್ಳ ಟಿ–ಶರ್ಟ್‌ಗಳು ಮಾರುಕಟ್ಟೆಗೆ ಬಂದಿವೆ. ಯುವಜನರಿಂದ ಅವುಗಳಿಗೆ ಬೇಡಿಕೆ ಬಂದಿದೆ. ಕೆಲವು ಯುವಕರು ವಿಡಿಯೊ ಸಿದ್ಧಪಡಿಸಿ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲಿ ಹಾಕಿದ್ದಾರೆ. ಪ್ರೊಮೊ ಹಾಗೂ ಹಾಡುಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಸದ್ದು ಮಾಡುತ್ತಿವೆ. ಕರವೇಯಿಂದಲೂ ಕೆಲವು ವಿಡಿಯೊಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳೂ ಹಬ್ಬುತ್ತಿವೆ; ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ.

‘ಕನ್ನಡ ಸಂಘಟನೆಗಳ 70 ಹಾಗೂ ಸರ್ಕಾರದ ವಿವಿಧ ಇಲಾಖೆಗಳ 20 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ಕನ್ನಡ ನಾಡಿನ ಪರಂಪರೆ, ವೈಭವ, ಇತಿಹಾಸ ಸಾರಲಿವೆ. ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ, ಬೆಳವಡಿ ಮಲ್ಲಮ್ಮನ ಸೈನ್ಯ, ಹಲಸಿ, ವಿಜಯನಗರ ಸಾಮ್ರಾಜ್ಯ ಮೊದಲಾದವುಗಳನ್ನು ಬಿಂಬಿಸುವ ರೂಪಕಗಳು ವಿಶೇಷ ಮೆರುಗು ನೀಡಲಿವೆ. ಹಿಂದಿನ ವರ್ಷಗಳಿಗಿಂತ ಅದ್ಧೂರಿಯಾಗಿ ಮೆರವಣಿಗೆ ನಡೆಯಲಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT